Connect with us

Districts

ಹಾಸನ ವಿಮಾನ ನಿಲ್ದಾಣ ರೇವಣ್ಣನವರ ಕುಟುಂಬದ ಒಕ್ಕಣೆ ಮಾಡುವ ಕಣವಲ್ಲ: ಪ್ರೀತಂ ಗೌಡ

Published

on

Share this

ಹಾಸನ: ಇಲ್ಲಿ ಕೇಳಿ ಸರ್. ಹಾಸನ ವಿಮಾನ ನಿಲ್ದಾಣ ರೇವಣ್ಣನವರದಲ್ಲ. ಅವರ ಕುಟುಂಬದ ಒಕ್ಕಣೆ ಮಾಡುವ ಕಣವೂ ಅಲ್ಲ. ಇದು ಹಾಸನದ ಆಸ್ತಿ. ವಿಮಾನ ನಿಲ್ದಾಣದ ವಿಚಾರದಲ್ಲಿ ತಜ್ಞರು ಏನು ಹೇಳುತ್ತಾರೆ ಅದನ್ನು ಮಾಡುತ್ತೇವೆ ಅಂತ ಮಾಜಿ ಸಚಿವ ಎಚ್.ಡಿ ರೇವಣ್ಣನವರ ವಿರುದ್ಧ ಶಾಸಕ ಪ್ರೀತಂ ಜೆ.ಗೌಡ ವಾಗ್ದಾಳಿ ನಡೆಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಇಂದು ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನದ ಏರ್‍ಪೋರ್ಟ್ ಅಂದರೆ ಅದು ಕೇವಲ ರೇವಣ್ಣನಿಗೆ ಮಾತ್ರ ಸೀಮಿತವಲ್ಲ. ಇನ್ನೂ ಅವರು ಒಕ್ಕಣೆ ಮಾಡುವ ಕಣವಲ್ಲ. ಇದು ಹಾಸನದ ಜನರ ಆಸ್ತಿ. ಹಿರಿಯರಾದ ದೇವೇಗೌಡರು ಸಿಎಂಗೆ ಮನವಿ ಮಾಡಿದ್ದರು. ಅವರ ನಿರ್ಧಾರದಂತೆ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದಾರೆ ಎಂದರು. ಇದನ್ನೂ ಓದಿ: ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

ಒಂದು ಬಾರಿ ಪ್ರಧಾನಿ ಮೂರು ಬಾರಿ ಸಿಎಂ ಆದ ಕುಟುಂಬದವರು ಯಾಕೆ ಏರ್ ಪೋರ್ಟ್ ಮಾಡಲಿಲ್ಲ..? ಅಧಿಕಾರ ಇದ್ದಾಗ ಮಾಡಲಿಲ್ಲ ಈಗ ಆ ರೀತಿ ಮಾಡಬೇಕು ಈ ರೀತಿ ಮಾಡಬೇಕು ಎಂದರೆ ಹೇಗೆ..? ರೇವಣ್ಣನವರು ಮಾತನಾಡುವುದಾದರೆ 20 ಸಾವಿರ ಜನ ಸೇರಿಸಿ ಮಾತನಾಡಲಿ. ಆಮೇಲೆ ನಾನು ಮಾತನಾಡುತ್ತೇನೆ. ತಜ್ಞರು ಏನು ಹೇಳುತ್ತಾರೆ ಆ ರೀತಿ ಸರ್ಕಾರ ಮಾಡುತ್ತದೆ. ಸುಖಾಸುಮ್ಮನೆ ಎಲ್ಲಾ ವಿಚಾರಕ್ಕೂ ತಲೆ ತೂರಿಸುವುದು ಸರಿಯಲ್ಲ ಅಂತ ಶಾಸಕ ಪ್ರೀತಂ ಗೌಡ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ರೇವಣ್ಣ, ಬಿಜೆಪಿ ಸರ್ಕಾರ ಈ ಹಿಂದೆ ನಿಗದಿಯಾದಂತೆ ವಿಮಾನ ನಿಲ್ದಾಣ ಕಾಮಗಾರಿ ಮಾಡದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

Click to comment

Leave a Reply

Your email address will not be published. Required fields are marked *

Advertisement