ಬೆಂಗಳೂರು: ವಿಮಾನದಲ್ಲಿ ಆಗಮಿಸಿ ಎಸ್‌ಎನ್‌ಎಲ್‌ನ (BSNL) ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರದ ತಂತಿಗಳನ್ನು(Copper Wire) ಕಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶ (Uttar Pradesh) ಮೂಲದ ಅಂತರಾಜ್ಯ ಕಳ್ಳರ ತಂಡವನ್ನು ಯಶವಂತಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶದ ನಿವಾಸಿಗಳಾದ ರವಿ ಚವ್ಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂದು ಗುರುತಿಸಲಾಗಿದೆ. ಇವರು ಕೇವಲ ಬೆಂಗಳೂರು (Bengaluru) ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಇದೇ ಮಾದರಿಯ ಕಳ್ಳತನ (Theft) ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಸಾರ್ವಜನಿಕರಿಗೆ ಅನುಮಾನ ಬರದಂತೆ ಬಿಎಸ್‌ಎನ್‌ಎಲ್ ನೌಕರರು ಧರಿಸುವ ಮಾದರಿಯಲ್ಲೇ ವಿಶೇಷ ನೀಲಿ ಬಣ್ಣದ ಸಮವಸ್ತ್ರ ಹೊಲಿಸಿಕೊಂಡಿದ್ದರು. ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್‌ಗಳು ಮತ್ತು ರಸ್ತೆ ಬದಿಯ ಫುಟ್‌ಪಾತ್‌ಗಳಲ್ಲಿರುವ ಇಂಟರ್ನೆಟ್ ಬಾಕ್ಸ್‌ಗಳ ಬಳಿ ರಿಪೇರಿ ಮಾಡುವ ನೆಪದಲ್ಲಿ ಹೋಗುತ್ತಿದ್ದರು.
ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟ್ಟರ್ ಬಳಸಿ ಕಬ್ಬಿಣದ ಕಂಬಗಳನ್ನು ಒಡೆದು, ಅದರೊಳಗಿನ ಬೆಲೆಬಾಳುವ ತಾಮ್ರದ ತಂತಿ(Copper Wire) ಮತ್ತು ಮಾಡ್ಯೂಲ್‌ಗಳನ್ನು ಎಗರಿಸುತ್ತಿದ್ದರು. ಇದನ್ನೂ ಓದಿ: ಅವಾಯ್ಡ್ ಮಾಡಿದ್ದಕ್ಕೆ ಬೆಂಕಿಯಿಟ್ಟು ಕೊಲೆ – ಹಂತಕಿಯ ಪ್ಲ್ಯಾನ್ ಕೇಳಿ ಪೊಲೀಸರೇ ಶಾಕ್
ರೈಲಿನಲ್ಲಿ ಸಾಗಾಟ:
ಈ ಗ್ಯಾಂಗ್ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.ಕಳ್ಳತನ ಮಾಡುವ ಉದ್ದೇಶದಿಂದಲೇ ಈ ತಂಡ ವಿಮಾನದ ಮೂಲಕ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹಾರುತ್ತಿತ್ತು. ಬೆಂಗಳೂರಿಗೆ ಬಂದಿಳಿದ ಇವರು ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ ಮತ್ತು ಯಶವಂತಪುರದಲ್ಲಿ ಜುಲೈ 17 ಮತ್ತು 19ರಂದು ಸರಣಿ ಕಳ್ಳತನ ನಡೆಸಿದ್ದರು. ಕಳ್ಳತನ ಮಾಡಿದ ನಂತರ ಕದ್ದ ಮಾಲನ್ನು ಪತ್ತೆಯಾಗದಂತೆ ರೈಲಿನ ಮೂಲಕ ಬೇರೆ ರಾಜ್ಯಗಳಿಗೆ ಸಾಗಿಸಿ ಪರಾರಿಯಾಗುತ್ತಿದ್ದರು.
ಪೊಲೀಸ್ ಕಾರ್ಯಾಚರಣೆ
ಸತತ ಕಳ್ಳತನದಿಂದ ಕಂಗೆಟ್ಟಿದ್ದ ಬಿಎಸ್‌ಎನ್‌ಎಲ್ ಸಿಬ್ಬಂದಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ಆಸ್ತಿಗೆ ಹಾನಿ ಮಾಡಿ, ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದ ಈ ‘ಫ್ಲೈಯಿಂಗ್ ಕಳ್ಳರ’ ಬಂಧನದಿಂದ ಬಿಎಸ್‌ಎನ್‌ಎಲ್ ಇಲಾಖೆ ನಿಟ್ಟುಸಿರು ಬಿಟ್ಟಿದೆ. ಸದ್ಯ ಆರೋಪಿಗಳನ್ನು ಜೈಲಿಗಟ್ಟಿರುವ ಪೊಲೀಸರು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.



