ಕರ್ನಾಟಕಕ್ಕಿಂತ ಮೊದಲು ಹಲವು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದ ಕಾಂಗ್ರೆಸ್ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸ್ಥಿತಿ (Himachal Economic Crisis) ವಿಷಮಿಸಿದೆ. ಪರ್ವತಗಳಿಂದ ಸುತ್ತುವರಿದಿರುವ ಹಿಮಾಚಲ ಪ್ರದೇಶದಲ್ಲಿ ಸಾಲದ ಪರ್ವತ ಹೆಚ್ಚಾಗುತ್ತಿದೆ. ಹಾಗಾಗಿ ಇತ್ತೀಚಿನ ಬೆಳವಣಿಗೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಮೇಲಿನ ದರ 60 ಪೈಸೆ ಹೆಚ್ಚಳವಾಗಿದೆ.

ಹಣದುಬ್ಬರ ಅಥವಾ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಈ ದರ ಏರುತ್ತಿಲ್ಲ. ಬದಲಿಗೆ ವಿಧವಾ ಮತ್ತು ಅನಾಥ ಕಲ್ಯಾಣ ಸೆಸ್ (Widow and Orphan Cess) ಹೆಸರಿನಲ್ಲಿ 60 ಪೈಸೆ ಕರ ಸಂಗ್ರಹಿಸಲು ಸುಖ್ವಿಂದರ್ ಸಿಂಗ್(Sukhvinder Singh Sukhu) ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಮುಂದಾಗಿದೆ.
ರಾಜ್ಯ ಮೌಲ್ಯವರ್ಧಿತ ತೆರಿಗೆ (VAT) ಕಾಯ್ದೆಯಡಿ ರಾಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆಯು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ತೈಲ ಸಂಸ್ಥೆಗಳು ಡೀಲರ್‌ಗಳಿಗೆ ತೈಲ ಮಾರಾಟ ಮಾಡುವ ಆರಂಭಿಕ ಹಂತದಲ್ಲೇ ಈ ಸೆಸ್ ಅನ್ವಯವಾಗಲಿದೆ. ಸದ್ಯಕ್ಕೆ 60 ಪೈಸೆ ಹೆಚ್ಚಳ ಮಾಡಲಾಗಿದ್ದರೂ, ಶಾಸನಬದ್ಧವಾಗಿ ಲೀಟರ್‌ಗೆ ಗರಿಷ್ಠ 5 ರೂಪಾಯಿವರೆಗೆ ಸೆಸ್ ವಿಧಿಸಲು ಸರ್ಕಾರಕ್ಕೆ ಅವಕಾಶವಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ, ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಅಂದ್ರೆ 2022ರ ಮಾರ್ಚ್ ವರೆಗೆ ಸಾಲದ ಪ್ರಮಾಣ 69 ಸಾವಿರ ಕೋಟಿ ರೂ.ಗಳಷ್ಟಿತ್ತು. ಆದ್ರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2024ರ ಮಾರ್ಚ್ ವೇಳೆಗೆ ಸಾಲದ ಹೊರೆ 86,600 ಕೋಟಿ ರೂ.ಗಿಂತಲೂ ಹೆಚ್ಚಾಗಿದೆ. 2025-26ನೇ ಹಣಕಾಸು ವರ್ಷಕ್ಕೆ ಸಾಲದ ಪ್ರಮಾಣ 1.03 ಲಕ್ಷ ಕೋಟಿ ರೂ.ಗಳಷ್ಟಿದ್ದು, 2026-27ರ ವೇಳೆಗೆ 1.12 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದಕ್ಕೆ ವಿಧಾನಸಭಾ ಚುನಾವಣೆ ವೇಳೆ ಸರ್ಕಾರ ಘೋಷಣೆ ಮಾಡಿದ ಉಚಿತ ಭರವಸೆಗಳೇ ಕಾರಣ. ಉಚಿತ ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿ ಸಾಲದ ಹೊರೆ ಮತ್ತಷ್ಟು ಹೆಚ್ಚಳವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಹಿಮಾಚಲ ರಾಜ್ಯ ಸರ್ಕಾರ ನೀಡಿದ್ದ ಭರವಸೆಗಳು ಏನು? ಸಾಲದ ಹೊರೆ ಏಕೆ ಹೆಚ್ಚಾಗಿದೆ? ಎಂಬುದರ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಹಿಮಾಚಲ ಸರ್ಕಾರದ ಉಚಿತ ಭರವಸೆಗಳೇನು?
2022ರ ವಿಧಾನಸಭಾ ಚುನಾವಣೆ ವೇಳೆ ಹಿಮಾಚಲ ಸರ್ಕಾರ ಹಲವು ಉಚಿತ ಭರವಸೆಗಳನ್ನು ನೀಡಿದೆ.
* ರಾಜ್ಯದ ಎಲ್ಲ ಮನೆಗಳಿಗೆ 125 ಯುನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಕೆ
* 10, 12ನೇ ತರಗತಿ ವಿದ್ಯಾರ್ಥಿಗಳಿಗೆ 20,000 ಉಚಿತ ಲ್ಯಾಪ್‌ಟಾಪ್
* 10 ಲಕ್ಷ ರೂ. ಮೌಲ್ಯದ ಟ್ಯಾಕ್ಸಿ ಖರೀದಿಸುವವರಿಗೆ 5 ಲಕ್ಷ ರೂ. ಸಹಾಯಧನ
* 1 ಕೋಟಿ ರೂ. ಮೌಲ್ಯದ ಬಸ್ ಖರೀದಿ ಮಾಡಿದರೆ 50 ಲಕ್ಷ ರೂ. ಸಹಾಯಧನ
* ಹಿಮಾಚಲ ಪ್ರದೇಶದ ಮಹಿಳೆಯರಿಗೆ 1,500 ರೂ. ಮಾಸಿಕ ಸಹಾಯಧನ
* ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು, ಹಳೇ ಪಿಂಚಣಿ ಯೋಜನೆ ಜಾರಿ

ಖರ್ಚು ವೆಚ್ಚ ಹೇಗಿದೆ?
2022ರಲ್ಲಿ ಹಿಮಾಚಲದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿದ್ದ ಕಾಂಗ್ರೆಸ್ ಹಲವು ಉಚಿತ ಭರವಸೆಗಳನ್ನು ನೀಡಿತ್ತು. ಇದೀಗ ಈ ಉಚಿತ ಗ್ಯಾರಂಟಿಗಳೇ ಸರ್ಕಾರಕ್ಕೆ ಮುಳುವಾದಂತೆ ಕಾಣುತ್ತಿದೆ. ಏಕೆಂದರೆ ಹಿಮಾಚಲ ಸರ್ಕಾರದ ಬಜೆಟ್‌ನ 40 ಪ್ರತಿಶತದಷ್ಟು ವೇತನ ಮತ್ತು ಪಿಂಚಣಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ. ಶೇ.20 ರಷ್ಟು ಸಾಲ ಮತ್ತು ಬಡ್ಡಿ ಮರುಪಾವತಿಗೆ ಖರ್ಚಾಗುತ್ತಿದೆ. ಇದನ್ನು ಹೊರತುಪಡಿಸಿ ಸುಖ್ವಿಂದರ್ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ. ನೀಡುವ ಭರವಸೆ ನೀಡಿದ್ದು, ಇದಕ್ಕೆ ವಾರ್ಷಿಕ 800 ಕೋಟಿ ರೂ. ಖರ್ಚು ಮಾಡುತ್ತಿದೆ. ಜೊತೆಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ 1,000 ಕೋಟಿ ರೂ., ಉಚಿತ ವಿದ್ಯುತ್ ಯೋಜನೆಗೆ ವಾರ್ಷಿಕ 18,000 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಮೂರು ಯೋಜನೆಗಳಿಗೆ ಸರ್ಕಾರ ಅಂದಾಜು 20 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.

ಆರ್ಥಿಕ ಅಪಾಯದಲ್ಲಿರುವ ರಾಜ್ಯಗಳು ಯಾವುವು?
ಉಚಿತ ಸಂಸ್ಕೃತಿಯು ಹಿಮಾಚಲದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಬಹುದು. ಜೊತೆಗೆ ಅನಗತ್ಯ ವಸ್ತುಗಳ ಮೇಲೆ ಖರ್ಚು ಮಾಡುವುದರಿಂದ ರಾಜ್ಯಗಳ ಆರ್ಥಿಕ ಸ್ಥಿತಿ ಹದಗೆಡಬಹುದು ಅಂತ ಹಿಂದೆಯೇ ಆರ್‌ಬಿಐ ಎಚ್ಚರಿಸಿತ್ತು. ತನ್ನ ವರದಿಯಲ್ಲಿ ಅರುಣಾಚಲ ಪ್ರದೇಶ, ಬಿಹಾರ, ಗೋವಾ, ಹಿಮಾಚಲ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳೂ ಆರ್ಥಿಕ ಅಪಾಯದಲ್ಲಿದೆ ಎಂದು ಆರ್‌ಬಿಐ ಎಚ್ಚರಿಸಿದೆ. ಅಲ್ಲದೇ 2026-27ರ ವೇಳೆಗೆ ಜಿಎಸ್‌ಡಿಪಿಯ ಶೇ.30ಕ್ಕಿಂತ ಹೆಚ್ಚು ಸಾಲ ಹೊಂದುವ ಸಾಧ್ಯತೆಗಳಿರುವ ಕೆಲವು ರಾಜ್ಯಗಳನ್ನು ಪಟ್ಟಿ ಮಾಡಿದೆ. ಈ ಪೈಕಿ ಪಂಜಾಬ್‌ನ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. 2026-27ರ ವೇಳೆಗೆ, ಪಂಜಾಬ್ ಸರ್ಕಾರದ ಸಾಲವು GSDP ಯ (ರಾಜ್ಯದ ಒಟ್ಟು ದೇಶೀಯ ಉತ್ಪನ್ನ) 45% ಮೀರಬಹುದು. ಏಕೆಂದರೆ ಪಂಜಾಬ್ ತನ್ನ ಒಟ್ಟು ವಾರ್ಷಿಕ ವೆಚ್ಚದ ಶೇ.22ಕ್ಕಿಂತ ಹೆಚ್ಚು ಹಣವನ್ನು ಬಡ್ಡಿ ಪಾವತಿಸಲು ಖರ್ಚು ಮಾಡುತ್ತಿದೆ. ಅದೇ ಸಮಯದಲ್ಲಿ, ರಾಜಸ್ಥಾನ, ಕೇರಳ ಮತ್ತು ಪಶ್ಚಿಮ ಬಂಗಾಳದ ಸಾಲವು GSDP ಯ 35% ರಷ್ಟು ಏರಿಕೆಯಾಗಬಹುದು ಎಂದು ಆರ್‌ಬಿಐ ಎಚ್ಚರಿಸಿದೆ.
ವಿಧವೆಯರು ಹಾಗೂ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಸೆಸ್ ಏಕೆ?
ಸರ್ಕಾರದ ಹೇಳುವಂತೆ, ಈ ಸೆಸ್‌ನಿಂದ ಸಂಗ್ರಹವಾಗುವ ಹಣವನ್ನು ಪ್ರತ್ಯೇಕವಾಗಿ ಅನಾಥ ಮತ್ತು ವಿಧವೆಯರ ಕಲ್ಯಾಣ ನಿಧಿಗೆ ಜಮೆ ಮಾಡಲಾಗುತ್ತದೆ. ಆ ಹಣವನ್ನು ಆರ್ಥಿಕವಾಗಿ ದುರ್ಬಲವಾಗಿರುವ ವಿಧವೆಯರು ಮತ್ತು ಅನಾಥ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಅಂದರೆ, ಇಂಧನ ಮಾರಾಟದಿಂದ ಬರುವ ಈ ಹೆಚ್ಚುವರಿ ಆದಾಯವನ್ನು ನಿರ್ದಿಷ್ಟ ಸಾಮಾಜಿಕ ಕಲ್ಯಾಣ ಉದ್ದೇಶಕ್ಕೆ ಮೀಸಲಿಡುವುದು ಸರ್ಕಾರದ ಉದ್ದೇಶ.

ಗರಿಷ್ಠ ಸೆಸ್ ಎಷ್ಟು?
ಈ ಸೆಸ್‌ಗೆ ಕಾನೂನುಬದ್ಧ ಅವಕಾಶವನ್ನು 2026ರ ಮಾರ್ಚ್‌ನಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆ ಅಂಗೀಕರಿಸಿದ Value Added Tax (Amendment) Bill, 2026 ಮೂಲಕ ಕಲ್ಪಿಸಲಾಯಿತು. ಈ ಕಾಯ್ದೆಯ ಅನ್ವಯ, ಸರ್ಕಾರವು ಪೆಟ್ರೋಲ್ ಮತ್ತು ಹೈ-ಸ್ಪೀಡ್ ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ ಗರಿಷ್ಠ 5 ರೂ.ವರೆಗೆ ಸೆಸ್ ವಿಧಿಸಬಹುದು. ಆದರೆ, ಸರ್ಕಾರ ಪ್ರಸ್ತುತ ಗರಿಷ್ಠ ಮಿತಿಯನ್ನು ಬಳಸಿಲ್ಲ. ಕೇವಲ 60 ಪೈಸೆ ಪ್ರತಿ ಲೀಟರ್‌ಗೆ ಸೆಸ್ ನಿಗದಿಪಡಿಸಿದೆ. ಮುಂದೆ ಈ ದರವನ್ನು ಸರ್ಕಾರ ಅಧಿಸೂಚನೆಯ ಮೂಲಕ ಬದಲಾಯಿಸಬಹುದಾದರೂ, ಅದು ಪ್ರತಿ ಲೀಟರ್‌ಗೆ 5 ರೂ. ಗರಿಷ್ಠ ಮಿತಿ ಮೀರಲು ಸಾಧ್ಯವಿಲ್ಲ.
ಬಿಜೆಪಿಯ ವಿರೋಧ ಏಕೆ?
ಈ ಮಸೂದೆ ವಿಧಾನಸಭೆಯಲ್ಲಿ ಮಂಡನೆಯಾದಾಗಲೇ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸೆಸ್ ವಿಧಿಸುವುದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ, ಮಸೂದೆ ಅಂಗೀಕಾರದ ವೇಳೆ ಸದನದಿಂದ ಹೊರನಡೆದಿದ್ದರು. ವಿಪಕ್ಷ ನಾಯಕ ಜೈರಾಮ್ ಠಾಕೂರ್, ವಿಧವೆ ಮತ್ತು ಅನಾಥರ ಹೆಸರಿನಲ್ಲಿ ಜನರ ಮೇಲೆ ಹೊಸ ತೆರಿಗೆ ಹೊರಿಸುವುದು ಸರಿಯಲ್ಲ ಎಂದು ಸರ್ಕಾರವನ್ನು ಟೀಕಿಸಿದ್ದರು. ಹಿಮಾಚಲ ಪ್ರದೇಶದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪಕ್ಕದ ರಾಜ್ಯಗಳಿಗಿಂತ ಹೆಚ್ಚಾದರೆ, ಗಡಿ ಜಿಲ್ಲೆಗಳ ಗ್ರಾಹಕರು ಪಂಜಾಬ್, ಹರಿಯಾಣ ಅಥವಾ ಚಂಡೀಗಢಕ್ಕೆ ತೆರಳಿ ಇಂಧನ ತುಂಬಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ವಾದಿಸಿತ್ತು.

ಬೆಲೆ ಏರಿಕೆಯ ಪರಿಣಾಮ ಏನು?
ವಿರೋಧ ಪಕ್ಷಗಳ ಮತ್ತೊಂದು ಪ್ರಮುಖ ವಾದವೆಂದರೆ, ಇಂಧನದ ಮೇಲಿನ ಯಾವುದೇ ಹೆಚ್ಚುವರಿ ಸೆಸ್ ಕೇವಲ ವಾಹನ ಮಾಲೀಕರ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾದರೆ, ಸಾರಿಗೆ ವೆಚ್ಚ ಹೆಚ್ಚಾಗಬಹುದು, ಸರಕು ಸಾಗಣೆ ದುಬಾರಿಯಾಗಬಹುದು. ವ್ಯಾಪಾರ ಮತ್ತು ವಾಣಿಜ್ಯ ವೆಚ್ಚ ಹೆಚ್ಚಾಗಬಹುದು. ಅಂತಿಮವಾಗಿ ವಿವಿಧ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ, ಬಿಜೆಪಿ ಇದನ್ನ ಜನರ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆ ಎಂದು ಬಣ್ಣಿಸಿದೆ.
ಸರ್ಕಾರದ ಸಮರ್ಥನೆ ಏನು?
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ವಿಧವೆಯರು ಮತ್ತು ಅನಾಥ ಮಕ್ಕಳಂತಹ ಆರ್ಥಿಕವಾಗಿ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸ್ಥಿರ ಮತ್ತು ನಿರ್ದಿಷ್ಟ ಆದಾಯದ ಮೂಲ ಅಗತ್ಯವಿದೆ ಎಂಬುದು ಸರ್ಕಾರದ ನಿಲುವು. ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲೂ 5 ರೂ. ಎಂಬುದು ಕೇವಲ ಅನುಮತಿಸಲಾದ ಗರಿಷ್ಠ ಮಿತಿ ಮಾತ್ರ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು. ಸರ್ಕಾರವು ಅಗತ್ಯಕ್ಕೆ ಅನುಗುಣವಾಗಿ ಅದಕ್ಕಿಂತ ಕಡಿಮೆ ದರವನ್ನ ನಿಗದಿಪಡಿಸಬಹುದು ಎಂಬುದನ್ನು ಅವರು ಒತ್ತಿ ಹೇಳಿದ್ದರು.

‘ವಿಧವೆ–ಅನಾಥರ ಸೆಸ್’ ಎಂದರೇನು?
ಸರಳವಾಗಿ ಹೇಳುವುದಾದರೆ, ಪೆಟ್ರೋಲ್/ಡೀಸೆಲ್ ಖರೀದಿ → ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚುವರಿ ಸೆಸ್ → ಸರ್ಕಾರದ ಅನಾಥ ಮತ್ತು ವಿಧವೆಯರ ಕಲ್ಯಾಣ ನಿಧಿ (Orphan and Widow Welfare Fund) → ವಿಧವೆಯರು ಮತ್ತು ಅನಾಥ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು.
ಇದು ಸಾಮಾನ್ಯ ಇಂಧನ ತೆರಿಗೆಯ ಹೆಚ್ಚಳಕ್ಕಿಂತ ಭಿನ್ನವಾಗಿ, ನಿರ್ದಿಷ್ಟ ಸಾಮಾಜಿಕ ಕಲ್ಯಾಣ ಉದ್ದೇಶಕ್ಕಾಗಿ ಮೀಸಲಿಡಲಾಗಿರುವ ಸೆಸ್ ಎಂದು ಸರ್ಕಾರ ಹೇಳುತ್ತಿದೆ.
ಆರ್ಥಿಕ ತಜ್ಞರು ಸೂಚಿಸುವ ಪರಿಹಾರವೇನು?
* ಆಸ್ತಿ ತೆರಿಗೆಯಲ್ಲಿ ಕ್ರಮೇಣ ಹೆಚ್ಚಳ ಮಾಡುವುದು
* ಕುಡಿಯುವ ನೀರು ಮತ್ತು ವಿವಿಧ ಸರ್ಕಾರಿ ಸೇವೆಗಳಿಗೆ ನಿಯಮಿತವಾಗಿ ಶುಲ್ಕ ಹೆಚ್ಚಿಸುವುದು
* ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸುವುದು, ಜೊತೆಗೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಸುಧಾರಣೆ ತರುವುದು.
* ಉಚಿತ ಕೊಡುಗೆಗಳನ್ನು ಪರಿಷ್ಕರಿಸುವುದು.
