ಬೆಂಗಳೂರು: ರಾಜ್ಯದ ಹಲವೆಡೆ ಭಾನುವಾರ ಗುಡುಗು ಸಹಿತ ಭಾರೀ ಮಳೆಯಾದ (Heavy Rain) ಪರಿಣಾಮ ನಾನಾ ಅವಾಂತರಗಳು ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಯಾವ ಜಿಲ್ಲೆಯಲ್ಲಿ ಏನಾಗಿದೆ?
ಗದಗ:
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲವೆಡೆ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ದ್ವಿಚಕ್ರ ವಾಹನ, ಕಾರು ಸೇರಿ ಮನೆಯ ಗೋಡೆಗಳು ಜಖಂಗೊಂಡಿವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನದ ನಂತರ ಏಕಾಏಕಿ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿಯಿತು.
ಅವಳಿ ನಗರದ ಟ್ಯಾಗೋರ್ ರೋಡ್, ಸ್ಟೇಡಿಯಂ ರೋಡ್, ತಿಲಕ್ ಪಾರ್ಕ್, ಗ್ರೇನ್ ಮಾರ್ಕೆಟ್, ಮಹಾತ್ಮ ಗಾಂಧಿ ವೃತ್ತ, ತೋಂಟದಾರ್ಯ ರಥಬೀದಿ, ಬಸವೇಶ್ವರ ವೃತ್ತ, ರೋಟರಿ ಸರ್ಕಲ್, ಬಳ್ಳಾರಿ ಬ್ರಿಡ್ಜ್, ಹಳೆ ಜಿಲ್ಲಾಧಿಕಾರಿ ಕಚೇರಿ ವೃತ್ತ, ಹಾತಲಗೇರಿ ನಾಕಾ, ಜೆಟಿ ಕಾಲೇಜ್ ಸೇರಿ ಹಲವೆಡೆ ರಸ್ತೆ ಮೇಲೆ ನೀರು ಹರಿದಿದ್ದರಿಂದ ಪಾದಚಾರಿಗಳು, ವಾಹನ ಸವಾರರು ಪರದಾಡಿದರು. ಬೀದಿ ಬದಿಯ ಹೂವು-ಹಣ್ಣಿನ ವ್ಯಾಪಾರಸ್ಥರು, ಸಾರ್ವಜನಿಕರು ತೊಂದರೆ ಅನುಭವಿಸಿದರು.
ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆಯ ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ಭಾನುವಾರವೂ ಜಿಲ್ಲೆಯ ವಿವಿಧೆಡೆ ಮಳೆ ಸುರಿಯಿತು. ಭಾನುವಾರ ಅವಳಿ ನಗರದಲ್ಲಿ ಸುರಿದ ಮಳೆಯಿಂದ ಬಿಸಿಲಿನಿಂದ ಬಸವಳಿದಿದ್ದ ನಗರದ ಜನರಿಗೆ ತುಸು ಆಹ್ಲಾದಕರ ಅನುಭವ ನೀಡಿತು. ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ಹಲವು ಭಾಗಗಳಲ್ಲಿಯೂ ಮಳೆ ಚುರುಕುಗೊಂಡಿದ್ದು ಜಿಲ್ಲೆಯ ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ, ರೋಣ ಭಾಗದಲ್ಲೂ ಗುಡಗು, ಬಿರುಗಾಳಿ ಸಹಿತ ಮಳೆ ಸುರಿಯಿತು.
ಅವಳಿ ನಗರದ ಕೆಲವು ಭಾಗದಲ್ಲಿ ಗಟಾರು ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ರಸ್ತೆ ಮೇಲೆ ರಭಸವಾಗಿ ಹರಿಯಿತು. ಇದರಿಂದ ರಸ್ತೆಯೆಲ್ಲಾ ಕೆಸರು ಮಯವಾಗಿತ್ತು. ಬೈಕ್ ಸವಾರರು, ಸೈಕಲ್ ಸವಾರರು, ಪಾದಚಾರಿಗಳು ರಸ್ತೆ ದಾಟಲು ಹರ ಸಾಹಸ ಪಡುವಂತಾಯಿತು.
ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ನೀರು ಹರಿದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಬಿರುಗಾಳಿಯ ವೇಗ ಹೆಚ್ಚಿದ್ದರಿಂದ ಅನೇಕ ಕಡೆ ಮರದ ರೆಂಬೆಗಳು ಮುರಿದು ರಸ್ತೆಗೆ ಬಿದ್ದಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಸಣ್ಣ ಪ್ರಮಾಣದಲ್ಲಿ ಹಾನಿ ಸಂಭವಿಸಿದ ಘಟನೆಗಳು ವರದಿಯಾಗಿವೆ.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಮುಂಡರಗಿ, ನರಗುಂದ, ರೋಣ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಭಾಗಗಳಲ್ಲಿ ಭಾರೀ ಮಳೆಯ ಅಬ್ಬರ ಹೆಚ್ಚಾಗಿ ಕಂಡುಬಂದಿದೆ. ಮಳೆಯ ಜೊತೆಗೆ ಬಿರುಗಾಳಿ ಬೀಸಿದ ಪರಿಣಾಮ ಕೆಲವೆಡೆ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಸಂಜೆ ವೇಳೆಯಲ್ಲಿ ಏಕಾಏಕಿ ಕತ್ತಲೆ ಆವರಿಸಿ, ಮಿಂಚು-ಗುಡುಗಿನ ಸದ್ದಿಗೆ ಜನರು ಆತಂಕಗೊಂಡರು.
ಜಿಲ್ಲಾಡಳಿತ ಎಚ್ಚರಿಕೆ:
ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ. ಮಿಂಚು-ಗುಡುಗು ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲಬಾರದು, ವಿದ್ಯುತ್ ತಂತಿಗಳ ಸಮೀಪ ಹೋಗಬಾರದು ಎಂದು ಸೂಚಿಸಲಾಗಿದೆ.
ಭಾರೀ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ಅಸ್ತವ್ಯಸ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟುಕೊಂಡಿದ್ದಾರೆ.
ಹಾವೇರಿ:
ಹಾವೇರಿ ಜಿಲ್ಲೆಯ ಬಿರುಗಾಳಿ ಮಳೆಗೆ ಅನ್ನದಾತರು ಕಂಗಾಲಾಗಿದ್ದಾರೆ. ಬಿರುಗಾಳಿ ಮಳೆಗೆ ತೆಂಗಿನಮರ ಮತ್ತು ಅಡಿಕೆ ಮರಗಳು ಸಂಪೂರ್ಣ ನಾಶವಾದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಮತ್ತು ಬಡಸಂಗಾಪುರ ಗ್ರಾಮದಲ್ಲಿ ನಡೆದಿದೆ. 20ಕ್ಕೂ ಅಧಿಕ ತೆಂಗಿನಮರ ಮತ್ತು 50ಕ್ಕೂ ಅಧಿಕ ಅಡಿಕೆ ಮರಗಳು ನೆಲಸಮಗೊಂಡಿವೆ. ಗ್ರಾಮದ ರೈತ ಮಂಜುನಾಥ ತಳವಾರ ಮತ್ತು ನಾಗರಾಜ್ ತೋಟಗೇರ್, ಮಹೇಶಪ್ಪ ಮತ್ತು ಹಾಲೇಶ ಸೇರಿದಂತೆ ಹಲವು ರೈತರ ತೆಂಗಿನಮರ ಮತ್ತು ಅಡಿಕೆ ಮರಗಳಿಗೆ ಹಾನಿಯಾಗಿವೆ. ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಮರಗಳು ನಾಶವಾಗಿವೆ. ತೋಟದ ರೈತರು ಬಿರುಗಾಳಿ ಮಳೆಗೆ ಕಂಗಾಲಾಗಿದ್ದು, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸೂಕ್ತವಾದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಇನ್ನು ಬಿರುಗಾಳಿ ಮಳೆಗೆ ಕೋಳಿ ಫಾರ್ಮ್ನ ಮೇಲ್ಛಾವಣಿ ಕಿತ್ತುಹೋದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂದೀಶ ಗಸ್ತೇರ್ ಮತ್ತು ದಿಳ್ಳೆಪ್ಪ ಇಟಲಿ ಎಂಬುವರಿಗೆ ಸೇರಿದ ಕೋಳಿ ಫಾರ್ಮ್ ಸಂಪೂರ್ಣ ಹಾನಿಯಾಗಿದೆ. ಸುಮಾರು 20 ಲಕ್ಷ ಅಧಿಕ ಹಣ ಖರ್ಚು ಮಾಡಿ ಕೋಳಿ ಸಾಕಾಣಿಕೆ ಫಾರ್ಮ್ ಕಟ್ಟಿಸಿದರು. ಈಗ ಸಂಪೂರ್ಣ ನಾಶವಾಗಿದ್ದು, ಮೇಲ್ಛಾವಣಿಯ ಸಿಮೆಂಟ್ ಶೀಟ್ ಪುಡಿಪುಡಿಯಾಗಿವೆ. ಅಲ್ಲದೆ ಸವಣೂರು ತಾಲೂಕಿನ ಸೇವಾಲಾಲ್ ಪುರ ಗ್ರಾಮದ ವಿಳ್ಯದೆಲೆ ತೋಟ ಹಾನಿಯಾಗಿದೆ. ಒಂದು ಎಕರೆ ವಿಳ್ಯದೆಲೆ ಸಂಪೂರ್ಣ ಹಾನಿಯಾಗಿದೆ. ಬಜನಪ್ಪ ಲಮಾಣಿ ಎಂಬವರಿಗೆ ಸೇರಿದ ತೋಟ ಹಾನಿಯಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ..
ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಅಬ್ಬರದ ಮಳೆ ಸುರಿದಿದೆ. ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆ ಮತ್ತು ಸಿಡಿಲಿನ ಅಬ್ಬರಕ್ಕೆ ಹಾನಿ ಸಂಭವಿಸಿದೆ.
ಭಾನುವಾರ ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಸಂಭವಿಸಿದ ಅವಘಡದಲ್ಲಿ ಸಿಡಿಲು ಬಡಿದು ರೋಮನ್ ಬಾವಟಿಸ್ ದಾಲ್ಮೆತ್ ಅವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಆಕಳು ಮೃತಪಟ್ಟಿವೆ. ಈ ಘಟನೆಯಿಂದ ಪಶುಸಂಗೋಪನೆಗೆ ಅವಲಂಬಿತವಾಗಿದ್ದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಇದೇ ವೇಳೆ ಭಾರೀ ಗಾಳಿ ಮಳೆಯಿಂದ ಮಂಗಳವಾಡ ಪ್ರೌಢಶಾಲೆಯ ಮೇಲ್ಚಾವಣಿಯೂ ಹಾರಿ ಹೋಗಿದ್ದು, ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬಿಇಒ ಅವರ ಗಮನಕ್ಕೂ ತರಲಾಗಿದೆ ಎಂದು ಗ್ರಾಮ ಪಂಚಾಯತ್ ಮೂಲಗಳು ತಿಳಿಸಿವೆ.
ಹವಾಮಾನ ಇಲಾಖೆ ಎಚ್ಚರಿಕೆ:
ಇನ್ನು ಕರಾವಳಿ ಭಾಗದಲ್ಲಿ ಹೆಚ್ಚಿನ ಗಾಳಿ ಹಾಗೂ ಮಳೆಯಾಗುವ ಸೂಚನೆ ನೀಡಿದೆ. ಕರಾವಳಿ ಭಾಗದ ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಇನ್ನು ಎರಡು ದಿನ ಕರಾವಳಿ ಭಾಗದಲ್ಲಿ ಗಾಳಿ ಸಹಿತ ಮಳೆಯಾಗುವ ಸೂಚನೆ ನೀಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಗುರ ಹಾಗೂ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಇನ್ನು ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಗುಡುಗು ಹಾಗೂ ತೀವ್ರ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದ್ದು, ಮಳೆ ಸಂದರ್ಭದಲ್ಲಿ ಸುರಕ್ಷಿತ ಜಾಗದಲ್ಲಿ ಇರಲು ಸೂಚನೆ ನೀಡಲಾಗಿದೆ.
ಕಲಬುರಗಿ:
ಜೇವರ್ಗಿ ತಾಲೂಕಿನಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಇಲ್ಲಿನ ತಾಲೂಕು ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ನೆಲಸಮಗೊಂಡಿದೆ. ಇದೇ ವೇಳೆ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ನಿರತರ ಟೆಂಟ್ ಮೇಲೆಯೇ ವಿದ್ಯುತ್ ಕಂಬ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಭಾನುವಾರ ಸಂಜೆ ವೇಳೆ ಹಠಾತ್ ಮಾರುತಗಳೊಂದಿಗೆ ಆರ್ಭಟಿಸಿದ ಮಳೆಗೆ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಆರ್ಚ್ ಹಾಗೂ ಜರ್ಮನ್ ತಂತ್ರಜ್ಞಾನದ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಕೊಂಡು ನೆಲಕ್ಕೆ ಉರುಳಿದೆ. ಇತ್ತ ಮಿನಿ ವಿಧಾನಸೌಧದ ಮುಂಭಾಗದಲ್ಲಿ ವಿವಿಧ ಬೇಡಿಕೆಗಳಿಗಾಗಿ ಧರಣಿ ಕುಳಿತಿದ್ದ ಜಾಗದ ಟೆಂಟ್ ಮೇಲೆಯೇ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಧರಣಿ ನಿರತರು ತಕ್ಷಣವೇ ಜಾಗರೂಕರಾಗಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಯಾದಗಿರಿ:
ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾದ ಪರಿಣಾಮ ವರುಣನ ಅಬ್ಬರಕ್ಕೆ ಶಾದಿ ಮಹಲ್‌ನ ಛಾವಣಿ ಹಾಗೂ ಟೆಂಟ್ ಕುಸಿತಗೊಂಡಿದೆ. ಮದುವೆ ಕಾರ್ಯಕ್ರಮದ ವೇಳೆ ಮದುವೆ ಮಂಟಪದ ತಡಗಿನ ಛಾವಣಿ ಹಾಗೂ ಟೆಂಟ್ ಕುಸಿತಗೊಂಡಿದ್ದು, ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಜನ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಘಟನೆ ನಡೆದಿದೆ.
ಹುಬ್ಬಳ್ಳಿ:
ಹುಬ್ಬಳ್ಳಿಯಲ್ಲೂ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಭಾರೀ ಮಳೆಗೆ ಮರಗಳು ಧರೆಗುರುಳಿದೆ. ಮಂಜುನಾಥ ನಗರ, ಆನಂದ ನಗರ ಮುಖ್ಯ ರಸ್ತೆಯಲ್ಲಿದ್ದ ಬೃಹತ್ ಮರ ಧರೆಗುರುಳಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹುಬ್ಬಳ್ಳಿ ತಾಲೂಕು, ಗ್ರಾಮೀಣ, ಕುಂದಗೋಳ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಳೆ ಅವಾಂತರಕ್ಕೆ ಹುಬ್ಬಳ್ಳಿ ತುಳಜಾ ಭವಾನಿ ರಸ್ತೆ ಕೆರೆಯಂತಾಗಿದೆ. ಚರಂಡಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ಹುಬ್ಬಳ್ಳಿ ನಗರ ಭಾಗದಲ್ಲಿ ಮಳೆಯಿಂದ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಹಳೇ ಹುಬ್ಬಳ್ಳಿಯ ಶಿವಪುತ್ರ ನಗರ ಮೆಹಬೂಬ್ ಸುಭಾನಿ ದರ್ಗಾ ಮೇಲೆ ಮರ ಬಿದ್ದಿದ್ದು, ದರ್ಗಾ, ಮನೆಗಳು, ವಾಹನಗಳಿಗೆ ಹಾನಿಯಾಗಿದೆ. ಸಿದ್ದೇಶ್ವರ ಪಾರ್ಕ್ ಭಾರತಿ ಕಾಲೋನಿ ಕರೆಂಟ್ ಕೇಬಲ್ ಮೇಲೆ ಮರ ಉರುಳಿ ಬಿದ್ದು ವಿದ್ಯುತ್ ಕಡಿತಗೊಂಡಿದೆ. ಮತ್ತೊಂದೆಡೆ ತೆಂಗಿನ ಮರಕ್ಕೆ ಸಿಡಿಲು ಅಪ್ಪಳಿಸಿ ತೆಂಗಿನ ಮರ ಧಗಧಗಿಸಿದೆ.

