– ಎಂಜಿಆರ್ ನಂತರ ಪಕ್ಷ ಕಟ್ಟಿ ಅಧಿಕಾರಕ್ಕೇರಿದ ಮೊದಲ ನಟ ವಿಜಯ್
– 60 ವರ್ಷಗಳ ನಂತರ ತ.ನಾಡಲ್ಲಿ ದ್ರಾವಿಡ ಪಕ್ಷಗಳ ಆಟಕ್ಕೆ ಬ್ರೇಕ್
ತಮಿಳುನಾಡು (Tamil Nadu) ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದ ತಾರೆಯರು ಆಡಳಿತದ ಚುಕ್ಕಾಣಿ ಹಿಡಿದ ಅನೇಕ ಉದಾಹರಣೆಗಳಿವೆ. ಎಂ.ಜಿ ರಾಮಚಂದ್ರನ್, ಜಯಲಲಿತಾ, ಉದಯನಿಧಿ ಸ್ಟಾಲಿನ್ ಹೀಗೆ ಅನೇಕರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಈಗ ಅದೇ ಹಾದಿಯಲ್ಲಿ ಸಾಗಿರುವ ‘ದಳಪತಿ‘ ವಿಜಯ್ (Thalapathy vijay), ತಮ್ಮ ‘ತಮಿಳಗ ವೆಟ್ಟಿ ಕಳಗಂ’ (TVK) ಪಕ್ಷದ ಮೂಲಕ 2026ರ ವಿಧಾನಸಭಾ ಚುನಾವಣಾ ಕಣದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಎಂಜಿಆರ್ ನಂತರ ಪಕ್ಷ ಕಟ್ಟಿ ಅಧಿಕಾರಕ್ಕೇರಿದ ಮೊದಲ ನಟ ಎಂಬ ಹೆಗ್ಗಳಿಕೆಯನ್ನೂ ವಿಜಯ್ ತಮ್ಮದಾಗಿಸಿಕೊಂಡಿದ್ದಾರೆ.
ನಟ ವಿಜಯ್ ಗೆದ್ದಿದ್ದು ಹೇಗೆ?
ಡಿಎಂಕೆಯಿಂದ ಅಮಾನತುಗೊಂಡ ನಂತರ ಎಂ ಜಿ ರಾಮಚಂದ್ರನ್ ಅಣ್ಣಾಡಿಎಂಕೆ ಎಂಬ ಹೊಸ ಪಕ್ಷವನ್ನು ಕಟ್ಟಿ ತಮಿಳುನಾಡನ್ನು ಆಳಿದ್ದು ಇತಿಹಾಸ. ಅದಾದ ಬಳಿಕ ವಿಜಯಕಾಂತ್ ಕಮಲ್‌ಹಾಸನ್‌ರಂತಹ ಪ್ರಸಿದ್ಧ ನಟರು ಪಕ್ಷ ಕಟ್ಟಿದರೂ ಅಧಿಕಾರ ಗಗನಕುಸುಮ ಆಯಿತು. ಆದರೆ 50 ವರ್ಷಗಳ ಬಳಿಕ ವಿಜಯ್ ತಮಿಳುನಾಡಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಎಂಜಿಆರ್ ಬಳಿಕ ಪಕ್ಷ ಕಟ್ಟಿ ಮೊದಲ ಹಂತದಲ್ಲೇ ಅಧಿಕಾರಕ್ಕೆ ತಂದ ಮೊದಲ ಸಿನಿಮಾ ನಟ ಎಂಬ ಚರಿತ್ರೆ ನಿರ್ಮಿಸಿದ್ದಾರೆ. ಜಯಲಲಿತಾ ಅವರೂ ಸಿನಿಮಾ ನಟಿ. ಅವರು ಚುನಾವಣೆ ಎದುರಿಸಿ ಪಕ್ಷವನ್ನು ಅದಿಕಾರಕ್ಕೆ ತಂದಿದ್ದರಾದರೂ, ಅಣ್ಣಾಡಿಎಂಕೆ ಎಂಬುದು ಅವರು ಕಟ್ಟಿದ್ದ ಪಕ್ಷವಲ್ಲ. ಎಂಜಿಆರ್ ರಿಂದಾಗಿ ಅದಾಗಲೇ ದೈತ್ಯವಾಗಿ ಬೆಳೆದಿದ್ದ ಪಕ್ಷವನ್ನು ಅವರು ಮುಂದುವರೆಸಿಕೊಂಡು ಹೋದರು. ಇದನ್ನೂ ಓದಿ: ರಾಜಕೀಯಕ್ಕೆ ವಿಜಯ್ ಬ್ಲಾಕ್‌ಬಸ್ಟರ್ ಎಂಟ್ರಿ – ರಶ್ಮಿಕಾ, ರಜನಿ, ಕಮಲ್ ಬೆಸ್ಟ್ ವಿಶ್

ಕಳೆದ 60 ವರ್ಷಗಳಿಂದ ರಾಜ್ಯದಲ್ಲಿ ಡಿಎಂಕೆ ಹಾಗೂ ಅಣ್ಣಾಡಿಎಂಕೆಯದ್ದೇ ಪಾರುಪತ್ಯ. ಇದೇ ಮೊದಲ ಸಲ ಎರಡೂ ಪಕ್ಷಗಳಿಗೆ ಸೇರಿಲ್ಲದ ವ್ಯಕ್ತಿ ಸಿಎಂ ಆಗುತ್ತಿದ್ದಾರೆ.
2009ರಲ್ಲೇ ರಾಜಕೀಯ ಬುನಾದಿ!
ಎರಡು ವರ್ಷಗಳ ಹಿಂದೆ ವಿಜಯ್ ಪಕ್ಷಪಟ್ಟಿ, ಇದೆಲ್ಲವನ್ನೂ ಸಾಕಾರಗೊಳಿಸಿಕೊಂಡರು ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ವಿಜಯ್ ಅವರ ರಾಜಕೀಯ ಪ್ರಯತ್ನಕ್ಕೆ ಮೊದಲ ಬುನಾದಿ ಬಿದ್ದಿದ್ದು 2 ವರ್ಷಗಳ ಹಿಂದೆ ಅಲ್ಲ. 2009ರಲ್ಲೇ!
ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸಬೇಕೆಂಬ ದೂರದೃಷ್ಟಿಯಿಂದಲೇ ವಿಜಯ್ ಅವರು ತಮ್ಮ ಅಭಿಮಾನಿ ಸಂಘಗಳನ್ನು ವಿಜಯ್, ಮಕ್ಕಳ ಇಯಕ್ಕಂ (ಜನರ ಆಂದೋಲನ) ಎಂದು ಬದಲಿಸಿದರು. ಅವರ ಉದ್ದೇಶ ಜನಸೇವೆಯಾಗಿತ್ತು. ಶೈಕ್ಷಣಿಕ ನೆರವು, ಪರಿಹಾರ ಕಾರ್ಯಗಳನ್ನು ಆ ಆಂದೋಲನದ ಮೂಲಕ ಮಾಡಲಾಯಿತಾದರೂ, ಅದೆಲ್ಲವೂ ನಡೆದಿದ್ದು ಚುನಾವಣೆ ನಡೆಯುವ ಬೂತ್‌ನಗಳನ್ನು ಗಮನದಲ್ಲಿರಿಸಿಕೊಂಡೇ.
2011ರಲ್ಲಿ ಬಹಿರಂಗವಾಗಿ ಅಣ್ಣಾಡಿಎಂಕೆಗೆ ಬೆಂಬಲ ಘೋಷಿಸಿದರು. ಅದಾದ ಬಳಿಕ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯವಸ್ಥೆಗೆ ಟಾಂಗ್ ಇರುತ್ತಿತ್ತು. 2019ರಲ್ಲಿ ಸಿಎಎ ವಿರೋಧಿ ಹೇಳಿಕೆ ನೀಡಿದ್ದರು. ನಿರುದ್ಯೋಗ, ಭ್ರಷ್ಟಾಚಾರ ಆಡಳಿತದಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾಗಲೇ ಅವರ ರಾಜಕೀಯ ಪ್ರವೇಶದ ಸುಳಿವು ಲಭಿಸಿತ್ತು.

ಡಿಎಂಕೆ, ಅಣ್ಣಾಡಿಎಂಕೆ ಪಕ್ಷಗಳಿಗೆ ಪರ್ಯಾಯವಾದ ಟಿವಿಕೆ 2021ರಲ್ಲಿ ವಿಜಯ್ ಮಕ್ಕಳ್ ಇಯಕ್ಕಂ ನೇರವಾಗಿ ಸ್ಥಳಿಯ ಸಂಸ್ಥೆ ಚುನಾವಣೆಗೆ ಇಳಿಯಿತು. ಸಾಕಷ್ಟು ಮಂದಿ ಗೆದ್ದರು. ಆಗ, ಅಭಿಮಾನಿಗಳು ತನ್ನನ್ನು ನೋಡಲಷ್ಟೇ ಬರುತ್ತಿಲ್ಲ, ತಾವು ರಾಜಕೀಯ ಪ್ರವೇಶಿಸಿದರೆ ಬೆಂಬಲಿಸಲು ಸಿದ್ಧರಿದ್ದಾರೆ ಎಂಬ ವಿಷಯ ವಿಜಯ್‌ಗೆ ಖಾತ್ರಿಯಾಯಿತು.
2024ರಲ್ಲಿ ತಮಿಳಿಗ ವೆಂಟ್ರಿ ಕಳಗಂ ಎಂಬ ಪಕ್ಷವನ್ನು ಸ್ಥಾಪಿಸಿದರು. ಅಷ್ಟರಲ್ಲಿ ಅವರಲ್ಲಿ ರಾಜಕೀಯ ಪ್ರವೇಶದ ಸ್ಪಷ್ಟನೆ ಇತ್ತು. 2026ರ ಚುನಾವಣೆಯೇ ಗುರಿಯಾಗಿತ್ತು. ಡಿಎಂಕೆ- ಅಣ್ಣಾಡಿಎಂಕೆಗೆ ತಮ್ಮ ಪಕ್ಷ ಪರ್ಯಾಯ ಪಕ್ಷವಾಗಬೇಕು ಎಂಬ ನಿಲುವಿತ್ತು.

ವಿಜಯ್ ರಾಜಕೀಯ ಪ್ರವೇಶಿಸಿದರೂ ಅನನುಭವಿ, ಸಿನಿಮಾ ನಟ ಎಷ್ಟು ದಿನ ಇರುತ್ತಾರೋ ಎಂಬ ಅನುಮಾನವಿತ್ತು. ಅದನ್ನು ಹೋಗಲಾಡಿಸಲು ಅವರು ಇನ್ನು ಸಿನಿಮಾ ಮಾಡುವುದಿಲ್ಲ ಎಂದು ಘೋಷಿಸಿದರು. ಅಷ್ಟರಲ್ಲಿ ಕರೂರಿನಲ್ಲಿ 40 ಮಂದಿಯ ಬಲಿ ಪಡೆದ ಕಾಲ್ತುಳಿತ ವಿಜಯ್‌ಗೆ ದೊಡ್ಡ ಹಿನ್ನಡೆಯೆಂದೇ ಭಾವಿಸಲಾಯಿತು. ಹಿನ್ನಡೆ ಎಂದು ನಂಬಿದವರಿಗೆ, ಆ ಘಟನೆಯಿಂದ ಹೋದ ಸಂದೇಶ ಗೊತ್ತಾಗಲಿಲ್ಲ! ಕಾಲ್ತುಳಿತ ಘಟನೆಯನ್ನು ಅವರು ನಿಭಾಯಿಸಿದ ರೀತಿ, ಅವರೊಬ್ಬ ಉತ್ತಮ ಆಡಳಿತಗಾರರಾಗಬಹುದು ಎಂಬ ನಂಬಿಕೆಯನ್ನು ಜನರಲ್ಲಿ ಬಿತ್ತಿತು.
ಕಳೆದ ಎರಡು ವರ್ಷಗಳಲ್ಲಿ ವಿಜಯ್ ಪ್ರಚಾರವನ್ನಷ್ಟೇ ಮಾಡಿಲ್ಲ. ತಮ್ಮ ಅಭಿಮಾನಿ ಸಂಘಗಳನ್ನು ಸಕ್ರೀಯ ರಾಜಕೀಯಕ್ಕೆ ದೂಡಿದರು. ಬೂತ್, ಜಿಲ್ಲೆ ವಿಧಾನಸಭೆ ಕ್ಷೇತ್ರವಾರು ಮಟ್ಟದ ಹೊಣೆಗಾರಿಕೆ ನೀಡಿದರು. ಶಿಕ್ಷಣ, ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಸಾಂಸ್ಥಿಕ ಹೊಣೆಗಾರಿಕೆಯ ಕುರಿತು ಭರವಸೆ ನೀಡಿದರು. ಹೊಸ ಹೊಸ ಪ್ರಚಾರ ವಿಧಗಳನ್ನು ಬಳಸಿಕೊಂಡರು. ಅದೆಲ್ಲವೂ ಈಗ ಫಲ ನೀಡಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಸ್ಟಾರ್ ಉದಯಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ದಳಪತಿ ವಿಜಯ್ – ಯಾರ ಜೊತೆ ಟಿವಿಕೆ ಮೈತ್ರಿ?

