ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಮೊದಲ ಭಾಗದ ಮೊದಲ ಹಾಡು ‘ಜೈ ಜೈ ರಾಮ್’ ಇದೀಗ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.
‘ಜೈ ಜೈ ರಾಮ್’ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ಬರೆದಿದ್ದು, ಅರಿಜಿತ್ ಸಿಂಗ್ ಹಾಗೂ ಶ್ರೇಯಾ ಘೋಷಾಲ್ ಹಾಡಿಗೆ ಧ್ವನಿ ನೀಡಿದ್ದಾರೆ.
ಸೆಪ್ಟೆಂಬರ್ 14ರಂದು ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ರಾಮ-ಸೀತೆಯ ಪಾತ್ರಗಳಲ್ಲಿ ಕಾಣಿಸಿಕೊಂಡ ‘ಸಿಯಾ ರಾಮ್’ ಪೋಸ್ಟರ್ ಬಿಡುಗಡೆಯಾಗಿತ್ತು. ಇದೀಗ ಅದರ ಬೆನ್ನಲ್ಲೇ ‘ಜೈ ಜೈ ರಾಮ್’ ಹಾಡು ಬಿಡುಗಡೆಯಾಗಿದ್ದು, ಸಿನಿಮಾದ ಪ್ರಚಾರಕ್ಕೆ ಮತ್ತಷ್ಟು ವೇಗ ಸಿಕ್ಕಿದೆ.
ಬ್ರಾಹ್ಮಿ ಮುಹೂರ್ತದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್
‘ರಾಮಾಯಣ’ ಸಿನಿಮಾದ ಟ್ರೇಲರ್ ಕೂಡ ವಿಶೇಷ ಸಮಯದಲ್ಲಿ ಬಿಡುಗಡೆಯಾಗಿತ್ತು. ಜುಲೈ 30ರಂದು ಬೆಳಗ್ಗೆ 4:15ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ವಿಶ್ವಾದ್ಯಂತ ಟ್ರೇಲರ್ ರಿಲೀಸ್ ಮಾಡಲಾಗಿತ್ತು.
ಟ್ರೇಲರ್ ಅನ್ನು ಜುಲೈ 24ರಂದು ಬಿಡುಗಡೆ ಮಾಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಬಳಿಕ ಬಿಡುಗಡೆ ದಿನಾಂಕವನ್ನು ಮುಂದೂಡಿ ಜುಲೈ 30ರಂದು ರಿಲೀಸ್ ಮಾಡಲಾಗಿತ್ತು.
ವಿಶ್ವದಾದ್ಯಂತ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಸಿನಿಮಾದ ಟ್ರೇಲರ್ ಅನ್ನು ಸಾರ್ವಜನಿಕ ಬಿಡುಗಡೆಗೂ ಮುನ್ನ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಪ್ರದರ್ಶಿಸಲಾಗಿತ್ತು. ಜಾಗತಿಕ ವಿತರಣೆಯಲ್ಲಿ ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ಕೂಡ ಕೈಜೋಡಿಸಿದೆ. ಇದನ್ನೂ ಓದಿ: ಸ್ಪೆಷಲ್ ಸಾಂಗ್ ಔಟ್: ಮಾದಕ ಹೆಜ್ಜೆ ಹಾಕಿ ಪಡ್ಡೆಗಳ ನಿದ್ದೆಗೆಡಿಸಿದ ನಿವಿ
ನವೆಂಬರ್ಗೆ ರಿಲೀಸ್
‘ರಾಮಾಯಣ ಭಾಗ-1’ ದೀಪಾವಳಿ ಸಮಯದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಭಾರತದಲ್ಲಿ ನವೆಂಬರ್ 8, 2026ರಂದು ಸಿನಿಮಾ ಬಿಡುಗಡೆಯಾಗಲಿದೆ.
ಇನ್ನು ಆಸ್ಟ್ರೇಲಿಯಾದಲ್ಲಿ ನವೆಂಬರ್ 5ರಂದು ಸಿನಿಮಾ ಬಿಡುಗಡೆಯಾಗಲಿದೆ. ಅಂದರೆ ಭಾರತಕ್ಕಿಂತ ಮೂರು ದಿನ ಮುಂಚಿತವಾಗಿ ಆಸ್ಟ್ರೇಲಿಯಾ ಪ್ರೇಕ್ಷಕರು ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಇತರ ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೂಡ ಭಾರತಕ್ಕಿಂತ ಮುಂಚಿತವಾಗಿ ಸಿನಿಮಾ ಬಿಡುಗಡೆಯಾಗಲಿದೆ.
ಯಾರು ಯಾವ ಪಾತ್ರದಲ್ಲಿ?
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ನಿರ್ಮಿಸಿದ್ದಾರೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.
ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಸನ್ನಿ ಡಿಯೋಲ್ ಹನುಮಾನ್ ಪಾತ್ರದಲ್ಲಿ ನಟಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಲಾರಾ ದತ್ತ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ರಾಮಾಯಣ’ ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಭಾಗ ನವೆಂಬರ್ 8, 2026ರಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
ಟ್ರೇಲರ್ ಬಳಿಕ ಇದೀಗ ‘ಜೈ ಜೈ ರಾಮ್’ ಹಾಡು ಕೂಡ ಬಿಡುಗಡೆಯಾಗಿರುವುದರಿಂದ ಸಿನಿಮಾ ಕುರಿತ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.ಇದನ್ನೂ ಓದಿ: ಪಬ್ಲಿಕ್ ಟಿವಿ ಕಚೇರಿಯಲ್ಲಿ 14ನೇ ವರ್ಷದ ಗಣೇಶೋತ್ಸವ ಸಂಭ್ರಮ

