ಮಡಿಕೇರಿ : ಮುಂಗಾರು ಮಳೆ (Monsoon) ಕೊರತೆಯಿಂದ ಕೊಡಗು ಜಿಲ್ಲೆಯ (Kodagu)ಏಕೈಕ ಜಲಾಶಯವಾದ ಹಾರಂಗಿ ಜಲಾಶಯದ (Harangi Reservoir) ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.
ಮಳೆಗಾಲ ಶುರುವಾಗಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಸೋಮವಾರದಿಂದ ಉರಿ ಬಿಸಿಲು ಹೆಚ್ಚಾಗಿದ್ದು, ಮಳೆಗಾಲದಲ್ಲಿಯೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮ ಹಾರಂಗಿ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ.
ಪ್ರಸ್ತುತ ಹಾರಂಗಿ ಜಲಾಶಯದ ಒಳಹರಿವು 285 ಕ್ಯೂಸೆಕ್ ಮಾತ್ರ. ಜಲಾಶಯದಿಂದ 180 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯಕ್ಕೆ 4,736 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 4,583 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಒಳಹರಿವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.ಇದನ್ನೂ ಓದಿ: ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿ ಮಾಡುವಂತಿಲ್ಲ: ಕೇಂದ್ರ ಆದೇಶ
ಹಾರಂಗಿ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ ಇದೆ. ಆದರೆ ಪ್ರಸ್ತುತ ಜಲಾಶಯದಲ್ಲಿ ಕೇವಲ 3.0 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಮಳೆ ಕೊರತೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾರಂಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ಸೋಮವಾರಪೇಟೆ, ಹಾಸನ ಹಾಗೂ ಮೈಸೂರು ಭಾಗದ ಗ್ರಾಮೀಣ ಪ್ರದೇಶಗಳಲ್ಲೂ ಚಿಂತೆ ಮೂಡಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾವೇರಿ ನದಿಯ ನೀರಿನ ಲಭ್ಯತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ
