ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸರ್ಕಾರಿ ಶಾಲೆಗಳ (Government School) ಶಾಲಾ ಸಮಯ ಬದಲಾವಣೆ ಮಾಡುವ ಬಗ್ಗೆ ಶಿಕ್ಷಣ (Bengaluru school timings) ಇಲಾಖೆ ಮತ್ತೊಮ್ಮೆ ಚಿಂತನೆ ನಡೆಸಿದೆ.
ಶಾಲೆಗಳನ್ನು ಈಗಿರುವ ಸಮಯಕ್ಕಿಂತ 30 ನಿಮಿಷ ಅಥವಾ ಒಂದು ಗಂಟೆ ಮುಂಚಿತವಾಗಿ ಆರಂಭಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಶಾಲಾ ಸಮಯ ಬದಲಾವಣೆ ಸಂಬಂಧ ಶಿಕ್ಷಣ ಇಲಾಖೆ ವಿವಿಧ ಇಲಾಖೆಗಳ ಜೊತೆ ಚರ್ಚೆ ನಡೆಸುತ್ತಿದೆ. ಪೊಲೀಸ್ ಇಲಾಖೆ, ಟ್ರಾಫಿಕ್ ಇಲಾಖೆ, ಪೋಷಕರು ಹಾಗೂ ವಿವಿಧ ಸಂಘಟನೆಗಳ ಅಭಿಪ್ರಾಯ ಪಡೆಯಲು ಚರ್ಚೆ ನಡೆಸಲಾಗುತ್ತಿದೆ. ಅಂತಿಮವಾಗಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಸದ್ಯ ಸರ್ಕಾರಿ, ಖಾಸಗಿ ಶಾಲೆಗಳ ಸಮಯ ಹೇಗಿದೆ?
ಸದ್ಯ ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳು ಬೆಳಗ್ಗೆ 8:30ರಿಂದ ಸಂಜೆ 3:30ರವರೆಗೆ ತರಗತಿಗಳನ್ನು ನಡೆಸುತ್ತಿವೆ. ಕೆಲ ಶಾಲೆಗಳಲ್ಲಿ ಅರ್ಧ ಗಂಟೆಯಷ್ಟು ಸಮಯದ ವ್ಯತ್ಯಾಸವಿದೆ.
ಇನ್ನು ಸರ್ಕಾರಿ ಶಾಲೆಗಳು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯುತ್ತಿವೆ. ಕೆಲವು ಸರ್ಕಾರಿ ಶಾಲೆಗಳ ಸಮಯದಲ್ಲೂ ಅರ್ಧ ಗಂಟೆಯಷ್ಟು ವ್ಯತ್ಯಾಸವಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನೂ ಖಾಸಗಿ ಶಾಲೆಗಳ ಮಾದರಿಯಲ್ಲಿ ಬೆಳಗ್ಗೆ 8:30ರಿಂದ ಸಂಜೆ 3:30ರವರೆಗೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರಿ ಶಾಲೆಗಳ ಸಮಯವನ್ನು ಬದಲಾಯಿಸುವಂತೆ ಶಿಕ್ಷಕರಿಂದಲೂ ಮನವಿ ಬಂದಿದೆ.
ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸಮಯ ಬದಲಾವಣೆ
ಬೆಂಗಳೂರಿನಲ್ಲಿ ಬೆಳಗ್ಗೆ 8 ಗಂಟೆಯ ನಂತರ ಹಾಗೂ ಸಂಜೆ 4:30ರ ನಂತರ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಶಾಲೆಗೆ ತೆರಳುವ ಹಾಗೂ ಶಾಲೆಯಿಂದ ಮನೆಗೆ ವಾಪಸ್ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಹುಟ್ಟೂರು ದೊಡ್ಡಾಲಹಳ್ಳಿಗೆ ಸಿಎಂ ಡಿಕೆಶಿ ಭೇಟಿ – ಕುಟುಂಬ ಸಮೇತ ಹಿರಿಯರ ಸಮಾಧಿಗೆ ಪೂಜೆ
ಶಾಲಾ ಸಮಯವನ್ನು ಮುಂಚಿತವಾಗಿ ಬದಲಾಯಿಸಿದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪೀಕ್ ಅವರ್ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಈ ಪ್ರಸ್ತಾಪ ಮಾಡಲಾಗಿದೆ.
ಈ ಕುರಿತು ವಿವಿಧ ಇಲಾಖೆಗಳು, ಪೋಷಕರು ಹಾಗೂ ಸಂಘಟನೆಗಳ ಜೊತೆ ಚರ್ಚೆ ನಡೆಸಿದ ಬಳಿಕ ಶಾಲಾ ಸಮಯ ಬದಲಾವಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.ಇದನ್ನೂ ಓದಿ: ಬಂಗಾಳದಲ್ಲಿ ರಸ್ತೆ, ಸೇತುವೆಗಳ ಹೆಸರು ಬದಲಾವಣೆಗೆ ಹೊಸ ಪ್ರಸ್ತಾವ

