Thursday, 22nd August 2019

ಜೆಎನ್‍ಯು ವಿದ್ಯಾರ್ಥಿನಿ ರೇಪ್‍ಗೈದು, ರಸ್ತೆ ಮೇಲೆ ಎಸೆದ ಕ್ಯಾಬ್ ಚಾಲಕ

– ವರದಿ ನೀಡುವಂತೆ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗದಿಂದ ನೋಟಿಸ್

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ವಿದ್ಯಾರ್ಥಿನಿಯ ಮೇಲೆ ಕ್ಯಾಬ್ ಚಾಲಕನೊಬ್ಬ ಅತ್ಯಾಚಾರ ಎಸಗಿ, ಐಐಟಿ ರಸ್ತೆ ಬಳಿ ಎಸೆದು ಹೋದ ಘಟನೆ ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತೆಯು 20 ವರ್ಷದವಳಾಗಿದ್ದು, ಜೆಎನ್‍ಯುನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ದೆಹಲಿಯ ಪಂಚಕುಯಾನ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸ್ನೇಹಿತ ಆಯೋಜಿಸಿದ್ದ  ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಮನೆ ಮರಳುತ್ತಿದ್ದಾಗ ಘಟನೆ ನಡೆದಿದೆ.

ಪಾರ್ಟಿ ಮುಗಿಸಿಕೊಂಡು ಕ್ಯಾಬ್ ಹತ್ತಿದ ವಿದ್ಯಾರ್ಥಿನಿ ಮೇಲೆ ಚಾಲಕ ಅತ್ಯಾಚಾರ ಎಸಗಿ, ಬಳಿಕ ಐಐಟಿ ಬಳಿ ಎಸೆದು ಪರಾರಿಯಾಗಿದ್ದಾನೆ. ಕ್ಯಾಬ್‍ನಿಂದ ಬಿದ್ದ ಪರಿಣಾಮ ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಂಡಿದ್ದಳು. ರಸ್ತೆಯ ಮೇಲೆ ಬಿದ್ದಿದ್ದ ವಿದ್ಯಾರ್ಥಿನಿಯನ್ನು ನೋಡಿದ ಕೆಲವರು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವಿದ್ಯಾರ್ಥಿನಿ ಬಳಿ ಇದ್ದ ಐಡಿ ಕಾರ್ಡ್ ಸಹಾಯದಿಂದ ಗುರುತು ಪತ್ತೆಹಚ್ಚಿ ಚಿಕಿತ್ಸೆಯ ನಂತರ ಜೆಎನ್‍ಯು ಕ್ಯಾಂಪಸ್‍ಗೆ ಸೇರಿಸಿದ್ದಾರೆ.

ಸಂತ್ರಸ್ತೆಯು ಹಾಸ್ಟೆಲ್ ವಾರ್ಡನ್ ಮತ್ತು ಸ್ನೇಹಿತರಿಗೆ ಘಟನೆಯ ಬಗ್ಗೆ ವಿವರಿಸಿದ್ದು, ಈ ಸಂಬಂಧ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ವಿದ್ಯಾರ್ಥಿನಿಯು ಪಂಚಕುಯಾನ್ ಪ್ರದೇಶದಿಂದ ಕ್ಯಾಬ್ ಹತ್ತಿದ್ದಳು. ಹೀಗಾಗಿ ಅಲ್ಲಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ತನಿಖೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ವಿದ್ಯಾರ್ಥಿನಿ ಕ್ಯಾಬ್ ಹತ್ತಿದ ಬಳಿಕ ಆರೋಪಿ ಡ್ರಗ್ಸ್ ಇಂಜೆಕ್ಟ್ ಮಾಡಿದ್ದಾರೆ. ಹೀಗಾಗಿ ಕ್ಯಾಬ್‍ನಲ್ಲಿ ಯಾರು ಇದ್ದರು, ಏನಾಯಿತು ಅಂತ ಆಕೆಗೆ ನೆನಪಿಗೆ ಬರುತ್ತಿಲ್ಲ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಕ್ಯಾಬ್ ಹತ್ತಿದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಪೊಲೀಸರು ಪರಿಶೀಲನೆ ಮಾಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಈ ಬೆನ್ನಲ್ಲೇ ಪ್ರಕರಣದ ಕುರಿತು ವರದಿ ನೀಡುವಂತೆ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗವು ನೋಟಿಸ್ ಜಾರಿ ಮಾಡಿದೆ.

Leave a Reply

Your email address will not be published. Required fields are marked *