– ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ – ಧ್ವಜಾರೋಹಣ ನೆರವೇರಿಸಿದ ಸಿಎಂ
ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಿಎಂ ಡಿ.ಕೆ.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರಗೀತೆ ವಂದೇ ಮಾತರಂ ಗೀತೆಯನ್ನು ಎರಡು ಚರಣ ಮಾತ್ರ ಗಾಯನ ಮಾಡಲಾಯಿತು. ಸಿಎಂ ಆಗಿ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರಧ್ವಜ ಮತ್ತು ನಾಡ ಧ್ವಜಾರೋಹಣ ಮಾಡಿದರು. ಇಷ್ಟು ವರ್ಷಗಳು ಸಿಎಂ ಆಗಿದ್ದವರು ರಾಷ್ಟ್ರ ಧ್ವಜಾರೋಹಣ ಮಾಡುತ್ತಿದ್ದರು. ಶಾಲಾ ಶಿಕ್ಷಣ ಸಚಿವರು ನಾಡ ಧ್ವಜಾರೋಹಣ ನೆರವೇರಿಸುತ್ತಿದ್ದರು. ಈ ಬಾರಿ ಎರಡು ಧ್ವಜಾರೋಹಣವನ್ನು ಸಿಎಂ ಡಿಕೆಶಿ ನೆರವೇರಿಸಿದ್ದಾರೆ.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನವೆಂಬರ್ 1 ನಾಡಿನ ಇತಿಹಾಸ. ಸಂಸ್ಕೃತಿಯ ವೈಭವ. ಕನ್ನಡಿಗರ ಸ್ವಾಭಿಮಾನದ ಸಂಕೇತ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. 1.16 ಕೋಟಿ ಮಕ್ಕಳು ನಮ್ಮ ಇಲಾಖೆ ಅಡಿ ಬರುತ್ತಾರೆ. ಪರಿಣಾಮವಾಗಿ ನೇಮಕಾತಿ ಪ್ರಕ್ರಿಯೆ ಆಗ್ತಿದೆ. ವೃತ್ತಿಪರ ಕೋರ್ಸ್ನಲ್ಲಿ 7.5% ಮೀಸಲಾತಿ ಸರ್ಕಾರಿ ಶಾಲಾ ಮಕ್ಕಳಿಗೆ ಕೊಡಲಾಗ್ತಿದೆ. 17 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ನಗರದ ಶಾಲಾ ಮಕ್ಕಳಿಗಾಗಿ ಗ್ರಾಮಾನುಭವ ಕಾರ್ಯಕ್ರಮ ಪ್ರಾರಂಭ ಮಾಡಲಾಗಿದೆ. ಇದು ಸಿಎಂ ಅವರು ಕನಸಿನ ಕೂಸು. ನಮ್ಮ ಅವಧಿಯಲ್ಲಿ 1200 KPS ಶಾಲೆಗಳು ಪ್ರಾರಂಭ ಆಗ್ತಿದೆ. ಶಿಕ್ಷಕರು ಖಿಡಿ ಎಂದು ನಮೂದಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿಯಲ್ಲಿ ಕನ್ನಡದ ಕಲರವ; ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯರಿಂದ ಧ್ವಜಾರೋಹಣ
1995 ನಂತರ ಪ್ರಾರಂಭ ಆದ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು. ಈ ಬಗ್ಗೆ ಸಿಎಂ ಇಂದಿನ ಕಾರ್ಯಕ್ರಮದಲ್ಲಿ ಘೋಷಣೆ ಮಾಡುವಂತೆ ಮನವಿ. ಕನ್ನಡ ನಮ್ಮ ಉಸಿರಾಗಲಿ, ಭವಿಷ್ಯವಾಗಲಿ ಎಂದು ಸಿಎಂ ಮುಂದೆ ಬೇಡಿಕೆಯನ್ನಿಟ್ಟರು.
ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ; ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ
ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ನಾಡಗೀತೆ ಇರುವಂತೆ, ಕನ್ನಡಿಗರ ಸ್ವಾಭಿಮಾನವನ್ನು ಪ್ರತಿನಿಧಿಸುವ ಅಧಿಕೃತ ನಾಡಧ್ವಜವೂ ಇರಬೇಕೆಂಬುದು ನಮ್ಮ ಆಶಯ. ಈಗಾಗಲೇ ಕನ್ನಡಿಗರ ಭಾವನೆಗಳ ಹೆಗ್ಗುರುತಾಗಿ ಕೆಂಪು-ಹಳದಿ ಬಣ್ಣದ ಬಾವುಟವಿದೆ. ಕನ್ನಡದ ಜ್ಞಾನ ಪರಂಪರೆ, ಸಂಸ್ಕೃತಿ, ಸರ್ವಧರ್ಮ ಸಮಾನತೆ ಹಾಗೂ ಶಾಂತಿಯ ಸಂದೇಶ ಸಾರುವ ಈ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ ನಾಡಧ್ವಜವನ್ನಾಗಿ ಮಾಡುವ ಕುರಿತು ನಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ.
ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಕರ್ನಾಟಕದ ಅಸ್ಮಿತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಈ ನಾಡಧ್ವಜದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
— DK Shivakumar (@DKShivakumar) November 1, 2026
ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನಾಡಿನ ಜನರಿಗೆ, ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದರು. 50 ವರ್ಷದ ಹಿಂದೆ ನಾನು ವಿದ್ಯಾರ್ಥಿಯಾದಾಗ ಬಂದ ನೆನಪು ಹಂಚಿಕೊಳ್ಳು ಇಷ್ಟಪಡ್ತೀನಿ. ನಿಮ್ಮ ತಯಾರಿಯಂತೆ ನಾನು ಪ್ರಾಥಮಿಕ ಶಾಲೆಯಲ್ಲಿ ಪಥ ಸಂಚಲನ ಮಾಡ್ತಿದ್ದೆ. ಬ್ಯಾಂಡ್ ಸೆಟ್, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಇದ್ದೆ. ಇವತ್ತು ನಿಮ್ಮ ಪ್ರಜಾ ಸೇವಕ ಆಗಿದ್ದೇನೆ. ನೀವು ಕೂಡಾ ಬೆಳೆದು ಈ ಸ್ಥಾನದಲ್ಲಿ ನಾಯಕರು ಆಗಲು ಶುಭಹಾರೈಕೆ ಮಾಡ್ತೀನಿ ಎಂದರು.
ಉಸಿರು, ಹೆಸರು ಕನ್ನಡ. ತನವು, ಮನವು, ನಡೆ ಕನ್ನಡ. ಜಗದ ಏಳಿಗೆಗೆ ಕನ್ನಡದ ಕವಿಗಳು ಹಿಂದೆಯೇ ಹೇಳಿದ್ದಾರೆ. ಕರ್ನಾಟಕ ಭಾರತದ ಭವಿಷ್ಯ ಅಂತ ಹೇಳಿದ್ದಾರೆ. ಭಾಷೆ ಸಂಸ್ಕೃತಿ ಪ್ರತಿಬಿಂಬ. ಇತರರ ಮನಸ್ಸನ್ನು ನಾವು ಕನ್ನಡದಿಂದ ಗೆಲ್ಲಬೇಕು. ನಾವು ಎಲ್ಲೇ ಇದ್ದರು ಉಸಿರು ಕನ್ನಡ ಆಗಿರಬೇಕು. ಬೇರೆ ದೇಶದಲ್ಲಿ ಕನ್ನಡ ಸಂಘಟನೆ ಕಟ್ಟಿದ್ದಾರೆ. ಕನ್ನಡ ಉಳಿಸ್ತಾ ಇದ್ದಾರೆ. ಅವರಿಗೆ ಸಾಷ್ಟಾಂಗ ನಮಸ್ಕಾರ ಎಂದು ತಿಳಿಸಿದರು.
ಇದು ರಾಜ್ಯೋತ್ಸವ ಮಾತ್ರವಲ್ಲ ಇದು ಭುವನೇಶ್ವರಿ ಸೇವೆ. ಇದು ಮಾತೃಪೂಜೆ. ತಾಯಿ ಸೇವೆ ಧರ್ಮಕ್ಕಿಂತ ದೊಡ್ಡದಲ್ಲ. ತಾಯಿ ಭಾಷೆ ಪ್ರೀತಿ ಮಾಡಬೇಕು. ತಾಯಿ, ಭಾಷೆ ಪ್ರತಿ ಎರಡು ಒಂದೇ. ಕನ್ನಡಕ್ಕೆ ಕಿರು ಬೆರಳು ಎತ್ತಿದರು ಅದು ನಗಾರಿ ಆಗುತ್ತದೆ ಅಂತ ಕುವೆಂಪು ಹೇಳಿದ್ದಾರೆ. ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ ಇದೆ. ಶಾಸ್ತ್ರೀಯ ಸ್ಥಾನಮಾನ ಕೊಡಲಾಗಿದೆ. 8 ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕನ್ನಡ ಬಾವುಟಕ್ಕೆ ನಾಡ ಧ್ವಜ ಸ್ಥಾನ ನೀಡಲು ಸರ್ಕಾರ ಚಿಂತನೆ ಮಾಡಿದೆ. ನಾಡಿನ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಲು ಕ್ರಮವಹಿಸುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡ್ತೀನಿ. ಕಾನೂನು ವ್ಯವಸ್ಥೆ ಮೂಲಕ ನಿಯಮ ಮಾಡ್ತೀವಿ ರಾಷ್ಟ್ರಧ್ವಜದ ಪಕ್ಕ ನಾಡ ಧ್ವಜ ಹಾರಿಸಬೇಕು. ಈ ನಿಟ್ಟಿನಲ್ಲಿ ಕಾನೂನು ತರುತ್ತೇವೆ. ಕ್ಯಾಬಿನೆಟ್ನಲ್ಲೂ ಈ ಬಗ್ಗೆ ಚರ್ಚೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದರು.
ನಾವು ಭಾಷೆ ಪ್ರೀತಿಸಿದರೆ, ಆ ಭಾಷೆ ನಮ್ಮನ್ನ ಕಾಪಾಡುತ್ತದೆ. ಭಾಷೆಗೆ ಗಡಿ ಇಲ್ಲ. ಡಿಜಿಟಲ್ ಯುಗ ಈಗ. ಎಲ್ಲಾ ಭಾಷೆ ಮೊಬೈಲ್ನಲ್ಲಿ ಸಿಗುತ್ತದೆ. ಕಲಿಕೆ ಬಹಳ ವಿಸ್ತಾರ ಆಗಿದೆ. ಕನ್ನಡ ಬೆಳೆಯಬೇಕು. ಕನ್ನಡ ಭಾಷೆ ಮಕ್ಕಳು ಕಲಿಯಬೇಕು. ನಿತ್ಯ ಕನ್ನಡ ಭಾಷೆ ಮಾತಾಡಬೇಕು. ಶಿಕ್ಷಕರು ಇದನ್ನ ನೋಡಿಕೊಳ್ಳಬೇಕು. ಕನ್ನಡ ಸರ್ಕಾರಿ ಭಾಷೆ ಆಗಬಾರದು. ಹೃದಯ ಭಾಷೆ ಆಗಬೇಕು. ಕನ್ನಡದ ಬೇರು ಕರ್ನಾಟಕದಲ್ಲಿ ಇದೆ. ಆದರೆ, ಅದರ ರುಚಿ ಪ್ರಪಂಚ ಹರಡುತ್ತಿದೆ. ಕಲೆ, ಕ್ರೀಡೆ, ವಿಜ್ಞಾನ, ಐಟಿ-ಬಿಟಿ ಯಾವುದೇ ಕ್ಷೇತ್ರ ಕನ್ನಡದ ಸಾರ್ವಭೌಮ ಇದೆ. ನೆಲ, ಜಲ, ಸಂಸ್ಕೃತಿಗೆ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸ್ಪರ್ಧಾತ್ಮಕ ಯುಗಕ್ಕೆ ನಮ್ಮ ಮಕ್ಕಳು ರೆಡಿ ಆಗಬೇಕು. ಕನ್ನಡದ ಬೇರು ಇರೋದು ನಮ್ಮ ಸರ್ಕಾರಿ ಶಾಲೆಯಲ್ಲಿ. SSLC-PUC ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ ಮೊದಲ ಸ್ಥಾನದಲ್ಲಿ ಇದೆ. ಕನ್ನಡದ ಅಳಿವು-ಉಳಿವು ವಿದ್ಯಾರ್ಥಿಗಳ ಕೈಯಲ್ಲಿ ಇದೆ ಎಂದು ಹೇಳಿದರು.
6ನೇ ತರಗತಿಯಿಂದ AI ತರಬೇತಿ ಕೊಡ್ತೀವಿ. ಸರ್ಕಾರಿ ಶಾಲೆ ಅಭಿವೃದ್ಧಿಗೆ CSR ಫಂಡ್ ಬಳಕೆ ಮಾಡ್ತೀವಿ. ನವೆಂಬರ್ 4 ರಂದು ಶಿಕ್ಷಣ ಸಂಸ್ಥೆ, ಕಂಪನಿಗಳ ಸಭೆ ಮಾಡಿ ಒಂದು ನಿಯಮ ಮಾಡ್ತೀವಿ. ಪಂಚಾಯಿತಿ ಮಟ್ಟದ ಶಾಲೆಗಳನ್ನ ನಗರದ ಶಾಲೆ ರೀತಿ ಮಾಡುತ್ತೇವೆ. 15 ಸಾವಿರ ಶಿಕ್ಷಕರ ನೇಮಕಾತಿಗೆ ಆದೇಶ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡೋರಿಗೆ 7.5% ಮೀಸಲಾತಿ ವೃತ್ತಿಪರ ಕೋರ್ಸ್ನಲ್ಲಿ ಕೊಡ್ತಾ ಇದ್ದೇವೆ. ಗ್ರಾಮೀಣ ಮಕ್ಕಳಿಗೆ ಅನುಕೂಲ ಆಗಲು ಈ ಮೀಸಲಾತಿ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ; ಸಿಎಂ ಸೇರಿ ಗಣ್ಯರಿಂದ ಶುಭಾಶಯ
ವಿದ್ಯಾರ್ಥಿಗಳಿಗೆ ಗ್ರಾಮ ವಾಸ್ತವ್ಯ ಮಾಡಲು ತೀರ್ಮಾನ ಮಾಡಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಮತ್ತು 10 ಜಿಲ್ಲೆಯಲ್ಲಿ ಇದನ್ನು ಮಾಡ್ತಾ ಇದ್ದೇವೆ. ಎರಡನೇ ಹಂತದಲ್ಲಿ 2500 ವಿದ್ಯಾರ್ಥಿಗಳಿಗೆ ಗ್ರಾಮ ವಾಸ್ತವ್ಯ ಮಾಡ್ತೀವಿ. ಗ್ರಾಮೀಣ ಭಾಗದ ವ್ಯವಸ್ಥೆ ಮಕ್ಕಳಿಗೆ ತಿಳಿಸಬೇಕು. ಮೊದಲು ನಗರ ಮಕ್ಕಳಿಗೆ ಈ ಮಹತ್ವದ ಕಾರ್ಯಕ್ರಮ ಮಾಡ್ತಾ ಇದ್ದೇವೆ. ಗ್ರಾಮಾನುಭವ ಇದಕ್ಕಾಗಿ ಮಾಡ್ತಾ ಇದ್ದೇವೆ. ಏಷ್ಯನ್ ಗೇಮ್ಸ್ನಲ್ಲಿ 8 ಜನ ಪದಕ ತಂದು ಕೀರ್ತಿ ಕೊಟ್ಟಿದ್ದಾರೆ. ಪದಕ ಪಡೆದವರಿಗೆ 1 ಕೋಟಿ, 70 ಲಕ್ಷ, 50 ಲಕ್ಷ ಪ್ರೋತ್ಸಾಹ ಧನ ನೀಡಿದ್ದೇವೆ. ಪ್ಯಾರಾ ಒಲಿಂಪಿಕ್ ಸಿದ್ಧತೆಗೆ ಆರ್ಥಿಕ ಸಹಾಯ ಮಾಡಿದ್ದೇವೆ. ಕ್ರೀಡಾಪಟುಗಳಿಗೆ 3% ಉದ್ಯೋಗ ಮೀಸಲಾತಿ ಕೊಡಲಾಗಿದೆ. ಒಲಿಂಪಿಕ್ಗೆ ಸಿದ್ಧರಾಗಿ. ನಿಮ್ಮ ಜೊತೆ ಸರ್ಕಾರ ಇದೆ. ಕರ್ನಾಟಕದಲ್ಲಿ ನಶೆ ಮುಕ್ತ ಕರ್ನಾಟಕ ಮಾಡಬೇಕು. ಎಲ್ಲರು ಒಂದಾಗಬೇಕು. ಭಾರತ್ ಜೋಡೋ ಯುವಕರ ಸಂಘ ನಾಯಕತ್ವ ಬೆಳೆಸಲು ಪ್ರಾರಂಭ ಮಾಡಿದ್ದೇವೆ. 10 ಸಾವಿರ ಸಂಘ ಪ್ರಾರಂಭ ಮಾಡಿದ್ದೇವೆ. ಎಸ್ಎಸ್ಎಲ್ಸಿ ಆದ ಮೇಲೆ ನೀವು ಸಂಘಕ್ಕೆ ಸೇರಿ ಎಂದು ಸಿಎಂ ಕರೆ ನೀಡಿದರು.
