ಬೆಂಗಳೂರು: ಗೃಹಜ್ಯೋತಿ (Gruhajyothi) ಯೋಜನೆಯ ಫಲಾನುಭವಿಗಳಿಗೆ ಬೆಸ್ಕಾಂ (BESCOM) ಶಾಕ್ ಕೊಟ್ಟಿದೆ. ಝೀರೋ ಬಿಲ್ ಬರುತ್ತಿದ್ದ ಮನೆಗಳಿಗೆ ಇದೀಗ ಸಾವಿರಾರು ರೂಪಾಯಿ ಕರೆಂಟ್ ಬಿಲ್ (Electricity Bill) ಬಂದಿದೆ. ಶಿವಾಜಿನಗರ ಕ್ಷೇತ್ರದ ಮಖಾನ್ ಕಾಂಪೌಂಡ್ ಏರಿಯಾದಲ್ಲಿ ಈ ಸಮಸ್ಯೆ ಎದುರಾಗಿದ್ದು, ಜನರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಿಗುತ್ತಿದ್ದ ಫಲಾನುಭವಿಗಳಿಗೆ ಇದೀಗ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ನೀಡಲಾಗಿದೆ. ನಾಲ್ಕು ಸಾವಿರ, ಐದು ಸಾವಿರ ರೂಪಾಯಿ ಹೀಗೆ ದುಬಾರಿ ಮೊತ್ತದ ಬಿಲ್ ಕೈ ಸೇರಿದ್ದರಿಂದ ಗ್ರಾಹಕರು ಶಾಕ್ ಆಗಿದ್ದಾರೆ. ಶಿವಾಜಿನಗರ ಕ್ಷೇತ್ರದ ಮಖಾನ್ ಕಾಂಪೌಂಡ್ ಏರಿಯಾದಲ್ಲಿ ಹಲವು ಮನೆಗಳಿಗೆ ಈ ರೀತಿಯ ದುಬಾರಿ ವಿದ್ಯುತ್ ಬಿಲ್ ಬಂದಿದೆ. ಝೀರೋ ಬಿಲ್ ಬರುತ್ತಿದ್ದ ಮನೆಗಳಿಗೆ ಏಕಾಏಕಿ ಸಾವಿರಾರು ರೂಪಾಯಿ ಬಿಲ್ ನೀಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರ, ವಿದ್ಯುತ್ ಅಭಾವ, ವಿಘ್ನ ನಿವಾರಣೆಗೆ ಗಣಪನಲ್ಲಿ ಪ್ರಾರ್ಥಿಸೋಣ: ಸಿಎಂ
ಕಳೆದ ತಿಂಗಳೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆಗ ತಾಂತ್ರಿಕ ಸಮಸ್ಯೆಯಿಂದಾಗಿ ತಪ್ಪಾದ ಬಿಲ್ ಬಂದಿದೆ ಎಂದು ಬೆಸ್ಕಾಂ ಸಿಬ್ಬಂದಿ ಸಮಜಾಯಿಷಿ ನೀಡಿದ್ದರು. ಆದರೆ ಇದೀಗ ಮತ್ತೆ ಅದೇ ಸಮಸ್ಯೆ ಮರುಕಳಿಸಿದೆ. ಈ ತಿಂಗಳೂ ನಾಲ್ಕು ಸಾವಿರ, ಐದು ಸಾವಿರ ರೂಪಾಯಿ ಮೊತ್ತದ ಬಿಲ್‌ಗಳು ಬಂದಿದ್ದು, ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಅಂತ ನಾಮಕರಣಕ್ಕೆ ಮನವಿ

