ಬೆಂಗಳೂರು: ನಾನು ಪಕ್ಷದ ಹಿರಿಯ ಶಾಸಕನಾಗಿದ್ದು ಮುಂದಿನ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಸಂದರ್ಭದಲ್ಲಿ ನನಗೂ ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗುವ ಪೂರ್ಣ ನಿರೀಕ್ಷೆಯಿದೆ ಎಂದು ಶಾಸಕ ಮಾಗಡಿ ಬಾಲಕೃಷ್ಣ (Magadi Balakrishna) ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಪದತ್ಯಾಗ ಮಾಡಲಿದ್ದಾರೆ ಎನ್ನುವ ಚರ್ಚೆಗಳ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, “ಈ ವಿಚಾರ ನಮಗೆ ಕೇವಲ ಮಾಧ್ಯಮಗಳ ಮೂಲಕವಷ್ಟೇ ಗೊತ್ತಾಗಿದೆ. ಸಿದ್ದರಾಮಣ್ಣ ಅವರು ಎಷ್ಟು ವರ್ಷ ಸಿಎಂ ಆಗಿರುತ್ತಾರೋ ಅಷ್ಟು ವರ್ಷ ಇರಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸಿದ್ದರಾಮಯ್ಯ ಅವರ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ನಾಯಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರೇ ಆಗಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು” ಎಂದು ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ಸದ್ಯ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದ್ದು, ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪಕ್ಷನಿಷ್ಠನಿಗೆ ಪಟ್ಟ ಕಟ್ಟಿದ ಹೈಕಮಾಂಡ್ – ಕೊಟ್ಟ ಮಾತಿನಂತೆ ಬದಲಾವಣೆ
2023ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಡಿ.ಕೆ. ಶಿವಕುಮಾರ್ ಅವರ ಪಾತ್ರ ಮತ್ತು ಶ್ರಮ ಅತ್ಯಂತ ದೊಡ್ಡದು. ಪಕ್ಷಕ್ಕಾಗಿ ಅವರು ಹಲವು ಬಾರಿ ತಮ್ಮ ಪಕ್ಷನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ. ಅವರು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ನಮ್ಮ ಪಕ್ಷದಲ್ಲಿ ಎಲ್ಲಾ ಸಮುದಾಯದ ನಾಯಕರಿದ್ದಾರೆ. ಮುಂದಿನ ದಿನಗಳಲ್ಲಿ ಡಿಸಿಎಂ ಯಾರು ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಡಿಕೆಶಿ ನಾಯಕತ್ವವನ್ನು ಬಾಲಕೃಷ್ಣ ಬಲವಾಗಿ ಸಮರ್ಥಿಸಿಕೊಂಡರು.
ನಾಳೆ ಬೆಳಗ್ಗೆ ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ, ಈವರೆಗೂ ನಮಗೆ ಅಥವಾ ಇತರ ಶಾಸಕರುಗಳಿಗೆ ಯಾವುದೇ ಅಧಿಕೃತ ಕರೆ ಬಂದಿಲ್ಲ. ಹಾಗೆಯೇ ಶಾಸಕಾಂಗ ಪಕ್ಷದ (CLP) ಸಭೆಯ ಕುರಿತಾಗಿಯೂ ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ ಎಂದು ತಿಳಿಸಿದರು.
