– ರಕ್ಷಣಾ ಕಾರ್ಯಾಚರಣೆ ಚುರುಕು
ಕಠ್ಮಂಡು: ನೇಪಾಳದಲ್ಲಿ (Nepal) ಭಾರೀ ಹಿಮಪಾತದಿಂದಾಗಿ (Snowfall) ಆರು ಮಂದಿ ಭಾರತೀಯ ಪ್ರವಾಸಿಗರು (Indian Tourists) ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಪ್ರವಾಸಿಗರು ಶನಿವಾರ ಮಧ್ಯಾಹ್ನ ಶೇ-ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಲು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶೇ-ಫೋಕ್ಸುಂಡೋ ಗ್ರಾಮೀಣ ಪುರಸಭೆಯ 8ನೇ ವಾರ್ಡ್ನಲ್ಲಿರುವ ಧೋ ಪ್ರದೇಶಕ್ಕೆ ಭಾರತೀಯ ಪ್ರವಾಸಿಗರು ತೆರಳಿದ್ದರು. ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಿಮಪಾತವಾಗಿದ್ದು, ಪ್ರವಾಸಿಗರು ಅಲ್ಲಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾರೆ ಎಂದು ಡೋಲ್ಪಾ ಜಿಲ್ಲೆಯ ಮುಖ್ಯ ಜಿಲ್ಲಾ ಅಧಿಕಾರಿ ಜುನೂ ಧಕಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ, ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ: ರಾಮಲಿಂಗಾರೆಡ್ಡಿ
ಪ್ರವಾಸಿಗರು ಸಿಲುಕಿರುವ ಪ್ರದೇಶವನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ಅವರನ್ನು ರಕ್ಷಿಸಲು ಸೇನೆಯ ಹೆಲಿಕಾಪ್ಟರ್ ಆಗಮಿಸುತ್ತಿದ್ದು, ಶೀಘ್ರದಲ್ಲೇ ಸುರಕ್ಷಿತವಾಗಿ ಕರೆತರಬಹುದು ಎಂಬ ನಿರೀಕ್ಷೆಯಿದೆ ಎಂದು ಜುನೂ ಧಕಾಲ್ ಹೇಳಿದ್ದಾರೆ. ಪ್ರವಾಸಿಗರು ಭದ್ರತಾ ಸಿಬ್ಬಂದಿ ಹಾಗೂ ಅವರೊಂದಿಗೆ ತೆರಳಿದ್ದ ನೇಪಾಳಿ ಮಾರ್ಗದರ್ಶಿ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರಿದಿದ್ದರು ಎನ್ನಲಾಗಿದೆ. ಭಾರೀ ಹಿಮಪಾತದ ನಡುವೆಯೂ ಮಾರ್ಗದರ್ಶಿಯನ್ನು ಬಿಟ್ಟು ಸರೋವರದ (Shey Phoksundo Lake) ಕಡೆಗೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆಗುಂಬೆ ಬಳಿ ಕಾರು ಅಪಘಾತ – MBBS ವಿದ್ಯಾರ್ಥಿ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ
ಶನಿವಾರ ರಾತ್ರಿ ಪ್ರವಾಸಿಗರೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಪ್ರವಾಸಿಗರು ಹಿಮಪಾತದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆಯಿದೆ ಎಂದು ಮಾರ್ಗದರ್ಶಿ ಶನಿವಾರ ಸಂಜೆ ಡೋಲ್ಪಾ ಜಿಲ್ಲಾ ಆಡಳಿತ ಕಚೇರಿಗೆ ಮಾಹಿತಿ ನೀಡಿದ್ದರು. ಭಾನುವಾರ ಬೆಳಗ್ಗೆ ಅವರೊಂದಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಆದರೆ, ಪ್ರವಾಸಿಗರು ಸಿಲುಕಿರುವ ಸ್ಥಳವನ್ನು ಪತ್ತೆಹಚ್ಚಿರುವುದರಿಂದ ಅವರನ್ನು ನಾಪತ್ತೆಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮೊದಲ ಬಾರಿಗೆ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದ ಪೊಲೀಸರು
ಜಿಲ್ಲಾ ಆಡಳಿತ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಸಿಲುಕಿರುವ ಆರು ಭಾರತೀಯರನ್ನು ಮೌಮಿತಾ ಹಲ್ದರ್, ಪಿಯಾಲಿ ಕೋಲೆ, ಜಜ್ಲಾ ತ್ರಿವೇದಿ ಕುಮಾರ್, ಆದಿತ್ಯ ಸಿಂಘಾ, ದೀಪ್ಲಿನಾ ಬಿಸ್ವಾಸ್ ಮತ್ತು ರಾಜೇಶ್ ಡೇ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಾಯಚೂರು | ವ್ಯಾಪಾರದಲ್ಲಿ ನಷ್ಟ; ಪತ್ನಿ, ಇಬ್ಬರು ಮಕ್ಕಳನ್ನ ಕೊಂದು ವ್ಯಾಪಾರಿ ಆತ್ಮಹತ್ಯೆ
ಇನ್ನು ರಕ್ಷಣಾ ಕಾರ್ಯಾಚರಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಸೇನೆಯ ಹೆಲಿಕಾಪ್ಟರ್ ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಆರು ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸುವ ಪ್ರಯತ್ನಗಳು ಮುಂದುವರಿದಿವೆ. ಇದನ್ನೂ ಓದಿ: ಎಸ್ಐಆರ್ ಅಕ್ರಮದಲ್ಲಿ ಮೋದಿ, ಅಮಿತ್ ಶಾ, ಜ್ಞಾನೇಶ್ ಕುಮಾರ್ ಆರೋಪಿಗಳು: ಪ್ರಿಯಾಂಕ್ ಖರ್ಗೆ
