ಅರುಣ್ ಸಿ ಬಡಿಗೇರ್
ಬೆಂಗಳೂರು: ರಾಜ್ಯದಲ್ಲಿ 2500 ಕಿಮೀ ಸಂಚರಿಸಿ ಪಬ್ಲಿಕ್ ಟಿವಿಯ ತಂಡ ಪ್ರತ್ಯಕ್ಷ ವರದಿ ಮಾಡಿತು. ಈ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಕಂಡಿರೋ ಬರಗಾಲದ ಸ್ಥಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನವಿದು.
ಬಿಂದಿಗೆ ತುಂಬೋಕೆ ಹತ್ತಾರು ಸಲ ಬಾವಿ ಸೇದಬೇಕು:
ಈ ಗ್ರಾಮದಲ್ಲಿರೋದು ಒಂದೇ ಒಂದು ಬಾವಿ. ಬೇಸಿಗೆ ಬಂದ್ರೆ ಈ ಬಾವಿಯ ನೀರು ತಳ ಸೇರುತ್ತೆ. ಈ ನೀರನ್ನ ಸೇದಿ ಬಿಂದಿಗೆ ತುಂಬಿಕೊಳ್ಳಬೇಕು ಅಂದ್ರೆ ಹತ್ತಾರು ಬಾರಿ ಬಾವಿಯಿಂದ ನೀರು ಸೇದಬೇಕು. ಇಂತಹ ಬಾವಿ ಇರೋದು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮ. ಇಲ್ಲಿರೋ ಬಾವಿಯಲ್ಲಿ ಒಂದು ಸಲಕ್ಕೆ ಒಂದು ಬಿಂದಿಗೆಯಲ್ಲಿ ನೀರು ಬರೋದು ಒಂದು ಚೊಂಬಿನಷ್ಟು ಮಾತ್ರ. ಇದೇ ನೀರನ್ನ ಮನೆಗೆ ಒಯ್ದು ಶುದ್ಧಿಕರಿಸಿ ನಂತ ತಿಳಿಯಾದ ಮೇಲೆ ನೀರು ಕುಡಿಬೇಕಾದ ಸ್ಥಿತಿ ಇದೆ. ಈ ಬಾವಿ ಹಾಗೂ ಈ ಗ್ರಾಮದಲ್ಲಿ ಬತ್ತಿ ಹೋಗಿರೋ ಕರೆಯೇ ಗ್ರಾಮಕ್ಕೆ ಜೀವಜಲದ ಮೂಲ. ಆದ್ರೆ, ಈಗ ಈ ಗ್ರಾಮದ ಜನರ ದಾಹ ತಿರಿಸೋಕೆ ಉಳಿದಿರೋದು ಅಲ್ಪ ಪ್ರಮಾಣದ ನೀರು ಮಾತ್ರ. ಇಂತಹ ಸ್ಥಿತಿ ಬೆಂಗಳೂರಿಗರಿಗೆ ಬಂದೊದಗಿದಿಯಾ..?
Advertisement
Advertisement
6 ವರ್ಷದಿಂದ ಟ್ಯಾಂಕರ್ ನೀರೇ ಗತಿ:
ಈ ಊರಿಗೆ 6 ವರ್ಷದಿಂದ ಟ್ಯಾಂಕರ್ ನೀರು ಗತಿ. ಇಂತಹ ದುಸ್ಥಿತಿ ಬಂದೊದಗಿರೋದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮಕ್ಕೆ. ಹುಬ್ಬಳ್ಳಿ ತಾಲೂಕಿನಿಂದ 25 ಕಿಮೀ ದೂರದಲ್ಲಿರೋ ಈ ಗ್ರಾಮಕ್ಕೆ ಟ್ಯಾಂಕರ್‍ನಲ್ಲಿ ನೀರು ತಂದು ನೀರನ್ನ ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ಬಂದಾಗ ಇಲ್ಲಿ ನೀರಿಗಾಗಿ ಹೊಡೆದಾಟ ಕೂಡ ನಡೆಯುತ್ತೆ. ಈ ಗ್ರಾಮದಲ್ಲಿ ದೊಡ್ಡ ಕೆರೆ ಇದ್ದರು ಸಹ ಈ ಕೆರೆ ತುಂಬಿಸಬೇಕು ಅನ್ನೋ ಕನಿಷ್ಟ ಜ್ಞಾನವೂ ಈ ಕ್ಷೇತ್ರದ ಶಾಸಕರಿಗೆ ಬಂದಿಲ್ಲ. ಬದಲಾಗಿ 6 ವರ್ಷದಿಂದ ಗ್ರಾಮಕ್ಕೆ ಟ್ಯಾಂಕರ್‍ನಿಂದಲೇ ನೀರು ಸರಬರಾಜು ಮಾಡುತ್ತಿದ್ದಾರೆ. ಈ ರೀತಿಯ ಸ್ಥಿತಿ ಬೆಂಗಳೂರಿನಲ್ಲಿರುವ ಜನರಿಗೆ ಬಂದೊದಗಿದಿಯಾ…?
Advertisement
Advertisement
ಕಣ್ಣೀರಿಡುತ್ತಿರೋ ಮಕ್ಕಳು:
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಸ್ಥಿತಿಯನ್ನ ಕೇಳಿದ್ರೆ ಕರುಳು ಹಿಂಡಿದಂತಾಗುತ್ತೆ. ಇಲ್ಲಿ ಮಕ್ಕಳು ಶಾಲೆಗೆ ಹೋದರು ಹೊಡಿಸಿಕೊಳ್ತಾರೆ, ಹೋಗದೆ ಇದ್ದರು ಬೈಯಿಸಿಕೊಳ್ತಾರೆ. ಈ ಹಳ್ಳಿಗೆ ಮಧ್ಯಾಹ್ನ 3 ರಿಂದ 6 ಮತ್ತು ಮಧ್ಯರಾತ್ರಿ 2 ರಿಂದ 6 ಗಂಟೆ ವರೆಗೆ ಮಾತ್ರ ವಿದ್ಯುತ್ ಪೂರೈಕೆ. ಹಾಗಾಗಿ ಬೆಳಿಗ್ಗೆ ಎದ್ದು ಶಾಲೆಗೆ ಹೋದ ಮಕ್ಕಳು ಮಧ್ಯಾಹ್ನ ಎಷ್ಟೊತ್ತಿದ್ರು ಶಾಲೆಗೆ ಚಕ್ಕರ್ ಹೊಡೆದು ಮನೆಗೆ ಹೋಗಲೇ ಬೇಕು. ಯಾಕಂದ್ರೆ ಕರೆಂಟ್ ಬಂದಾಗಲೇ ಈ ಗ್ರಾಮಕ್ಕೆ ನೀರು ಬರೋದು. ಅದು ಗ್ರಾಮದಿಂದ 2 ಕಿ.ಮೀ ದೂರದಲ್ಲಿ. ಮನೆಗೆ ಹೋಗಿದ್ದೆ ತಡ ಬಿಂದಿಗೆ ಹಿಡಿದುಕೊಂಡು ಉರಿಬಿಸಿಲಿನಲ್ಲಿ ಊರಾಚೆ ನೀರು ತರಲು ಹೋಗಬೇಕು. ಹೋಗದೆ ಇದ್ದರೆ ಅಪ್ಪ ಅಮ್ಮ ಹೊಡಿತಾರೆ. ಶಾಲೆ ಬಿಟ್ಟು ಮನೆಗೆ ಹೋಗಿದ್ದಕ್ಕೆ ಶಾಲೆಯ ಶಿಕ್ಷಕರು ಬೈಯ್ತಾರೆ. ಇವರಿಬ್ಬರ ನಡುವೆ ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಇಂತಹ ಸ್ಥಿತಿ ಬೆಂಗಳೂರಿನಲ್ಲಿರೋ ಮಕ್ಕಳಿಗೆ ಬಂದಿದಿಯಾ..? ಯೋಚಿಸಿ ನೋಡಿ…
ಈ ಊರಿಗೆ ಹೆಣ್ಣು ಕೊಡಲ್ಲ:
ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಸ್ಥಿತಿ ಇಲ್ಲಿಗೆ ಮುಗಿಯಲ್ಲ. ಈ ಗ್ರಾಮಕ್ಕೆ ನೀರಿನ ಸಮಸ್ಯೆ ಇರೋದ್ರಿಂದ ಗ್ರಾಮದ ಯಾವ ಯುವಕನಿಗೂ ಹೆಣ್ಣು ಕೊಡಲ್ವಂತೆ. ಹಾಗೋ ಹೀಗೋ ಮನವೊಲಿಸಿ ಮದುವೆ ಮಾಡಿದ ಮೇಲೆ ಆ ಹೆಣ್ಮಕ್ಕಳು ನೀರಿಗಾಗೆ ಅಲೆದಾಡಬೇಕು ಅಂತಾ ಖುದ್ದು ಈ ಗ್ರಾಮದ ಹೆಣ್ಮಕ್ಕಳೆ ತಮ್ಮ ಗೋಳು ಹೇಳಿಕೊಳ್ತಾರೆ. ಇದಲ್ಲದೆ ಕೆಲವು ಮಹಿಳೆಯರಿಗೆ ಕುಡಿದು ಬಂದ ಗಂಡ ನೀರು ಯಾಕೆ ತಂದಿಲ್ಲ ಅಂತಾ ಕಾಲಿನಿಂದ ಸಿಕ್ಕಸಿಕ್ಕ ಜಾಗಕ್ಕೆ ಒದಿತಾರಂತೆ. ಇಂತಹ ಸ್ಥಿತಿ ಬೆಂಗಳೂರಿನಲ್ಲಿದಿಯಾ.? ಒಂದು ಸಲ ಈ ಹಳ್ಳಿಯಲ್ಲಿದ್ರೆ ಹೇಗಿರುತ್ತೆ ಅಂತಾ ಬೆಂಗಳೂರಿನ ಜನ ಯೋಚಿಸಿ ನೀರು ಬಳಸಿ.