ನವದೆಹಲಿ: ಪಾಕಿಸ್ತಾನದೊಂದಿಗಿನ ಸಿಂಧೂ ನದಿ (Sindhu River) ನೀರು ಹಂಚಿಕೆ ಒಪ್ಪಂದವನ್ನು ಮುಂದುವರಿಸುವಂತೆ ಸೂಚಿಸಿದ ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ (Permanent Court of Arbitration) ತೀರ್ಪನ್ನು ಭಾರತ ಸರ್ಕಾರ ಕಟುವಾಗಿ ತಿರಸ್ಕರಿಸಿದೆ.
ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ಯಾವುದೇ ತೀರ್ಪು ನೀಡಲು ಈ ನ್ಯಾಯಾಲಯಕ್ಕೆ ಯಾವುದೇ ಅಧಿಕಾರ ವ್ಯಾಪ್ತಿಯಿಲ್ಲ (No Jurisdiction) ಎಂದು ಸರ್ಕಾರ ಖಡಕ್ ಆಗಿಯೇ ತಿಳಿಸಿದೆ.
ಸಿಂಧೂ ನದಿ ನೀರು ಒಪ್ಪಂದವನ್ನು ಕೊನೆಗೊಳಿಸಲು ಅಥವಾ ಅಮಾನತುಗೊಳಿಸಲು ಭಾರತಕ್ಕೆ ಯಾವುದೇ ಸಮರ್ಥನೆಯಿಲ್ಲ ಮತ್ತು ಉಭಯ ದೇಶಗಳ ನಡುವಿನ ಒಪ್ಪಂದವು ಸಂಪೂರ್ಣವಾಗಿ ಜಾರಿಯಲ್ಲಿದೆ ಎಂದು ಹೇಗ್ ನ್ಯಾಯಾಲಯ ಹೇಳಿತ್ತು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಈ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ವಿಶ್ವಬ್ಯಾಂಕ್ ಈ ನ್ಯಾಯಾಲಯವನ್ನು ಸಿಂಧೂ ನದಿ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ರಚಿಸಿದೆ. ಇಂತಹ ಕಾನೂನುಬಾಹಿರ ಸಂಸ್ಥೆಯ ಅಸ್ತಿತ್ವವನ್ನಾಗಲಿ ಅಥವಾ ಅದರ ತೀರ್ಪನ್ನಾಗಲಿ ಭಾರತ ಎಂದಿಗೂ ಅಂಗೀಕರಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ಮಾತನಾಡಲು ಈ ನ್ಯಾಯಾಲಯಕ್ಕೆ ಯಾವುದೇ ಹಕ್ಕಿಲ್ಲ. ಈ ನ್ಯಾಯಾಲಯ ನೀಡುವ ಯಾವುದೇ ತೀರ್ಪು ಭಾರತ ಕೈಗೊಂಡಿರುವ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರ ಮುಂದುವರಿಯಲಿದೆ ಎಂದು ತಿಳಿಸಿದೆ.
ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ, ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು 1960ರ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು. “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂಬ ತನ್ನ ದೃಢ ನಿಲುವನ್ನು ಪುನರುಚ್ಚರಿಸಿರುವ ಭಾರತ, ಗಡಿಯಾಚೆಗಿನ ಭಯೋತ್ಪಾದನಾ ಜಾಲಗಳನ್ನು ನಾಶಮಾಡಲು ಪಾಕಿಸ್ತಾನ ಸೂಕ್ತ ಹಾಗೂ ಬದಲಾಯಿಸಲಾಗದ ಕ್ರಮ ಕೈಗೊಳ್ಳುವವರೆಗೂ ಒಪ್ಪಂದದ ಅಮಾನತು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಸಿಂಧೂ ನದಿ ವ್ಯವಸ್ಥೆಯ ಪಶ್ಚಿಮ ನದಿಗಳ ಮೇಲೆ ಭಾರತ ನಿರ್ಮಿಸುತ್ತಿರುವ ಕಿಶನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಕುರಿತು ಪಾಕಿಸ್ತಾನವು ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ, ಒಪ್ಪಂದದ ಪ್ರಕಾರ ಇಂತಹ ತಾಂತ್ರಿಕ ಭಿನ್ನಾಭಿಪ್ರಾಯಗಳನ್ನು ‘ತಟಸ್ಥ ತಜ್ಞರ’ (Neutral Expert) ಮೂಲಕ ಪರಿಹರಿಸಬೇಕೇ ಹೊರತು ಮಧ್ಯಸ್ಥಿಕೆ ನ್ಯಾಯಾಲಯದ ಮೂಲಕವಲ್ಲ ಎಂಬುದು ಭಾರತದ ವಾದವಾಗಿದೆ.
