ನವದೆಹಲಿ: ಸಿಎಂ ಆಗಿ ಡಿ.ಕೆ.ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ನಿಗದಿಯಾಗಿದ್ದು, ಸಂಪುಟ ರಚನೆ ಕಸರತ್ತು ಮುಂದುವರಿದಿದೆ. ದೆಹಲಿಯಲ್ಲಿ ಇಂದು ಸಚಿವರ ಪಟ್ಟಿ ಫೈನಲ್ ಆಗಲಿಲ್ಲ. ಹೈಕಮಾಂಡ್ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಇಂದು ಕೆ.ಸಿ ವೇಣುಗೋಪಾಲ್, ರಣದೀಪ್ ಸುರ್ಜೆವಾಲ್ ಮಾತ್ರ ಸಭೆ ನಡೆಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪಟ್ಟಿಗಳನ್ನು ಹಿಡಿದು ಪ್ರಾಥಮಿಕ ಸಭೆ ನಡೆಸಿದ್ದಾರೆ. ನಾಳೆ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ನಿರ್ಧಾರಿಸಲಾಗಿದೆ.
ನಾಳೆ ಸಿದ್ದು-ಡಿಕೆ ಜೊತೆಗೆ ಚರ್ಚೆ ಬಳಿಕ ಕ್ಯಾಬಿನೆಟ್‌ಗೆ ಅಂತಿಮ ರೂಪ ಕೊಡಲಾಗುವುದು. ಕಾಂಗ್ರೆಸ್ ಕಚೇರಿ ಇಂದಿರಾ ಭವನದಲ್ಲಿ ಬೆಳಗ್ಗೆ ಹತ್ತು ಗಂಟೆಯ ಬಳಿಕ ಸಭೆ ನಡೆಯುವ ಸಾಧ್ಯತೆ ಇದೆ. ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ನಡೆಯುತ್ತಿದ್ದ ಸಭೆ ಅಂತ್ಯವಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಕೆ.ಸಿ.ವೇಣುಗೋಪಾಲ್ ನಿವಾಸದಿಂದ ಸಿದ್ದರಾಮಯ್ಯ ತೆರಳಿದರು.
ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಸಚಿವ ಸ್ಥಾನ, ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಚರ್ಚೆ ನಡೆಸಿರುವ ಮಾಹಿತಿ ಇದೆ.
ನಾಳೆ ಬೆಳಗ್ಗೆ ಹನ್ನೊಂದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಹೈಕಮಾಂಡ್ ನಾಯಕರ ಜೊತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಭೆ ನಡೆಸಲಿದ್ದಾರೆ. ನಾಳೆಯ ಈ ಸಭೆಯಲ್ಲಿ ಬಹುತೇಕ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ ಪರಿಷತ್, ರಾಜ್ಯಸಭೆ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆಯೂ ಇದೆ.
