- ಅಂತರ ಕಾಯ್ದುಕೊಳ್ಳಲು ಹೇಳಿದ್ದಕ್ಕೆ ದುಷ್ಕರ್ಮಿಯಿಂದ ಕೃತ್ಯ
ಚಂಡೀಗಢ: ತಮ್ಮ ಬೈಕ್‌ನಿಂದ ಅಂತರ ಕಾಯ್ದುಕೊಳ್ಳುಂತೆ ಹೇಳಿದ್ದಕ್ಕೆ ಕಾರು (Car) ಚಾಲಕನೊಬ್ಬ ಲೇಡಿ ಬೈಕರ್‌ನ್ನು (Woman Biker) ಬೆನ್ನಟ್ಟಿ ಕಾರು ಡಿಕ್ಕಿ ಹೊಡೆಸಿದ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ. ಮಹಿಳೆಯ ಬೈಕ್‌ಗೆ ಕಾರು ಡಿಕ್ಕಿಯಾದ (Accident) ವಿಡಿಯೋ ಆಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೈಕರ್ ಸಿಯಾ ಎಂಬವರು ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಮಹಿಳೆ ರಸ್ತೆ ಮೇಲೆ ಬಿದ್ದು ಸ್ವಲ್ಪ ದೂರು ಉರುಳಿಕೊಂಡು ಹೋಗಿದ್ದಾರೆ. ಇದರಿಂದ ಮಹಿಳೆಗೆ ಗಾಯಗಳಾಗಿವೆ.
ಮಹಿಳೆ ಹಂಚಿಕೊಂಡ ವಿಡಿಯೋದಲ್ಲಿ, ಬಿಳಿ ಸೆಡಾನ್ ಕಾರಿನಲ್ಲಿದ್ದವರು ತನ್ನನ್ನು ಹಿಂಬಾಲಿಸುತ್ತಿದ್ದರು ಮತ್ತು ಚಾಲಕ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ ಎಂದು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಅವರು ಚಾಲಕನಿಗೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಹೇಳಿದೆ. ಆದರೆ, ಚಾಲಕ ವಾಹನವನ್ನು ಪಕ್ಕಕ್ಕೆ ನಿಲ್ಲಿಸುವಂತೆ (ಸೈಡ್‌ಗೆ ಬರುವಂತೆ) ಹೇಳಿದ. ಕಾರಿನಲ್ಲಿದ್ದವರು ಮದ್ಯಪಾನ ಮಾಡಿರುವ ಶಂಕೆ ಇದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಕಾರಿನ ಚಾಲಕ ಬೈಕ್‌ನ ಮುಂದೆ ಅಡ್ಡ ಬರುವುದನ್ನು ತಪ್ಪಿಸಲು ನಾನು ಕಾರಿಗಿಂತ ಮುಂದೆ ಸಾಗಲು ಪ್ರಯತ್ನಿಸಿದೆ. ಆದರೂ ಅವರು ಕಾರಿನಲ್ಲಿ ನನ್ನನ್ನು ಹಿಂಬಾಲಿಸಿದರು. ಈ ವೇಳೆ ಸಹ-ಸವಾರರೊಬ್ಬರು ಆ ವಾಹನದಿಂದ ರಕ್ಷಣೆ ನೀಡುವ ಉದ್ದೇಶದಿಂದ ತಮ್ಮ ಬೈಕ್‌ನ್ನು ನನ್ನ ಬೈಕ್‌ನ ಹಿಂಭಾಗಕ್ಕೆ ತಂದರು. ಈ ವೇಳೆ ಕಾರು ದಿಕ್ಕು ಬದಲಿಸಿ ನನ್ನ ಬೈಕ್‌ಗೆ ಪಕ್ಕದಿಂದ ಡಿಕ್ಕಿ ಹೊಡೆದಿದೆ. ಬಳಿಕ ಅಲ್ಲಿಂದ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ (Hit and Run) ಎಂದು ಮಹಿಳೆ ವಿವರಿಸಿದ್ದಾರೆ.
ನಂತರ ಸಿಯಾ ಅವರನ್ನು ಹತ್ತಿರದ ಆಸ್ಪತ್ರೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗುರುಗ್ರಾಮ್ ಸಂಚಾರ ಠಾಣೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕಾರು ಮಾಲೀಕ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಕಾರಿನ ಮಾಲೀಕ, ಕಾರನ್ನು ತಮ್ಮ ಸ್ನೇಹಿತರೊಬ್ಬರು ಪಡೆದಿದ್ದರು. ಅವರು ಅದನ್ನು ಮತ್ತೊಬ್ಬ ವ್ಯಕ್ತಿಗೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ಆ ವ್ಯಕ್ತಿಯೇ ಕಾರನ್ನು ಚಲಾಯಿಸುತ್ತಿದ್ದ ಎಂದು ಮಾಲೀಕರು ಆರೋಪಿಸಿದ್ದಾರೆ.
ನಾನು ಊರಿನಲ್ಲಿಲ್ಲ ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಶಾಲಾ ಸ್ನೇಹಿತ ನನ್ನ ವಾಹನವನ್ನು ಎರಡು ದಿನಗಳ ಕಾಲ ತೆಗೆದುಕೊಂಡು ಹೋಗಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ.
ಆರೋಪಿ ಎಲ್ಲಿದ್ದಾನೆ ಮತ್ತು ಕಾರು ಎಲ್ಲಿದೆ ಎಂಬ ಬಗ್ಗೆ ತನಗೂ ಹಾಗೂ ತನ್ನ ಸ್ನೇಹಿತನಿಗೂ ಯಾವುದೇ ಮಾಹಿತಿ ಇಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.
ಘಟನೆ ಸಂಬಂಧ ಗುರುಗ್ರಾಮ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


