– ನ.6ಕ್ಕೆ ಸಿದ್ದರಾಮಯ್ಯ, ನ.8ಕ್ಕೆ ಡಿಕೆಶಿ ಭೇಟಿ
ಹಾಸನ: ಹಾಸನಾಂಬೆ (Hassanamba) ಜಾತ್ರೆ ಆರಂಭವಾದ ದಿನದಿಂದ ಇಂದು (ನ.2) ಮಧ್ಯಾಹ್ನದವರೆಗೆ ಸುಮಾರು 8 ಲಕ್ಷ ಭಕ್ತರು ದೇವಿಯ ದರ್ಶನ ಮಾಡಿದ್ದಾರೆ. 1000, 300 ರೂ. ನ ವಿಶೇಷ ದರ್ಶನದ ಟಿಕೆಟ್ ಮಾರಾಟ, ಲಾಡು ಮಾರಾಟದಿಂದ 6.50 ಕೋಟಿ ರೂ. ಆದಾಯ ಬಂದಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ (K.M Shivalingegowda) ಅವರು ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ.
ದೇವಾಲಯದ ಆವರಣದಲ್ಲಿ ಮಾತನಾಡಿದ ಅವರು, ಹಾಸನಾಂಬೆ ದರ್ಶನಕ್ಕೆ ಇಂದು ಮಧ್ಯಾಹ್ನದವರೆಗೂ ಸುಮಾರು 8 ಲಕ್ಷ ಭಕ್ತರು ಆಗಮಿಸಿದ್ದಾರೆ. ಕಳೆದ ವರ್ಷ ಕೃಷ್ಣಭೈರೇಗೌಡರು ಮಾಡಿದ್ದ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು, ನಾನು ಹೊಸದಾಗಿ ಕೆಲವು ಕಾರ್ಯಕ್ರಮಗಳನ್ನು ಸೇರಿಸಿಕೊಂಡು ಈ ಬಾರಿ ಜಾತ್ರಾ ಮಹೋತ್ಸವ ನಡೆಸುತ್ತಿದ್ದೇವೆ. ಎಲ್ಲಾ ಭಕ್ತರಿಗೂ ದೇವಿ ದರ್ಶನ ಸುಗಮವಾಗಿ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ದೇವಿ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಹಾಸನಾಂಬ ದೇವಿ ದರ್ಶನ ಪಡೆಯಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: 60 ರೂ.ಗೆ 2 ಲಾಡು ಕೊಡ್ಬೇಕು, ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್: ಶಿವಲಿಂಗೇಗೌಡ ಗರಂ
ನ.8 ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K Shivakumar) ಅವರು ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸುತ್ತಾರೆ ಎಂದು ಅವರ ಪಿಎ ಹೇಳಿದ್ದಾರೆ. ನಾಳೆ ನಾನು ಬೆಂಗಳೂರಿಗೆ ತೆರಳುತ್ತಿದ್ದೇನೆ. ನ.6 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಿನ್ನೆ ಚಾಲನೆಗೊಂಡ ಕ್ರೀಡೋತ್ಸವದಲ್ಲಿ ಸೇರಿದ್ದ ಜನರ ಉತ್ಸಾಹ ಕಂಡು ಖುಷಿಯಾಗಿದ್ದೇನೆ ಎಂದರು. ಇದೇ ವೇಳೆ, ಎಲ್ಲರೂ ಸಹಕರಿಸಿ ಸಮಾಧಾನದಿಂದ ದೇವಿ ದರ್ಶನ ಮಾಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ – ಮೂರು ದಿನದಲ್ಲಿ 5 ಕೋಟಿ.ಗೂ ಅಧಿಕ ಆದಾಯ
