Connect with us

Bengaluru City

ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ: ಆರೋಪಿ ರಾಕೇಶ್

Published

on

ಬೆಂಗಳೂರು: ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ ಎಂದು ಆರೋಪಿ ರಾಕೇಶ್ ಪೈಲ್ವಾನ್ ಸಿನಿಮಾ ಪೈರಸಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಪೈಲ್ವಾನ್ ಸಿನಿಮಾದ ಲಿಂಕ್ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡಿದ್ದಕ್ಕೆ ಪೊಲೀಸರು ಗುರುವಾರ ರಾತ್ರಿ ದಾಬಸ್ ಪೇಟೆಯಲ್ಲಿ ಅರೆಸ್ಟ್ ಮಾಡಿದ್ದರು. ಬಳಿಕ ಈ ಬಗ್ಗೆ ವಿಚಾರಣೆ ನಡೆಸಿದ್ದಾಗ ರಾಕೇಶ್ ಸಿಸಿಬಿ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದಾನೆ. ಇದನ್ನೂ ಓದಿ: ಪೈಲ್ವಾನ್ ಪೈರಸಿ ಮಾಡಿದ ಆರೋಪಿ ಬಂಧನ

ವಿಚಾರಣೆ ವೇಳೆ ರಾಕೇಶ್, ನಾನು ದರ್ಶನ್ ಅಭಿಮಾನಿ. ಇದೇ ಕಾರಣಕ್ಕೆ ನಾನು ಸಿನಿಮಾವನ್ನು ಲೀಕ್ ಮಾಡಿದೆ. ನನಗೆ ನಮ್ಮ ಡಿ-ಬಾಸ್ ಸಿನಿಮಾನೇ ಗ್ರೇಟು. ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ಮೊದಲು ನಾನು ನನ್ನ ಇಬ್ಬರ ಸ್ನೇಹಿತರಿಗೆ ಶೇರ್ ಮಾಡಿದೆ. ನಂತರ ಅದು ಯಾರಿಗೆಲ್ಲಾ ಹೋಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ಹಣಕ್ಕಾಗಿ ಸಿನಿಮಾವನ್ನು ಲೀಕ್ ಮಾಡಿಲ್ಲ. ದರ್ಶನ್ ಅವರ ಅಭಿಮಾನಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ ಚಿತ್ರದ ಲಿಂಕ್ ಹೇಗೆ ಸಿಕ್ತು ಎಂಬ ವಿಷಯವನ್ನು ಹೇಳುತ್ತಿಲ್ಲ. ಹಾಗಾಗಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಪೈಲ್ವಾನ್ ಚಿತ್ರ ಪೈರಸಿ ಮಾಡಿದ್ದಕ್ಕೆ ಗುರುವಾರ ರಾತ್ರಿ ದಾಬಸ್‍ಪೇಟೆಯಲ್ಲಿ ರಾಕೇಶ್‍ನನ್ನು ಬಂಧಿಸಿದ್ದೇವೆ. ಕಾಪಿ ರೈಟ್ ಉಲ್ಲಂಘನೆ ಮಾಡಿ ಚಿತ್ರದ ಲಿಂಕ್ ಫೇಸ್‍ಬುಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಅಪರಾಧ. ಚಿತ್ರದ ನಿರ್ಮಾಪಕರ ದೂರಿನ ಆಧಾರದ ಮೇಲೆ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ. ಈ ಚಿತ್ರದ ಲಿಂಕ್ ಇವನ ಬಳಿ ಹೇಗೆ ಬಂತು, ಎಷ್ಟು ಜನರಿಗೆ ಶೇರ್ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡಬೇಕಿದೆ. ರಾಕೇಶ್ ಹಿಂದೆ ಯಾರಾದರೂ ಇದ್ದರಾ ಎಂಬ ವಿಷಯ ತಿಳಿಯಬೇಕಿದೆ ಎಂದು ಹೇಳಿದ್ದಾರೆ.

ಸೋಮವಾರ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಿರ್ಮಾಪಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದೂರು ನೀಡಿದ ಬಳಿಕ ಸ್ವಪ್ನಕೃಷ್ಣ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3,500ಕ್ಕೂ ಹೆಚ್ಚು ಲಿಂಕ್‍ಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ದರ್ಶನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಎನ್ನುವುದು ಈಗ ಮಾರಕವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.