– 24 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ಸಾಬೀತು; ದಾಖಲೆ ಬಿಡುಗಡೆ ಮಾಡಿದ ಹೆಚ್‌ಡಿಕೆ
– ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ (AEE) ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಅಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಭಾರೀ ಅಕ್ರಮಗಳ ಕುರಿತು ಆರೋಪ ಮಾಡಿದ್ದಾರೆ. ಎಇಇ ಅಕ್ರಮದ ಬಗ್ಗೆ ತನಿಖೆ ನಡೆದಿದೆ. 24 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ಸಾಬೀತಾಗಿದ್ದರೂ, ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ತರಾತುರಿಯಲ್ಲಿ ನೇಮಕಾತಿ ಪತ್ರಗಳನ್ನ ಹಸ್ತಾಂತರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ
ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಕುಮಾರಸ್ವಾಮಿ ಅವರು, ಈ ಪ್ರಕರಣದಲ್ಲಿ ಅಂದಿನ ಕೆಪಿಎಸ್‌ಸಿ (KPSC) ಕಾರ್ಯದರ್ಶಿ ಸೇರಿದಂತೆ ಹಲವು ಹಂತಗಳಲ್ಲಿ ಅಕ್ರಮ ನಡೆದಿದೆ. ಈ ಪ್ರಕರಣವನ್ನ ಸಿಬಿಐ ತನಿಖೆಗೆ (CBI Investigation) ವಹಿಸುವಂತೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ಹೇಳಿದ ಅವರು, ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹೆಚ್‌ಡಿಕೆ ಆರೋಪಗಳ ಸುರಿಮಳೆ
* ಗ್ರಾಮೀಣಾಭಿವೃದ್ಧಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ದಾಖಲೆಗಳ ಸಮೇತ ಆರೋಪ ಮಾಡಿದ್ದಾರೆ.
* ಬಿಜೆಪಿ ಸರ್ಕಾರದ ಅವಧಿಯಲ್ಲಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರೀಕ್ಷಾ ಪ್ರಕ್ರಿಯೆ ನಡೆದು, 2024ರಲ್ಲಿ ನೇಮಕಾತಿ ನಡೆದಿದೆ. ಒಟ್ಟು 24 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ.
* OMR ತಿದ್ದುಪಡಿ ಸೇರಿದಂತೆ ವಿವಿಧ ಹಂತಗಳಲ್ಲಿ ಅಕ್ರಮ ನಡೆದಿದೆ ಎಂದು ತನಿಖೆಯಲ್ಲಿ ಸಾಬೀತಾಗಿದೆ. ಅಂದಿನ ಕೆಪಿಎಸ್‌ಸಿ ಕಾರ್ಯದರ್ಶಿಯೂ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಅಕ್ರಮ ಸಾಬೀತಾಗಿದ್ದರೂ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತರಾತುರಿಯಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ ಎಂದು ಆರೋಪ.
* ತನಿಖೆಗಾಗಿ ರಚಿಸಲಾಗಿದ್ದ ಮೂರು ಸದಸ್ಯರ ಸಬ್ ಕಮಿಟಿ ಪ್ರಕರಣವನ್ನು ಪರಿಶೀಲಿಸಿತ್ತು. ಸಬ್ ಕಮಿಟಿಯ ಶಿಫಾರಸು ಇಲ್ಲದೆ ಹಾಗೂ ಆಯೋಗದ ಅನುಮತಿಯೂ ಇಲ್ಲದೆ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಒತ್ತಡ ಹೇರಲಾಗಿತ್ತು.
* ಅಕ್ರಮದ ಆರೋಪ ಎದುರಿಸುತ್ತಿದ್ದ 24 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದ್ದು ಏಕೆ?
* ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇಲಾಖೆ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಯಾರಿಗೆ ಕಿಕ್‌ಬ್ಯಾಕ್ ಹೋಗಿದೆ? ಪ್ರಿಯಾಂಕ್ ಖರ್ಗೆ ಹೇಳಲಿ
AEE ನೇಮಕಾತಿ ಪ್ರಕರಣದಲ್ಲಿ 24 ಅಭ್ಯರ್ಥಿಗಳು 1 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅವರ OMR ತಿದ್ದುಪಡಿ ಸೇರಿದಂತೆ ಅಕ್ರಮ ನಡೆದಿದೆ ಎಂಬ ವರದಿ ಇದ್ದರೂ ಈ ಬಗ್ಗೆ ಸಚಿವರು ಏಕೆ ಮಾತನಾಡುತ್ತಿಲ್ಲ? ಯಾವುದೇ ನ್ಯಾಯಾಲಯವೂ ನೇಮಕಾತಿ ಮಾಡಿ ಎಂದು ಹೇಳಿಲ್ಲ. ಹಾಗಿದ್ದರೆ ಯಾರಿಗೆ ಕಿಕ್‌ಬ್ಯಾಕ್ ಹೋಗಿದೆ? ಎಂಬುದನ್ನ ಪ್ರಿಯಾಂಕ್ ಖರ್ಗೆ ಅವರೇ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ದೂರು ಕೊಟ್ಟ ಅಭ್ಯರ್ಥಿ, ಸಬ್ ಕಮಿಟಿ ರಚನೆ
ಅಭ್ಯರ್ಥಿಯಾಗಿದ್ದ ಆನಂದ್ ಎಸ್. ಸಿದ್ದರೆಡ್ಡಿ ಅವರು 2023ರ ಸೆಪ್ಟೆಂಬರ್ 25ರಂದು ಕೆಪಿಎಸ್‌ಸಿ ಕಾರ್ಯದರ್ಶಿಗೆ ಇ-ಮೇಲ್ ಮೂಲಕ ಅಕ್ರಮದ ಕುರಿತು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕೆಪಿಎಸ್‌ಸಿ ಮೂರು ಸದಸ್ಯರ ಸಬ್ ಕಮಿಟಿಯನ್ನು ರಚಿಸಿ ತನಿಖೆ ನಡೆಸಿತ್ತು. ಇದೇ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ಅಂತಿಮ ಆದೇಶ ಬರುವವರೆಗೆ ನೇಮಕಾತಿ ಪತ್ರ ನೀಡಬಾರದು ಎಂದು ನ್ಯಾಯಾಲಯ ಸೂಚಿಸಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
‘ನ್ಯಾಯಾಲಯದ ಮುಂದೆ ಪ್ರಕರಣವಿದ್ದರೂ, ಅಕ್ರಮದ ಆರೋಪಗಳಿದ್ದರೂ ನೇಮಕಾತಿ ಪತ್ರ ನೀಡಿದ್ದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಕೃಪಾ ಪೋಷಿತ ಮಂಡಳಿ ನಡೆಯುತ್ತಿದೆ
ಇನ್ನೂ ಕೆಪಿಎಸ್‌ಸಿ ಹಾಗೂ ನೇಮಕಾತಿ ವ್ಯವಸ್ಥೆ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ ಅವರ ಕೃಪಾ ಪೋಷಿತ ಮಂಡಳಿ ನಡೆಯುತ್ತಿದೆ. ‘ಬೇಲಿ ಎದ್ದು ಹೊಲ ಮೇಯ್ದ ಪ್ರಕರಣ’ ಎಂಬ ರೀತಿಯಲ್ಲಿ ವ್ಯವಸ್ಥೆಯೇ ಅಕ್ರಮಕ್ಕೆ ಕಾರಣವಾಗುತ್ತಿದೆ. ಅಧಿಕಾರದಲ್ಲಿರುವವರು ಕಾನೂನು ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ. ಹೀಗಿರುವಾಗ ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲ ಎಂಬ ಉತ್ತರ ನೀಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಗ್ಯಾನೇಂದ್ರ ಕುಮಾರ್ ಎಲ್ಲಿದ್ದಾರೆ?
ಇನ್ನೂ ಐಎಎಸ್ ಅಧಿಕಾರಿ ಗ್ಯಾನೇಂದ್ರಕುಮಾರ್ ಅವರ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ಇ.ಡಿ ದಾಳಿ ನಡೆದ ಬಳಿಕ ಅವರು ಕಾಣೆಯಾಗಿದ್ದಾರೆ ಎಂದು. ಪಶುವೈದ್ಯಕೀಯ ಇಲಾಖೆಯ ನೇಮಕಾತಿಯಲ್ಲಿ 80 ಲಕ್ಷ ಫಿಕ್ಸ್ ಮಾಡಲಾಗಿದೆ ಎಂದು ಮಂಜುನಾಥ್ ಎಂಬುವವರು ಆರೋಪಿಸಿದ್ದರು. ಆರೋಪ ಕೇಳಿಬಂದ ಬಳಿಕ ಇ.ಡಿ. ಪ್ರಕರಣ ಕೈಗೆತ್ತಿಕೊಂಡಿದ್ದು, ನಂತರ ಗ್ಯಾನೇಂದ್ರ ಕುಮಾರ್ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಗೊತ್ತಿಲ್ಲ ಅಂದ್ರೆ ಗೃಹ ಇಲಾಖೆ ಯಾಕೆ ನಡೆಸುತ್ತೀರಿ?
ಈ ಕುರಿತು ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಗ್ಯಾನೇಂದ್ರ ಕುಮಾರ್ ಊರಿಗೆ ತೆರಳಿದ್ದು, ಎರಡು ದಿನಗಳಲ್ಲಿ ವಾಪಸ್ ಬರುವುದಾಗಿ ದೂರವಾಣಿ ಮೂಲಕ ತಿಳಿಸಿದ್ದಾರೆ ಅಂತ ಗೃಹಸಚಿವರು ಹೇಳಿದ್ದರು. ಇ-ಮೇಲ್ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಅಂತಲೂ ಹೇಳಿದ್ದರು. ಆದ್ರೆ ಆಗಸ್ಟ್ 25ರಂದು ಗ್ಯಾನೇಂದ್ರ ಕುಮಾರ್ ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ ಅಂತಾರೆ. ನಿಮಗೇ ಗೊತ್ತಿಲ್ಲ ಅಂದ್ರೆ ಗೃಹ ಇಲಾಖೆ ಯಾಕೆ ನಡೆಸುತ್ತೀರಿ? ಎಂದು ವಾಗ್ದಾಳಿ ನಡೆಸಿದರು.
ನನ್ನ ಧ್ವನಿ ಅಡಗಿಸೋಕೆ ಆಗಲ್ಲ
ರಾಜ್ಯದಲ್ಲಿ ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ ಎಂದ ಹೆಚ್‌ಡಿಕೆ ಖರ್ಗೆ ಅವ್ರೇ, ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇದೆ ಎಂದು ಹೇಳುವ ಸರ್ಕಾರದ ವಿರುದ್ಧವೇ ಹಲವು ನೇಮಕಾತಿ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ ಎಂದು ಕುಟುಕಿದ್ದಾರೆ.
75 ಸಾವಿರ ಉದ್ಯೋಗ ಭರವಸೆ ಎಲ್ಲಿದೆ?
ರಾಜ್ಯ ಸರ್ಕಾರ 75 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳುತ್ತಿದೆ. ಆದರೆ ನೇಮಕಾತಿ ಪ್ರಕ್ರಿಯೆಯಲ್ಲೇ ಅಕ್ರಮದ ಆರೋಪಗಳು ಕೇಳಿಬರುತ್ತಿವೆ. ‘ಭ್ರಷ್ಟಾಚಾರ ನಡೆಯಲು ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ಕೆಂಪಣ್ಣ ಆಯೋಗ, ಜಯಚಂದ್ರ ಆಯೋಗದ ವರದಿಗಳ ಸ್ಥಿತಿ ಏನಾಗಿದೆ? 2024ರ ನೇಮಕಾತಿ ಅಕ್ರಮದ ಕುರಿತು ನಡೆದ ಸಿಐಡಿ ತನಿಖೆಯಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

