Dakshina KannadaDistrictsKarnatakaLatestMain Post

ಖಾದರ್ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ, ಅಡ್ಯಾರ್‌ಗೆ ಹೋಗಿ ಕ್ರಿಕೆಟ್ ಆಡ್ತಿದ್ದಾರೆ- ಹಿಜಬ್ ವಿದ್ಯಾರ್ಥಿನಿ ಅಸಮಾಧಾನ

ಮಂಗಳೂರು: ಶಾಸಕ ಯು.ಟಿ ಖಾದರ್ ವಿರುದ್ಧ ಹಿಜಬ್ ವಿದ್ಯಾರ್ಥಿನಿ ಗೌಸಿಯಾ ಅಸಮಾಧಾನ ಹೊರಹಾಕಿದ್ದಾಳೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ, ನಾವು ಶಾಸಕ ಯು.ಟಿ ಖಾದರ್ ಅವರನ್ನು ಭೇಟಿ ಮಾಡಿದ್ದೇವೆ. ಆದರೆ ಅವರಿಂದ ನಮಗೆ ಸರಿಯಾಗಿ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅವರು ಅಡ್ಯಾರ್‍ಗೆ ಹೋಗಿ ಕ್ರಿಕೆಟ್ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆ, ಸ್ತ್ರೀಪರವಾಗಿರುವವರಿಗೆ ಬಹಿರಂಗ ಆಹ್ವಾನ ನೀಡುತ್ತಿದ್ದೇವೆ. ಈ ಸಮಸ್ಯೆಗೆ ಪರಿಹಾರ ತೆಗೆದುಕೊಡುವುದಾದರೆ ಅವರ ಜೊತೆ ನಾವು ಸೇರುತ್ತೇವೆ. ಕಾನೂನಾತ್ಮಕವಾಗಿ ಹೋದ್ರೆ ತುಂಬಾ ಸಮಯ ಹೋಗುತ್ತದೆ. ಈಗಾಗಲೇ ನಮ್ಮ ಹಾಜರಾತಿ ಕಡಿಮೆಯಿದೆ. ಹಾಜರಾತಿ ಇಲ್ಲದಿದ್ರೆ ಪರೀಕ್ಷೆ ಬರೆಯುವುದಕ್ಕೂ ಆಗುವುದಿಲ್ಲ. ಕಾಲೇಜಿಗೆ ಹೋಗಬೇಕೆಂದು ಇದೆ. ಆದರೆ ಕಾಲೇಜಿಗೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಮುಂದೆನಾಗುತ್ತೆ ಎಂದು ನೋಡುತ್ತೇವೆ ಅಂತ ವಿದ್ಯಾರ್ಥಿನಿ ತಿಳಿಸಿದ್ದಾಳೆ. ಇದನ್ನೂ ಓದಿ: ಮಂಗಳೂರಿನಲ್ಲಿ ಹಿಜಬ್ ಹೈಡ್ರಾಮಾ – 12 ಮಂದಿ ಮನೆಗೆ ವಾಪಸ್

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಇಂದು ಕೂಡ ಹೈಡ್ರಾಮ ಮುಂದುವರೆದಿತ್ತು. ಸಿಂಡಿಕೇಟ್ ಸಭೆಯಲ್ಲಿ ಹಿಜಬ್ ಅವಕಾಶ ಇಲ್ಲ ಎಂದು ಹೇಳಿದರೂ, ವಿದ್ಯಾರ್ಥಿಗಳು ಅದನ್ನು ಕ್ಯಾರೇ ಅನ್ನದೆ ಕಾಲೇಜಿಗೆ ಬಂದಿದ್ದಾರೆ. ನಮಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡಿ ಎಂದು ಮತ್ತೆ ಒತ್ತಾಯ ಮಾಡಿದ್ದಾರೆ. ಪ್ರಾಂಶುಪಾಲೆ ಅನುಸೂಯಾ ಅವಕಾಶ ನೀಡದಿದ್ದಾಗ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ದೌಡಾಯಿಸಿದ್ದಾರೆ.

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮೀಟಿಂಗ್ ನಲ್ಲಿ ಇದ್ದ ಡಿಸಿಗೆ ಸುಮಾರು ಒಂದು ಗಂಟೆ ವಿದ್ಯಾರ್ಥಿನಿಯರು ಕಾದರು. ಮುಖ್ಯಮಂತ್ರಿ ಭೇಟಿ ಕುರಿತು ಹಲವಾರು ಸಭೆಯಲ್ಲಿ ಬ್ಯುಸಿಯಾಗಿದ್ದ ಡಿಸಿ ಕಚೇರಿಗೆ ಬಂದು ವಿದ್ಯಾರ್ಥಿನಿಯರ ಜೊತೆ ಮಾತುಕತೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ರೈಯನ್ನು ಕರೆಸಿದ ಡಿಸಿ, ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ವಿದ್ಯಾರ್ಥಿಗಳು ಹಿಜಬ್ ನಮ್ಮ ಹಕ್ಕು ಹಿಜಬ್ ಇಲ್ಲದೆ ನಾವು ತರಗತಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಸಭೆಯಲ್ಲಿ ಯಾವುದೇ ಒಮ್ಮತದ ತೀರ್ಮಾನ ಆಗಿಲ್ಲ.

ಸಭೆಯಲ್ಲಿ ಮೊನ್ನೆ ನಡೆದ ಸಿಂಡಿಕೇಟ್ ತೀರ್ಮಾನದ ಕಡತಗಳನ್ನು ವಿದ್ಯಾರ್ಥಿನಿಯರು ಕೇಳಿದರು. ಡಿಗ್ರಿ ಕಾಲೇಜಿಗೆ ಯೂನಿಫಾರ್ಮ್ ಇಲ್ವಲ್ಲಾ ಎಂದು ಕೇಳಿದ ವಿದ್ಯಾರ್ಥಿನಿಯರಿಗೆ ಡಿಸಿ ಖಡಕ್ಕಾಗಿ ಕಾನೂನಿನ ಪಾಠ ಮಾಡಿದ್ದಾರೆ. ಕಾಲೇಜಿನಲ್ಲಿ ಕೋರ್ಟ್ ನಿಯಮದ ವಿರುದ್ಧ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು. ಕಾನೂನು ಸುವ್ಯವಸ್ಥೆ ಕೈಗೆ ತೆಗೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಡಿಸಿ ಸೂಚನೆ ಕೊಟ್ಟಿದ್ದಾರೆ.

Leave a Reply

Your email address will not be published.

Back to top button