ಬಳ್ಳಾರಿ: ದೇಶದ ಎರಡನೇ ಅತೀ ದೊಡ್ಡ ಖಾಸಗಿ ವಲಯದ ಉಕ್ಕು ಕಂಪನಿಯೆಂಬ ಹೆಗ್ಗಳಿಕೆಯಿರುವ ಜೆಎಸ್‍ಡಬ್ಲ್ಯೂನ ಜಿಂದಾಲ್ ಕಾರ್ಖಾನೆ (Jindal Factory) 20 ಕೋಟಿಗೂ ಹೆಚ್ಚು ತೆರಿಗೆ (Tax) ಬಾಕಿ ಉಳಿಸಿಕೊಂಡಿದೆ. ಇದೀಗ ತೆರಿಗೆ ವಸೂಲಿ ಮಾಡಲು ಸ್ಥಳೀಯ ಆಡಳಿತ ಸರ್ಕಸ್ ಮಾಡುತ್ತಿದೆ.
ಸಂಡೂರು ತಾಲೂಕಿನ ತೋರಣಗಲ್ ಬಳಿಯಿರುವ ಜಿಂದಾಲ್ ಕಾರ್ಖಾನೆ ಆಸ್ತಿ ಮತ್ತು ಅಭಿವೃದ್ಧಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಪಾವತಿಸುವಂತೆ ಹಲವು ಬಾರಿ ನೋಟಿಸ್ ಕೊಟ್ಟರೂ, ಜಿಂದಾಲ್ ಆಡಳಿತ ಮಂಡಳಿ ಕ್ಯಾರೆ ಎನ್ನುತ್ತಿಲ್ಲ. ಈ ತೆರಿಗೆಯನ್ನು ವಸೂಲಿ ಮಾಡುವುದು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: ಕೇಳಿದಷ್ಟು ದುಡ್ಡು ಕೊಡದಿದ್ರೆ ಮಗನ ಮದ್ವೆ ದಿನವೇ ನಿನ್ನ ಮುಗಿಸಿಬಿಡ್ತೀನಿ – ಭೂಗತ ಪಾತಕಿ ಹೆಸರಲ್ಲಿ ಉದ್ಯಮಿಗೆ ಬೆದರಿಕೆ
1994 ರಲ್ಲಿ ತೋರಣಗಲ್ ಬಳಿ ವಿಜಯನಗರ ಸ್ಟೀಲ್ ಲಿಮಿಟೆಡ್ ಹೆಸರಲ್ಲಿ ಈ ಕಾರ್ಖಾನೆ ಸ್ಥಾಪಿತವಾಗಿದೆ. ಸಾವಿರಾರು ಎಕರೆಯಲ್ಲಿ ತನ್ನ ಇಂಡಸ್ಟ್ರಿಯನ್ನು ವಿಸ್ತಾರ ಮಾಡಿಕೊಂಡಿರುವ ಈ ಕಾರ್ಖಾನೆ, ಕಬ್ಬಿಣ, ಸಿಮೆಂಟ್, ಪೇಂಟ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿದೆ.
ಜಿಂದಾಲ್ ಕಾರ್ಖಾನೆಯ ಈ ನಡೆಯ ಕುರಿತು ಮಾತನಾಡಿರುವ ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ, ಸ್ಥಳೀಯರಿಗೆ ಉದ್ಯೋಗವೂ ನೀಡಲ್ಲ. ಇದೀಗ ತೆರಿಗೆ ಕೂಡ ಪಾವತಿ ಮಾಡುವುದಿಲ್ಲ ಅಂದರೆ ಹೇಗೆ? ಜಿಂದಾಲ್ ಕಾರ್ಯವೈಖರಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಗಮನಕ್ಕೆ ತರುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹೊತ್ತಿ ಉರಿದ ತಿರುವನಂತಪುರಂ To ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್ – ತಪ್ಪಿದ ಭಾರೀ ಅನಾಹುತ
ಯಾವ ಪಂಚಾಯ್ತಿಗೆ ಎಷ್ಟು ತೆರಿಗೆ ಬಾಕಿ?: ತೋರಣಗಲ್ಲು ಗ್ರಾಮ ಪಂಚಾಯ್ತಿಗೆ 2018-19ರಿಂದ 2025-26ರವರೆಗೆ ಸುಮಾರು 20,23,94,216 ರೂ. ತೆರಿಗೆ ಪಾವತಿಸಬೇಕಿದೆ. ಬನ್ನಿಹಟ್ಟಿ ಗ್ರಾಪಂಗೆ 2024-25ರಿಂದ 2025-26ರವರೆಗೆ 60,53,036ರೂ. ಹಾಗೂ ವಡ್ಡು ಗ್ರಾಪಂಗೆ 2018-19ರಿಂದ 2025-26ರವರೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇನ್ನು ತೋರಣಗಲ್ಲು, ವಡ್ಡು, ಬನ್ನಿಹಟ್ಟಿ ಗ್ರಾಪಂಗಳಿಗೆ ಪಾವತಿಸಬೇಕಿರುವ ತೆರಿಗೆಯ ವಸೂಲಿಗೆ ಆಯಾ ಗ್ರಾಪಂಗಳಿಂದ ಜಿಂದಾಲ್ ಕಂಪನಿಗೆ ಅನೇಕ ಬಾರಿ ನೋಟಿಸ್ ನೀಡಿದರೂ, ಯಾವುದೇ ಸ್ಪಂದನೆ ಇಲ್ಲದಂತಾಗಿದೆ.
