ಹಾಸನ : ಈ ತಿಂಗಳ 18ರಂದು ನಿಧನರಾದ ಶ್ರೀಮತಿ ಚನ್ನಮ್ಮ ಅವರ ಉತ್ತರ ಕ್ರಿಯೆಯ ವಿಧಿ ವಿಧಾನಗಳು ಗುರುವಾರ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಅವರ ಪವಿತ್ರ ಸಮಾಧಿ ಸ್ಥಳದಲ್ಲಿ ನಡೆಯಲಿವೆ.
ಉತ್ತರ ಕ್ರಿಯೆಯ ಹಿಂದಿನ ದಿನವಾದ ಬುಧವಾರ, ಸಮಾಧಿ ಸ್ಥಳದಲ್ಲಿ ನಡೆಯುತ್ತಿರುವ ಎಲ್ಲಾ ಸಿದ್ಧತೆಗಳನ್ನು ತಮ್ಮ ಸಹೋದರ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ( H D Revanna) ಅವರೊಂದಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ( H D Kumaraswamy) ಪರಿಶೀಲಿಸಿದರು.
ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಐದು ಹೆಲಿಪ್ಯಾಡ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು, ಸುಮಾರು 6 ಲಕ್ಷಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಮನೆಮನೆಗೂ ತಲುಪಿಸಲಾಗಿದೆ. ಸಮಾಧಿಯ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಒಂದು ಪಂಕ್ತಿಯಲ್ಲಿ 22,000 ಜನರು ಕುಳಿತು ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಮಳೆಯ ಹಿನ್ನೆಲೆ 15 ಬೃಹತ್ ಜರ್ಮನ್ ಟೆಂಟ್‌ಗಳನ್ನು ಹಾಕಲಾಗಿದ್ದು, ಅದರಲ್ಲಿ ಮೂರು ವಿಭಾಗಗಳನ್ನು ಮಹಿಳೆಯರಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಗಣ್ಯರಿಗೂ ಎರಡು ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಚಿಲ್ಲರೆ ಇಲ್ಲವೆಂದು ಸಚಿವರನ್ನು ಬಸ್ಸಿನಿಂದ ಕೆಳಗಿಳಿಸಿದ್ದ ನಿರ್ವಾಹಕನ ಅಮಾನತು ವಾಪಸ್

ಚನ್ನಮ್ಮ ಅವರ ಸಮಾಧಿಯ ದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ಯಾವುದೇ ಬೇಧವಿಲ್ಲದೆ ಒಂದೇ ರೀತಿಯ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಪ್ರಸಾದದಲ್ಲಿ 20ಕ್ಕೂ ಹೆಚ್ಚು ಪದಾರ್ಥಗಳಿದ್ದು, ಅದರಲ್ಲಿ ಚನ್ನಮ್ಮ ಅವರಿಗೆ ಇಷ್ಟವಾದ ಆಹಾರ ಪದಾರ್ಥಗಳೂ ಸೇರಿವೆ. ಪ್ರಸಾದವನ್ನು ಶಾಸ್ತ್ರೋಕ್ತವಾಗಿ ತಯಾರಿಸಲಾಗುತ್ತಿದ್ದು, ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸಾದದಲ್ಲಿ ಏನೇನು ಇರುತ್ತದೆ?
ಅಕ್ಕಿ ಪಾಯಸ, ಬೂಂದಿ, ಕಾಯಿ ಹೋಳಿಗೆ, ಕಜ್ಜಾಯ, ಬಾದಾಮಿ ಹಲ್ವಾ, ಇಡ್ಲಿ-ಸಾಂಬಾರ್, ದೋಸೆ, ಪುಳಿಯೋಗರೆ, ಬಿಸಿಬೇಳೆ ಬಾತ್, ಮಸಾಲೆ ವಡೆ, ಉದ್ದಿನ ವಡೆ, ಕೋಸಂಬರಿ, ತರಕಾರಿ ಕೂಟು, ಅನ್ನ, ಮಜ್ಜಿಗೆ ಹುಳಿ ಸೇರಿದಂತೆ ಹಲವು ಪದಾರ್ಥಗಳು ಪ್ರಸಾದದಲ್ಲಿ ಇರಲಿವೆ. ಇದನ್ನೂ ಓದಿ: ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ಮಸೂದೆ ಅಂಗೀಕಾರ
ನಮ್ಮ ತಾಯಿಯ ಮಮತೆಯ ಫಲವಿದು
ನಮ್ಮ ತಾಯಿ ಅನ್ನಪೂರ್ಣಿಯಂತೆ ನಮ್ಮ ಮನೆಯನ್ನು ಸಲುಹಿದ್ದರು. ಮನೆಯೇ ಸರ್ವಸ್ವ ಎಂದು ಭಾವಿಸಿದ್ದ ಅವರು ಮನೆಗೆ ಬಂದ ಪ್ರತಿಯೊಬ್ಬರನ್ನೂ ಅಪಾರ ಮಮತೆ ಮತ್ತು ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಅವರು ಗಳಿಸಿದ ಪ್ರೀತಿಯನ್ನೇ ಇಂದು ನಾವು ನೋಡುತ್ತಿದ್ದೇವೆ. ಜನರು ಅವರ ಬಗ್ಗೆ ತೋರುತ್ತಿರುವ ಪ್ರೀತಿಗೆ ನಾವು ಮೂಕರಾಗಿದ್ದೇವೆ ಎಂದು ಕುಮಾರಸ್ವಾಮಿ ಭಾವುಕರಾದರು.

ನಮ್ಮ ತಾಯಿಯ 11ನೇ ದಿನದ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನೂರಾರು ಕಾರ್ಮಿಕರ ಪರಿಶ್ರಮದಿಂದ ಎಲ್ಲವೂ ರೂಪುಗೊಂಡಿದೆ. ನಿರೀಕ್ಷೆಗೂ ಮೀರಿ ಜನರು ಬರುವ ಸಾಧ್ಯತೆ ಇದೆ. ನಮ್ಮ ತಂದೆ-ತಾಯಿ ಗಳಿಸಿರುವ ಪ್ರೀತಿಯಿಂದಲೇ ಜನರು ಆಗಮಿಸುತ್ತಿದ್ದಾರೆ ಎನ್ನುವ ನಂಬಿಕೆ ನಮ್ಮದು. ಸಮಾಧಿ ದರ್ಶನ ಹಾಗೂ ಪೂಜೆ ಸಲ್ಲಿಸಲು ವ್ಯವಸ್ಥೆ ಕಲ್ಪಿಸಿದ್ದೇವೆ. ಯಾವುದೇ ತೊಂದರೆಯಾಗದಂತೆ ಪ್ರಸಾದ ವಿತರಣೆಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ತಯಾರಿಸಲು ಐದಾರು ತಂಡಗಳನ್ನು ನಿಯೋಜಿಸಿದ್ದೇವೆ. ಎಲ್ಲರೂ ಬಂದು ನಮ್ಮ ತಾಯಿಯ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಅವರು ಮನವಿ ಮಾಡಿದರು.
ಗುರುವಾರ ಬೆಳಗ್ಗೆ 10 ಗಂಟೆಯಿಂದ ಪೂಜೆಯ ವಿಧಿ ವಿಧಾನಗಳು ಆರಂಭವಾಗಲಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ತಿಳಿಸಿದರು.
ಅಮ್ಮ ಚಿರನಿದ್ರೆ ಮಾಡುತ್ತಿರುವ ಜಾಗ ನಮ್ಮ ಪಾಲಿಗೆ ಪುಣ್ಯಸ್ಥಳ
ದೇವರ ಪ್ರೇರಣೆಯಿಂದ ನಮ್ಮ ತಾಯಿ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಣ್ಣಾಗಿದ್ದಾರೆ. ಆ ಜಾಗ ನಮ್ಮ ಪಾಲಿಗೆ ಪುಣ್ಯಸ್ಥಳವಾಗಿದೆ. ಶ್ರೀ ರಂಗನಾಥಸ್ವಾಮಿ ಪಾದದ ಬುಡದಲ್ಲಿ ನಮ್ಮ ತಾಯಿಯ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದರು.
ರಾಜ್ಯದ ವಿವಿಧ ಭಾಗಗಳಿಂದ ಜನರು ನಮ್ಮ ತಾಯಿಯ ಸಮಾಧಿ ಸ್ಥಳಕ್ಕೆ ದರ್ಶನಕ್ಕೆ ಬರುತ್ತಿದ್ದಾರೆ. ಜನರ ಬಗ್ಗೆ ಅವರು ಇಟ್ಟುಕೊಂಡಿದ್ದ ಅಪಾರ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಇದೊಂದು ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಈ ಜಾಗ ದುರ್ಬಲರು ಹಾಗೂ ಅನಾಥರ ಪಾಲಿಗೆ ಕಾಮಧೇನುವಾಗಿ ಬೆಳೆಯಲಿದೆ. ಇಲ್ಲಿನ ಒಂದು ಅಂಗುಲ ಜಾಗವನ್ನೂ ನಾವು ಬಲವಂತವಾಗಿ ಬಳಸಿಕೊಳ್ಳುವುದಿಲ್ಲ. ನಾಡಿನ ಜನರ ಒಳಿತಿಗಾಗಿ ಅದನ್ನು ಮೀಸಲಿಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಶೂಟೌಟ್‌ಗೆ ಆದೇಶ ನೀಡೋದು ಮ್ಯಾಜಿಸ್ಟ್ರೇಟ್‌ಗಳು, ಅಮಿತ್ ಶಾ ಅಲ್ಲ : ರಾಹುಲ್‌ಗೆ ಜಿತೇಂದ್ರ ಸಿಂಗ್ ತಿರುಗೇಟು
