ಬೆಂಗಳೂರು: ಪೊಲೀಸ್ ಇಲಾಖೆ ದಾಖಲೆ ನಿರ್ವಹಣೆಯ ಲೋಪದಿಂದ ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳನ್ನು ಕೈಬಿಟ್ಟಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ನಗರ ಪೊಲೀಸ್ ಆಯುಕ್ತ (Police Commissioner) ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಪ್ರತಿಕ್ರಿಯಿಸಿದ್ದಾರೆ.
7 ರೌಡಿಶೀಟರ್‌ಗಳನ್ನು ಯಾವ ಕಾರಣಕ್ಕೆ ಕೈಬಿಡಲಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆಯಿಂದ ಯಾವುದೇ ಕರ್ತವ್ಯಲೋಪ ಆಗಿದೆಯೇ ಎಂಬುದನ್ನೂ ತನಿಖೆ ಮಾಡಲಾಗುತ್ತದೆ. ರೌಡಿಶೀಟರ್‌ಗಳ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಹಿಂದೆ ಪೊಲೀಸ್ ದೂರು ಪ್ರಾಧಿಕಾರವು ಸೈಲೆಂಟ್ ಸುನಿಲ್, ಒಂಟೆ ರೋಹಿತ್ ಸೇರಿದಂತೆ ಒಟ್ಟು 66 ರೌಡಿಶೀಟರ್‌ಗಳನ್ನು ರೌಡಿಪಟ್ಟಿಯಿಂದ ಕೈಬಿಡುವಂತೆ ಆದೇಶಿಸಿತ್ತು. ಹೈಕೋರ್ಟ್ ನೀಡಿದ್ದ ಮಾರ್ಗಸೂಚಿಗಳ ಪ್ರಕಾರ ಅಗತ್ಯ ದಾಖಲೆಗಳು ಮತ್ತು ಸಮರ್ಪಕ ಕಾರಣಗಳನ್ನು ಪೊಲೀಸರು ಸಲ್ಲಿಸದಿರುವುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಅಪ್ರಾಪ್ತ ಅಕ್ಕ-ತಂಗಿ ಮೇಲೆ ಅತ್ಯಾಚಾರ – ಪೋಕ್ಸೊ ಪ್ರಕರಣ ದಾಖಲು, ಕಿರಾತಕ ಅರೆಸ್ಟ್
2022ರಲ್ಲಿ ಹೈಕೋರ್ಟ್ (high court) ರೌಡಿಶೀಟ್ ತೆರೆಯುವ ಹಾಗೂ ಮುಂದುವರಿಸುವ ಪ್ರಕ್ರಿಯೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿತ್ತು. ರೌಡಿಪಟ್ಟಿಗೆ ಹೆಸರು ಸೇರಿಸುವುದು, ಮುಂದುವರಿಸುವುದು ಅಥವಾ ಕೈಬಿಡುವ ಪ್ರತಿಯೊಂದು ಹಂತದಲ್ಲೂ ಸೂಕ್ತ ದಾಖಲೆ ಮತ್ತು ಕಾನೂನುಬದ್ಧ ಪ್ರಕ್ರಿಯೆ ಕಡ್ಡಾಯ ಎಂದು ಸೂಚಿಸಿತ್ತು. ಆದರೆ ಹಲವು ಪ್ರಕರಣಗಳಲ್ಲಿ ಈ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರಸ್ತುತ ರೌಡಿಶೀಟರ್‌ಗಳ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಮುಂದುವರಿಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಹಾವಳಿ; ತ್ಯಾಜ್ಯ ವಿಲೇವಾರಿಯಲ್ಲಿ ಪ್ರಾಧಿಕಾರ ಎಡವಟ್ಟು
