– ಹಾಸನಾಂಬ ಜಾತ್ರೆಯಲ್ಲಿ 100 ರೂ.ಗೆ ಲಾಡು ಮಾರಾಟಕ್ಕೆ ಅಸಮಾಧಾನ
ಹಾಸನ: ಹಾಸನಾಂಬ ಜಾತ್ರೆಯಲ್ಲಿ (Hasanamba Jatra) 100 ರೂ.ಗೆ ಲಾಡು ಪ್ರಸಾದ (Laddu Prasad) ಮಾರಾಟ ಮಾಡುತ್ತಿದ್ದವರ ವಿರುದ್ಧ ಸಚಿವ ಕೆ.ಎಂ ಶಿವಲಿಂಗೇಗೌಡ (K.M Shivalingegowda) ಅವರು ಗರಂ ಆಗಿದ್ದಾರೆ. 60 ರೂ.ಗೆ 2 ಲಾಡು ಕೊಡ್ಬೇಕು, ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದೇವಾಲಯದ ಸುತ್ತಮುತ್ತ ಪರಿಶೀಲನೆ ನಡೆಸುವಾಗ 100 ರೂ.ಗೆ ಲಾಡು ಮಾರಾಟ ಮಾಡುವ ವಿಚಾರ ಗೊತ್ತಾಗಿದೆ. ಈ ವೇಳೆ, ಟೆಂಡರ್ ಪಡೆದ ಇಸ್ಕಾನ್ ಸಂಸ್ಥೆಗೆ ಕರೆ ಮಾಡಿ, ನಾನು ಮಿನಿಸ್ಟರ್ ಮಾತನಾಡುತ್ತಿದ್ದೇನೆ. 56.16 ರೂ.ಗೆ ಲಾಡು ಮಾರಾಟದ ಟೆಂಡರ್ ಆಗಿದೆ. 100 ರೂ.ಗೆ ಲಾಡು ಮಾರಾಟ ಮಾಡಿದ್ರೆ ಇಲ್ಲೇ ಪ್ರತಿಭಟನೆ ಮಾಡಿಸುತ್ತೇನೆ. ಜನರನ್ನು ದಂಗೆ ಎಬ್ಬಿಸುತ್ತೇನೆ. 60 ರೂ.ಗೆ ಎರಡು ಲಾಡುಗಳನ್ನು ಮಾರಾಟ ಮಾಡಬೇಕು. 1000 ರೂ. 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ದರ್ಶನ ಮಾಡಿದವರಿಗೆ ಉಚಿತವಾಗಿ ಲಾಡು ನೀಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ – ಎರಡು ಕಿಮೀ ಸಾಲುಗಟ್ಟಿ ನಿಂತ ಜನ!
ಹಾಸನಾಂಬ ದೇವಿ ದರ್ಶನಕ್ಕೆ ಮೊದಲ ದಿನವೇ ಭಕ್ತರ ದಂಡು ಸಾಗರೋಪಾದಿಯಾಗಿ ಹರಿದುಬಂದಿದೆ. ಮುಂಜಾನೆ 3 ಗಂಟೆಯಿಂದಲೇ ದೇವಿ ದರ್ಶನಕ್ಕೆ ಸಹಸ್ರಾರು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಸುಮಾರು ಎರಡು ಕಿಲೋ ಮೀಟರ್ವರೆಗೂ ಕ್ಯೂನಲ್ಲಿ ಭಕ್ತರು ದೇವಿ ದರ್ಶನಕ್ಕಾಗಿ ಕಾದು ನಿಂತಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಸ್ಥಳದಲ್ಲಿ ಎಸ್ಪಿ ಶುಭನ್ವಿತಾ ಅವರು ಮೊಕ್ಕಾಂ ಹೂಡಿದ್ದಾರೆ. ಧರ್ಮ ದರ್ಶನ, 1000 ರೂ. 300 ರೂ. ನ ವಿಶೇಷ ದರ್ಶನದ ಸಾಲುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಯಾವುದೇ ನೂಕುನುಗ್ಗಲು ಉಂಟಾಗದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಗರ್ಭಗುಡಿ ಬಾಗಿಲು ತೆರೆದು ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ
