ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಪೌಷ್ಟಿಕ(Malnutrition) ಹಾಗೂ ಕುಬ್ಜ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 3,978 ಮಕ್ಕಳು ಕುಬ್ಜ ಬೆಳವಣಿಗೆ ಹೊಂದಿದ್ದರೆ, 814 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ವಿಶೇಷವಾಗಿ ಗುಡ್ಡಗಾಡು ಹಾಗೂ ಗ್ರಾಮೀಣ ಭಾಗದ ಮಕ್ಕಳಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವುದು ಆಡಳಿತ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ಅಂಗನವಾಡಿಗಳಿಗೆ ಒಟ್ಟು 63,207 ಮಕ್ಕಳು ದಾಖಲಾಗಿದ್ದಾರೆ. ಇವರಲ್ಲಿ 1,225 ಕುಬ್ಜ ಮಕ್ಕಳು (631 ಗಂಡು, 594 ಹೆಣ್ಣು) ಮತ್ತು 60 ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿದ್ದಾರೆ.
ಜಿಲ್ಲೆಯ ಯಲ್ಲಾಪುರ, ಮುಂಡಗೋಡು, ಜೋಯಿಡಾ ಹಾಗೂ ಶಿರಸಿ ಭಾಗದ ಗ್ರಾಮೀಣ ಹಾಗೂ ಕಾಡಿನ ಮಧ್ಯದ ಹಳ್ಳಿಗಳ ಮಕ್ಕಳಲ್ಲೇ ಕುಬ್ಜತೆ ಮತ್ತು ಅಪೌಷ್ಟಿಕತೆ ಅತಿ ಹೆಚ್ಚು ಪ್ರಮಾಣದಲ್ಲಿ ವರದಿಯಾಗಿದೆ.

2024ರ ಸಾಲಿನ ಅಂಕಿ-ಅಂಶಗಳ ಹಿನ್ನೋಟ
ಕಳೆದ 2024ರ ಸಾಲಿನಲ್ಲಿ ಜಿಲ್ಲೆಯಾದ್ಯಂತ 87,309 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದರು. ಆ ವರ್ಷದಲ್ಲಿ 2,753 ಕುಬ್ಜ ಮಕ್ಕಳು ಹಾಗೂ 754 ಅಪೌಷ್ಟಿಕ ಮಕ್ಕಳು ಪತ್ತೆಯಾಗಿದ್ದರು.
2024ರಲ್ಲಿ ತಾಲೂಕುವಾರು ಕುಬ್ಜ ಮಕ್ಕಳ ಸಂಖ್ಯೆ: ಕುಮಟಾ (602), ಅಂಕೋಲ (456), ಶಿರಸಿ (395), ಕಾರವಾರ (239), ಭಟ್ಕಳ (224), ಸಿದ್ದಾಪುರ (171), ಹಳಿಯಾಳ (155), ಮುಂಡಗೋಡು (147), ಜೋಯಿಡಾ (131), ಹೊನ್ನಾವರ (89), ದಾಂಡೇಲಿ (75) ಮತ್ತು ಯಲ್ಲಾಪುರ (69).
2024ರಲ್ಲಿ ತಾಲೂಕುವಾರು ಅಪೌಷ್ಟಿಕ ಮಕ್ಕಳ ಸಂಖ್ಯೆ: ಕುಮಟಾ (138), ಅಂಕೋಲ (95), ಜೋಯಿಡಾ (86), ಹಳಿಯಾಳ (82), ಸಿದ್ದಾಪುರ (78), ಶಿರಸಿ (71), ಮುಂಡಗೋಡು (56), ಯಲ್ಲಾಪುರ (44), ಹೊನ್ನಾವರ (35), ದಾಂಡೇಲಿ (24), ಕಾರವಾರ (23) ಮತ್ತು ಭಟ್ಕಳ (22).
ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡವೇನು?
ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳ ಪ್ರಕಾರ, 5 ವರ್ಷದ ಆರೋಗ್ಯವಂತ ಮಕ್ಕಳ ಬೆಳವಣಿಗೆ ಈ ಕೆಳಗಿನಂತಿರಬೇಕು:
ಗಂಡು ಮಗು: ಎತ್ತರ 110 ಸೆಂಟಿ ಮೀಟರ್, ತೂಕ 18.3 ಕೆಜಿ ಇರಬೇಕು.
ಹೆಣ್ಣು ಮಗು: ಎತ್ತರ 109 ಸೆಂಟಿ ಮೀಟರ್, ತೂಕ 18.2 ಕೆಜಿ ಇರಬೇಕು.
ತಂದೆ-ತಾಯಿಯ ದೈಹಿಕ ಪ್ರಕೃತಿಯ ಆಧಾರದ ಮೇಲೆ ಈ ಪ್ರಮಾಣದಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸವಾದರೆ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ವಯಸ್ಸಿಗೆ ತಕ್ಕ ಎತ್ತರ ಹಾಗೂ ಎತ್ತರಕ್ಕೆ ತಕ್ಕ ತೂಕ ತೀರಾ ಕಡಿಮೆ ಇದ್ದರೆ, ಅಂಗನವಾಡಿ ಲೆಕ್ಕಾಚಾರದಲ್ಲಿ ಅವರನ್ನು ಅಪೌಷ್ಟಿಕತೆಯ ಪಟ್ಟಿಗೆ ಸೇರಿಸಲಾಗುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅತಿದೊಡ್ಡ ಚಿನ್ನ ಲೂಟಿ – ಹೋಲ್‌ಸೇಲ್ ಖರೀದಿ ನೆಪದಲ್ಲಿ 1 ಕೆಜಿ 850 ಗ್ರಾಂ ಚಿನ್ನ ಕಳ್ಳತನ
ಗರ್ಭಿಣಿಯರಲ್ಲಿನ ರಕ್ತಹೀನತೆ
ಉತ್ತರ ಕನ್ನಡ ಜಿಲ್ಲೆಯು ಕಡಿದಾದ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು, ಇಂದಿಗೂ ಹಲವು ಹಳ್ಳಿಗಳಿಗೆ ಸೂಕ್ತ ರಸ್ತೆ ಹಾಗೂ ನಗರ ಸಂಪರ್ಕವೇ ಇಲ್ಲ. ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಜನರಿಗೆ ಮರೀಚಿಕೆಯಾಗಿವೆ.
ಮುಖ್ಯವಾಗಿ ಗರ್ಭಿಣಿಯರಿಗೆ ಸಕಾಲದಲ್ಲಿ ಪೌಷ್ಟಿಕ ಆಹಾರ ಹಾಗೂ ಸೂಕ್ತ ವೈದ್ಯಕೀಯ ಮಾರ್ಗದರ್ಶನ ಸಿಗುತ್ತಿಲ್ಲ. 2024ರ ಅಂಕಿ-ಅಂಶಗಳ ಪ್ರಕಾರ, ಪ್ರಸವಪೂರ್ವ ತಪಾಸಣೆಗೆ ನೋಂದಾಯಿಸಿಕೊಂಡ ಗರ್ಭಿಣಿಯರಲ್ಲಿ ರಾಜ್ಯದ ಸರಾಸರಿಗಿಂತ 4% ಕ್ಕೂ ಹೆಚ್ಚು ಪ್ರಮಾಣದಲ್ಲಿ ತೀವ್ರ ರಕ್ತಹೀನತೆ (Anemia) ಇರುವುದು ಪತ್ತೆಯಾಗಿತ್ತು. ಗರ್ಭಾವಸ್ಥೆಯಲ್ಲಿ ತಾಯಂದಿರಿಗಿರುವ ರಕ್ತಹೀನತೆ ಹಾಗೂ ಪೌಷ್ಟಿಕಾಂಶದ ಕೊರತೆಯೇ ಇಂದು ಮಕ್ಕಳಲ್ಲಿ ಕುಬ್ಜತೆ ಮತ್ತು ಅಪೌಷ್ಟಿಕತೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಪಾಲಕರ ಜವಾಬ್ದಾರಿ ದೊಡ್ಡದು
ತೂಕ ಮತ್ತು ಎತ್ತರ ಕಡಿಮೆ ಇದ್ದ ತಕ್ಷಣ ಮಗುವಿನ ಬುದ್ಧಿಮತ್ತೆ ಅಥವಾ ದೈನಂದಿನ ಚಟುವಟಿಕೆಗಳಲ್ಲೇನೂ ತೊಂದರೆ ಇರುವುದಿಲ್ಲ. ಆದರೆ, ಶಾಲೆ ಅಥವಾ ಸಮಾಜದಲ್ಲಿ ʻಕುಳ್ಳ ಮಗು‘ ಎಂದು ಇತರರು ಚುಡಾಯಿಸುವುದರಿಂದ ಮಗು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಇಂತಹ ಕೀಳರಿಮೆಯಿಂದ ಮಕ್ಕಳನ್ನು ಹೊರತರುವುದು ಹಾಗೂ ಧೈರ್ಯ ತುಂಬುವುದು ಪಾಲಕರ ಕರ್ತವ್ಯವಾಗಿದೆ.
ಸದ್ಯ ಇಲಾಖೆಯು ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆಯಾದರೂ, ದೈಹಿಕ ಬೆಳವಣಿಗೆಯ ಈ ಇಳಿಮುಖ ಗ್ರಾಫ್ ಜಿಲ್ಲೆಯಲ್ಲಿ ಕಳವಳ ಮೂಡಿಸುತ್ತಿದೆ.

