– ನಾವು ಸೋತಿಲ್ಲ, ಹೀಗಾಗಿ ರಾಜಭವನಕ್ಕೆ ಹೋಗಲ್ಲ ಎಂದ ದೀದಿ
ಕೋಲ್ಕತ್ತಾ: ಸತತ ಮೂರು ಬಾರಿ ಅಧಿಕಾರದಲ್ಲಿದ್ದ, ನಂತರ ನಿನ್ನೆ ಬಿಜೆಪಿ (BJP) ವಿರುದ್ಧ ಸೋತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TCM) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.
ಫಲಿತಾಂಶ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಮಮತಾ ಬ್ಯಾನರ್ಜಿ, ನಾನು ರಾಜೀನಾಮೆ ಕೊಡಲ್ಲ. ನಾನು ಸೋತಿಲ್ಲ, ಹೀಗಾಗಿ ರಾಜಭವನಕ್ಕೆ ಹೋಗಲ್ಲ. ಬಿಜೆಪಿಗೆ ಸಿಕ್ಕ ಜನಾದೇಶ ಲೂಟಿಯ ಫಲಿತಾಂಶ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು – ಹಲವು ವರ್ಷಗಳಿಂದ ಮುಚ್ಚಿದ್ದ ದುರ್ಗಾ ದೇವಸ್ಥಾನ ಬಾಗಿಲು ಓಪನ್
ಬ್ಯಾನರ್ಜಿಯವರ ಈ ನಡೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಸಾಧ್ಯತೆ ಇದೆ. ವಿಧಾನಸಭೆಯ ಅವಧಿ ಮುಗಿಯುವ ಮೊದಲು ಗೆದ್ದ ಪಕ್ಷವು ಸರ್ಕಾರ ರಚಿಸಲು ಹಕ್ಕು ಮಂಡಿಸಿ ರಾಜ್ಯಪಾಲರು ಆಹ್ವಾನಿಸಿದರೆ, ಇದು ಅಗತ್ಯವಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7 ರಂದು ಕೊನೆಗೊಳ್ಳಲಿದ್ದು, ಬಿಜೆಪಿಗೆ ಅಧಿಕಾರ ಹಿಡಿಯಲು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ.
ಭವಾನಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದಾರೆ. ‘ಬಿಜೆಪಿ ಚುನಾವಣೆಯಲ್ಲಿ 100 ಸ್ಥಾನಗಳನ್ನು ಕದ್ದಿದೆ. ಇದು ಲೂಟಿ ಲೂಟಿ ಲೂಟಿ. ಸರ್ಕಾರ ಮತ್ತು ಚುನಾವಣಾ ಆಯೋಗವು ಇದಕ್ಕೆ ಸಹಕರಿಸಿದೆ. ತೃಣಮೂಲ ಕಾಂಗ್ರೆಸ್‌ನ ನಿಜವಾದ ಪ್ರತಿಸ್ಪರ್ಧಿ ಬಿಜೆಪಿಯಲ್ಲ, ಚುನಾವಣಾ ಆಯೋಗವೇ ಎಂದು ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ನೇರ ಹಸ್ತಕ್ಷೇಪ ಮಾಡಿದೆ. ಮಹಾರಾಷ್ಟ್ರ, ಹರಿಯಾಣ, ಬಿಹಾರ ಆಯ್ತು. ಈಗ ಬಂಗಾಳದಿಂದ ಚುನಾವಣೆಯಲ್ಲೂ ಅದೇ ರೀತಿ ಲೂಟಿ ಮಾಡಿದ್ದಾರೆ. ಪ್ರಜಾಪ್ರಭುತ್ವ ಹೀಗೆ ಕೆಲಸ ಮಾಡುವುದಿಲ್ಲ. ನ್ಯಾಯಾಂಗ ಇಲ್ಲದಿರುವಾಗ, ಚುನಾವಣಾ ಆಯೋಗ ಪಕ್ಷಪಾತದಿಂದ ವರ್ತಿಸಿದಾಗ ಮತ್ತು ಸರ್ಕಾರ ಏಕಪಕ್ಷೀಯ ಆಡಳಿತವನ್ನು ಬಯಸಿದಾಗ ಜಗತ್ತಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೇ 9ರಂದು ಬಂಗಾಳದ ನೂತನ ಸಿಎಂ ಪ್ರಮಾಣ ಸ್ವೀಕಾರ – ಎಲ್ಲ NDA ಆಡಳಿತ ರಾಜ್ಯಗಳ ಸಿಎಂಗಳಿಗೆ ಆಹ್ವಾನ
ಮತ ಎಣಿಕೆ ಕೇಂದ್ರದಲ್ಲಿ ನನ್ನ ಮೇಲೆ ಹಲ್ಲೆ ನಡೆಯಿತು. ನನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದರು. ಸಿಸಿಟಿವಿ ಆಫ್ ಆಗಿತ್ತು. ನನ್ನನ್ನು ಎಣಿಕೆ ಕೇಂದ್ರದಿಂದ ಹೊರಗೆ ತಳ್ಳಲಾಯಿತು. ಒಬ್ಬ ಮಹಿಳೆಯಾಗಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಲಾಯಿತು ಎಂದು ಆರೋಪಿಸಿದ್ದಾರೆ.
ಕೇಂದ್ರ ಪಡೆಗಳು ಈ ರೀತಿ ವರ್ತಿಸಲು ಸಾಧ್ಯವೇ? ನಾನು ಹೇಳಲು ಏನೂ ಉಳಿದಿಲ್ಲ. ಕೇಂದ್ರದಲ್ಲಿ ಹಿಂದಿನ ಬಿಜೆಪಿ ಸರ್ಕಾರಗಳನ್ನು ನಾನು ನೋಡಿದ್ದೇನೆ. ಆದರೆ, ಈ ರೀತಿ ಆಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಮ್ಮ ಪಕ್ಷದ ಕಾರ್ಯತಂತ್ರವನ್ನು ಬಹಿರಂಗಪಡಿಸಲು ಬ್ಯಾನರ್ಜಿ ನಿರಾಕರಿಸಿದರು. ಇಂಡಿಯಾ ಬ್ಲಾಕ್‌ನ ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವರ ಬೆಂಬಲವಿದೆ ಎಂದು ಹೇಳಿದರು.

