ಮೈಸೂರು: ಪತಿಯನ್ನು ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿ, ಹೃದಯಾಘಾತ(Heart Attack) ಎಂದು ಬಿಂಬಿಸಲು ಪತ್ನಿ ಯತ್ನಿಸಿರುವ ಘಟನೆ ಮೈಸೂರಿನ(Mysuru) ಕುವೆಂಪುನಗರದಲ್ಲಿ ನಡೆದಿದೆ.
ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹುಡ್ಕೊ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 50 ವರ್ಷದ ನಿತ್ಯಾನಂದ ಮೃತಪಟ್ಟ ವ್ಯಕ್ತಿ. ಅವರು ಮಹೀಂದ್ರಾ ಶೋ ರೂಂನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಸುಶೀಲ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ದಂಪತಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು.
ಪ್ರಾಥಮಿಕ ಮಾಹಿತಿ ಪ್ರಕಾರ, ನಿತ್ಯಾನಂದ ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದ. ನಿನ್ನೆ ರಾತ್ರಿ ಕೂಡ ಡ್ರಿಂಕ್ಸ್ ಪಾರ್ಟಿ ಮಾಡಿ ಮನೆಗೆ ಬಂದಿದ್ದ. ರಾತ್ರಿ ಮದ್ಯದ ಅಮಲಿನಲ್ಲಿ ಮಲಗಿದ್ದ ವೇಳೆ ಪತ್ನಿ ಸುಶೀಲ ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಈ ಸಾವನ್ನು ಹೃದಯಾಘಾತ ಎಂದು ನಂಬಿಸಲು ಯತ್ನಿಸಿದ್ದಾಳೆ. ಜೋರಾಗಿ ಅಳುತ್ತಾ ಅಕ್ಕಪಕ್ಕದವರನ್ನು ಕರೆಸಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾಳೆ.
ಮೃತದೇಹದ ಅಂತಿಮ ದರ್ಶನಕ್ಕೆ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ನಮನ ಸಲ್ಲಿಸಲು ಬಂದಿದ್ದ ನಿತ್ಯಾನಂದ ಅವರ ಸಹೋದರ, ಕುತ್ತಿಗೆಯಲ್ಲಿ ಗಾಯದ ಗುರುತು ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಕುವೆಂಪುನಗರ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಸುಶೀಲ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕೇವಲ 500 ರೂಪಾಯಿಗಾಗಿ ಆಟೋ ಚಾಲಕನ ಹತ್ಯೆ – ಆರೋಪಿ ಅರೆಸ್ಟ್
ಇನ್ನೊಂದು ಮಾಹಿತಿ ಪ್ರಕಾರ, ಬೆಳಗ್ಗೆ ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದ ಕಾರಣ ಸ್ನೇಹಿತ ದರ್ಶನ್ ಹಲವು ಬಾರಿ ನಿತ್ಯಾನಂದ ಅವರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೂ ಬಂದಿದ್ದಾರೆ. ಆದರೆ ಸುಶೀಲ ಬಾಗಿಲು ತೆರೆಯಲಿಲ್ಲ. ಬಳಿಕ ನಿತ್ಯಾನಂದ ಅವರ ಸಹೋದರರಿಗೆ ಕರೆ ಮಾಡಿ, ಹೃದಯಾಘಾತವಾಗಿದೆ ಎಂದು ಮಾಹಿತಿ ನೀಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು ಕೊಲೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಕ್ರಿಮಿನಲ್ ಚೆಲುವೆಯ ಕರಾಳ ಮುಖ – ಕೇತನ್ ಬಳಿ 1 ಕೋಟಿ ಪಡೆದು ಪ್ರಿಯಕರನಿಗೆ ಕೊಟ್ಟಿದ್ದ ಸಿಯಾ
