– ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಕೆ
– ಫೇಸ್ ಸ್ಕ್ಯಾನ್ ಮಾಡಿಯೇ ಪ್ರವೇಶ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಒಟ್ಟು 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (Civil Police Constable) ಹುದ್ದೆಗಳ ಭರ್ತಿಗೆ ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಯನ್ನು ಭಾರಿ ಸಂಖ್ಯೆ ಅಂದರೆ 4,54,532 ಮಂದಿ ಬರೆಯುತ್ತಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಉಳಿಕ ಮೂಲ ವೃಂದದ 3,395 ಹುದ್ದೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಉಳಿಕ ಮೂಲ ವೃಂದದ 3,77,861 ಹಾಗೂ ಕಲ್ಯಾಣ ಕರ್ನಾಟಕ ವೃಂದದ 76,684 ಮಂದಿ ಅರ್ಜಿ ಸಲ್ಲಿಸಿದ್ದು, ಅಷ್ಟೂ ಮಂದಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಆ.2ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12ರವರೆಗೆ ರಾಜ್ಯದ ಎಲ್ಲರಿಗೂ ಹಾಗೂ ಸಂಜೆ 4 ರಿಂದ 5.30ರವರೆಗೆ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಈ ಬಾರಿಯೂ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಲಾಗುತ್ತಿದೆ. ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕವೇ ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಗುತ್ತದೆ. ಪರೀಕ್ಷಾ ಕೇಂದ್ರ ಹಾಗೂ ಕೊಠಡಿಯಲ್ಲಿ ಸಿಸಿಟಿವಿ ಕಣ್ಗಾವಲು ಇರುತ್ತದೆ. ತಪಾಸಣೆ ಮತ್ತು ಸಿಸಿಟಿವಿ ಕಣ್ಗಾವಲಿನ ಜವಾಬ್ದಾರಿಯನ್ನು ಆಯಾ ಜಿಲ್ಲಾ ಪೊಲೀಸರು ನಿರ್ವಹಣೆ ಮಾಡಲಿದ್ದಾರೆ. ಒಟ್ಟಾರೆ ಪರೀಕ್ಷಾ ಮೇಲ್ವಿಚಾರಣೆಯನ್ನು ಆಯಾ ಜಿಲ್ಲಾಧಿಕಾರಿಗಳೇ ನೋಡಲಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ರಕ್ತಸಿಕ್ತ ಸಮವಸ್ತ್ರ, ಹಲ್ಲೆಯಿಂದ ತಲೆಗೆ ಹೊಲಿಗೆ: ಜಂತರ್ ಮಂತರ್‌ನಲ್ಲಿ ಪೊಲೀಸರ ಮೇಲಾದ ದೌರ್ಜನ್ಯದ ಬಗ್ಗೆ ಕುಟುಂಬಸ್ಥರ ನೋವಿನ ನುಡಿ
ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಕಾರ್ಯನಿರ್ವಹಣೆಗೆ ನಿರ್ಬಂಧ ವಿಧಿಸಲು ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರ ಹಾಗೂ ಕೊಠಡಿಗಳ ಮೇಲೆ ತೀವ್ರ ನಿಗಾ ಇಡಲು ವೆಬ್ ಕಾಸ್ಟಿಂಗ್ ಮಾಡುತ್ತಿದ್ದು, ಅದನ್ನು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳೇ ಮೇಲ್ವಿಚಾರಣೆ ನಡೆಸಲಿದ್ದಾರೆ. ಅಲ್ಲದೆ, ಪ್ರಾಧಿಕಾರದ ಕಚೇರಿಯಲ್ಲಿ ಸ್ಥಾಪಿಸಿರುವ ಕಮಾಂಡ್ ಸೆಂಟರ್ ನಿಂದಲೂ ನಿರ್ವಹಣೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಮೊಬೈಲ್, ಕ್ಯಾಮರಾ, ಬ್ಲೂಟೂತ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿಷೇಧ ಇದೆ. ಯಾವುದೇ ಕೈಗಡಿಯಾರ ಕೂಡ ಧರಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಶ್ರವಣ ದೋಷ ಇದ್ದು, ವಿಶೇಷ ಶ್ರವಣ ಸಾಧನ ಬಳಸುವ ಅಭ್ಯರ್ಥಿಗಳು ಎರಡು ಗಂಟೆ ಮುಂಚೆಯೇ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಂತಹವರು ಯುಡಿಐಡಿ ಕಾರ್ಡ್ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಕೂಡ ತಂದಿರಬೇಕು ಎಂದು ಅವರು ಹೇಳಿದರು. ಇದನ್ನೂ ಓದಿ: ಸುಪ್ರೀಂ ಮೆಟ್ಟಿಲೇರಿದ್ದ ಸಿಎಂ ಒಮರ್ ಅಬ್ದುಲ್ಲಾಗೆ ಕೊನೆಗೂ ಪತ್ನಿಯಿಂದ ಸಿಕ್ತು ವಿಚ್ಛೇದನ
ಯಾವುದಾದರೂ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸುವವರು ಎರಡು ಗಂಟೆ ಮುಂಚೆಯೇ ಬಂದ ತಪಾಸಣೆಗೆ ಒಳಗಾಗಬೇಕಾಗುತ್ತದೆ. ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದರು.
ಓಎಂಆರ್ ಸ್ಕ್ಯಾನಿಂಗ್ ಗೆ ವಿಶೇಷ ವ್ಯವಸ್ಥೆ:
ಇದೇ ಮೊದಲ ಬಾರಿಗೆ ಓಎಂಆರ್ ಪ್ರತಿಗಳ ಸ್ಕ್ಯಾನಿಂಗ್ ಅನ್ನು ಬೆಂಗಳೂರು ಅಲ್ಲದೆ 6 ಕಡೆ ಮಾಡಲಾಗುತ್ತಿದೆ. ಪರೀಕ್ಷೆ ಮುಗಿದ ಕೂಡಲೇ ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ, ರಾಯಚೂರು ನಗರಗಳಲ್ಲಿ ಓಎಂಆರ್ ಪ್ರತಿ ಸ್ಕ್ಯಾನ್ ಮಾಡಿ, ವೆಬ್ ಸೈಟ್ ಗೆ ಅಪ್‌ಲೋಡ್ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪ್ರಸನ್ನ ಅವರು ತಿಳಿಸಿದರು.
