ಮೈಸೂರು: ಯೂಟ್ಯೂಬರ್ ಮಧು ಗೌಡ ಪತಿ ನಿಖಿಲ್ ರವೀಂದ್ರ ವಿರುದ್ಧ ಹಿಟ್ ಆ್ಯಂಡ್ ರನ್ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೊದಲು ಸಂಧಾನಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ನಿಖಿಲ್, ಅಪಘಾತವಾಗಿದ್ದನ್ನು ಗಮನಿಸಿರಲಿಲ್ಲಾ ಎಂದು ಹೇಳಿರವ ವಿಡಿಯೋ ವೈರಲ್ ಆಗಿದೆ .
ಮೈಸೂರಿನ ವಿ.ವಿ.ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಂಧಾನಕ್ಕೆ ಯತ್ನ
ಅಪಘಾತದ ಬಳಿಕ ನಿಖಿಲ್ ಅವರನ್ನು ಸಂಪರ್ಕಿಸಿ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗಿದೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಮಾತನಾಡುವ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಬರುವಂತೆ ನಿಖಿಲ್ ಅವರನ್ನು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಿಖಿಲ್, ಪೊಲೀಸರನ್ನು ಮಧ್ಯೆ ತರಬೇಡಿ ಎಂದು ಹೇಳಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ. ಅಲ್ಲದೆ, ಗಾಯಾಳು ಮತ್ತು ಅವರ ಕುಟುಂಬದವರನ್ನು ಕರೆದುಕೊಂಡು ಬಂದು ಮಾತನಾಡುವಂತೆ ಹೇಳಿರುವ ಧ್ವನಿಯೂ ಇದೆ.
ಮತ್ತೊಂದು ಆಡಿಯೋದಲ್ಲಿ, ಮೊದಲು ಪೊಲೀಸ್ ಠಾಣೆಗೆ ಬಂದು ನಂತರ ಪ್ರಕರಣ ದಾಖಲಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸೋಣ ಎಂದು ವ್ಯಕ್ತಿಯೊಬ್ಬರು ಹೇಳಿರುವುದು ಕೇಳಿಬರುತ್ತದೆ. ಕಾರನ್ನು ತಮ್ಮ ಬಾಮೈದ ತೆಗೆದುಕೊಂಡು ಹೋಗಿದ್ದಾನೆ ಎಂದು ನಿಖಿಲ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಅಪಘಾತದ ಕುರಿತು ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ನಿಖಿಲ್, ನನಗೆ ಡಿಕ್ಕಿ ಹೊಡೆದದ್ದು ಗಮನಿಸಿಲ್ಲ, ನನಗೆನೂ ಗೊತ್ತಿಲ್ಲ. ನಾನು ಆಕ್ಸಿಡೆಂಟ್ ಮಾಡಿ ಸುಮ್ಮನೆ ಓಡಿ ಹೋಗೋನಲ್ಲ. ನಾನು ಚಾರ್ಜರ್ ಬೇಕಂತ ವಾಪಸ್ ಅದೇ ರೋಡಲ್ಲಿ ಹೋಗುವಾಗ ಆಕ್ಸಿಡೆಂಟ್ ನೋಡಿದವರು ಹೇಳಿದ ಮೇಲೆ ಗೊತ್ತಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ, ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಡಿಕೆಶಿ
ಬೈಕ್ ಸವಾರನಿಗೆ ಕಾರು ಡಿಕ್ಕಿ; ಗಂಭೀರ ಗಾಯ
ನಿಖಿಲ್ ಕಾರು ತೆರಳುತ್ತಿದ್ದಾಗ ಅದೇ ರಸ್ತೆಯಲ್ಲಿ ಬೈಕ್ನಲ್ಲಿ ಸಾಗುತ್ತಿದ್ದ ಅಭಿಷೇಕ್ ಅವರಿಗೆ ಡಿಕ್ಕಿ ಹೊಡೆಯಲಾಗಿದೆ. ಡಿಕ್ಕಿಯ ರಭಸಕ್ಕೆ ಅಭಿಷೇಕ್ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಮೂಳೆ ಮುರಿತವಾಗಿದೆ ಎನ್ನಲಾಗಿದೆ.
ಗಾಯಗೊಂಡ ಅಭಿಷೇಕ್ ತಮ್ಮ ಮಗುವಿನ ನಾಮಕರಣ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಕಾರು ನಿಲ್ಲಿಸದೆ, ಗಾಯಾಳುವಿನ ಆರೋಗ್ಯ ವಿಚಾರಿಸದೆ ಸ್ಥಳದಿಂದ ಪರಾರಿಯಾಗಿರುವ ಆರೋಪವೂ ಕೇಳಿಬಂದಿದೆ.
ಕಾರು ಸೀಜ್ ಮಾಡಿದ ಪೊಲೀಸರು
ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಿಖಿಲ್ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಅನ್ಯಕೋಮಿನ ಯುವಕನಿಂದ ಕಿರುಕುಳ ಆರೋಪ – ವಿಷ ಕುಡಿದು ಯುವತಿ ಆತ್ಮಹತ್ಯೆ
