ಬೆಂಗಳೂರು: ರಾಜ್ಯದ ಜನಪ್ರಿಯ ಸುದ್ದಿವಾಹಿನಿ ಪಬ್ಲಿಕ್ ಟಿವಿ(PUBLiC TV) ಕಚೇರಿಯಲ್ಲಿ 14ನೇ ವರ್ಷದ ಗಣೇಶೋತ್ಸವ(Ganesh Chaturthi) ಸಂಭ್ರಮ ಮನೆಮಾಡಿದೆ. ವಿನಾಯಕ ಚತುರ್ಥಿಯ ಶುಭ ಸಂದರ್ಭದಲ್ಲಿ ಇಂದು ಬೆಳಗ್ಗೆ ಸಂಸ್ಥೆಯ ಆವರಣದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಘ್ನವಿನಾಶಕ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.
ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್, ಸಿಇಒ ಅರುಣ್ ಕುಮಾರ್, ಸಂಪಾದಕರಾದ ಸಿ. ದಿವಾಕರ್ ಸೇರಿದಂತೆ ವಾಹಿನಿಯ ಸಿಬ್ಬಂದಿ ಪೂಜೆಯಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡರು. ಮಹಾಮಂಗಳಾರತಿಯ ಬಳಿಕ ನೆರೆದಿದ್ದ ಎಲ್ಲಾ ಸಹೋದ್ಯೋಗಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಕಚೇರಿಯ ಆವರಣದಲ್ಲಿ ಮೂರು ದಿನಗಳ ಕಾಲ ಗಣಪತಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಮೂರನೇ ದಿನವಾದ ಬುಧವಾರ ಸಂಜೆ ಭಕ್ತಿಭಾವದ ಮೆರವಣಿಗೆಯೊಂದಿಗೆ ನಗರದ ಪ್ರಸಿದ್ಧ ಜೆ.ಪಿ. ಪಾರ್ಕ್ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

