LatestChikkaballapurDistrictsKarnatakaMain Post

ಚಿಕ್ಕಬಳ್ಳಾಪುರ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ – ಕಟ್ಟಡಗಳಿಗೆ ಕಾದಿದೆಯಾ ಅಪಾಯ?

– ನೆಲಮಹಡಿ ಕಟ್ಟಡಗಳಲ್ಲಿ ಉಕ್ಕಿ ಬರುತ್ತಿದೆ ಅಂರ್ತಜಲ
– ಪಂಪ್ ಬಳಸಿ ನೀರನ್ನು ಹೊರ ಹಾಕುತ್ತಿದ್ದಾರೆ ಜನ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಕಳೆದ ಒಂದು ವಾರದಿಂದ ಧಾರಾಕರ ಮಳೆಯಾಗಿ, ಜಿಲ್ಲೆಯ ನದಿ ನಾಲೆ, ಕೆರೆ-ಕುಂಟೆ, ಜಲಾಶಯ-ಜಲಪಾತಗಳು ಮೈದುಂಬಿಕೊಂಡಿವೆ. ಈ ನಡುವೆ ಚಿಕ್ಕಬಳ್ಳಾಪುರ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ ಆಗಿರೋದಕ್ಕೆ ಹಲವು ನಿದರ್ಶನಗಳು ಕಣ್ಣಿಗೆ ಕಾಣಸಿಗುತ್ತಿವೆ.

ಬರದೂರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಚಿಕ್ಕಬಳ್ಳಾಪುರದಲ್ಲಿ ಈಗ ಎಲ್ಲೆಲ್ಲೂ ನೀರು. ಅದರಲ್ಲೂ ನಗರದಲ್ಲಿನ ಹಳೆಯ ಬಾವಿಗಳಲ್ಲಿ ಈಗ ನೀರು ತುಂಬಿಕೊಂಡು ನಳ ನಳಿಸುತ್ತಿವೆ. ನಗರದ ಹಲವು ಕಡೆ ಕಟ್ಟಡ ಕಾಮಗಾರಿಗಳು ನಡೆಸುವಾಗ ಐದಾರು ಅಡಿ ಅಗೆದ್ರೆ ಸಾಕು ಕೆಲವು ಕಡೆ ಅಂರ್ತಜಲ ಉಕ್ಕಿ ಹರಿದುಬರುತ್ತಿದೆ. ಇದನ್ನೂ ಓದಿ: ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

ಚಿಕ್ಕಬಳ್ಳಾಪುರ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ - ಕಟ್ಟಡಗಳಿಗೆ ಕಾದಿದೆಯಾ ಅಪಾಯ?

ಸಂತೋಷದ ನಡುವೆ ಅಪಾಯ!

ನಗರದ ಕೆಲವು ಬಹುಮಹಡಿಯ ಕಟ್ಟಡಗಳ ನೆಲಮಹಡಿಗಳಲ್ಲಿ ಅಂತರ್ಜಲ ಉಕ್ಕಿ ಹರಿದುಬರುತ್ತಿದ್ದು, ನಗರದ ಕೆಲ ಕಟ್ಟಡಗಳ ಸೆಲ್ಲಾರ್ ಗಳು ಸ್ವಿಮ್ಮಿಂಗ್ ಪೂಲ್‍ಗಳಾಗಿ ಮಾರ್ಪಾಡಾಗಿವೆ. ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿನ ಶ್ರೀನಿವಾಸ್ ಹಾಗೂ ಶ್ರೀನಾಥ್ ಎಂಬವರ ಕಟ್ಟಡಗಳ ನೆಲಮಹಡಿಗಳು ಭಾರೀ ಪ್ರಮಾಣದಲ್ಲಿ ಅಂರ್ತಜಲ ಉಕ್ಕಿ ಹರಿದುಬರುತ್ತಿದೆ. ಈ ಪರಿಣಾಮ ನೆಲಮಹಡಿ ಥೇಟ್ ಸ್ವಿಮ್ಮಿಂಗ್ ಪೂಲ್ ಆಗಿದೆ.

ಶ್ರೀನಿವಾಸ್ ಅವರ ಮೂರು ಅಂತಸ್ತಿನ ಕಟ್ಟಡದಲ್ಲಿ ಸಿಮೆಂಟ್ ನೆಲಹಾಸನ್ನ ಸಹ ಸೀಳಿಕೊಂಡು ಎಲ್ಲಂದರಲ್ಲಿ ಅಂರ್ತಜಲ ಉಕ್ಕುತ್ತಿದೆ. ಪರಿಣಾಮ ಇಡೀ ನೆಲಮಹಡಿ ಜಲಾವೃತವಾಗಿದೆ. ಇದೇ ಪಕ್ಕದ ಶ್ರೀನಾಥ್ ಎಂಬವರ ಕಟ್ಟಡದ ನೆಲಮಹಡಿ ಬಳಿ ಕೊರೆಸಲಾಗಿದ್ದ ಕೊಳವೆಬಾವಿಯಲ್ಲಿ ಅಷ್ಟಕ್ಕಷ್ಟೇ ನೀರು ಬರುತ್ತಿತ್ತು, ಆದರೆ ಈಗ ವಿದ್ಯುತ್ ಕನೆಕ್ಷನ್ ಪಂಪು ಮೋಟಾರ್ ಅನ್ ಮಾಡದೇ ಕೊಳವೆಬಾವಿಯಿಂದ ನೀರು ತನ್ನಷ್ಟಕ್ಕೇ ತಾನೇ ಮೇಲೆ ಚಿಮ್ಮಿ ಹರಿದುಬರುತ್ತಿದೆ. ಹೀಗಾಗಿ ಈ ಕಟ್ಟಡದ ನೆಲಮಹಡಿ ಸಹ ಜಲಾವೃತವಾಗಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ - ಕಟ್ಟಡಗಳಿಗೆ ಕಾದಿದೆಯಾ ಅಪಾಯ?

ಮತ್ತೊಂದೆಡೆ ಎಂಜಿ ರಸ್ತೆಯ ಕೆ.ವಿ ಫಾರ್ಮಸಿ ಹಾಗೂ ಪಿಯು ಕಾಲೇಜು ಕಟ್ಟಡದ ನೆಲಮಹಡಿಯಲ್ಲೂ ಸಹ ನೀರು ಉಕ್ಕುತ್ತಿದ್ದು, ನೆಲಮಹಡಿ ಸಂಪೂರ್ಣ ನೀರಿನಿಂದ ಭರ್ತಿಯಾಗುತ್ತಿದೆ. ಇದಲ್ಲದೇ ನಗರದ ಬಜಾರ್ ರಸ್ತೆಯ ವಿಜಯ ಬ್ಯಾಂಕ್ ಕಟ್ಟಡದ ನೆಲಮಹಡಿಯಲ್ಲೂ ಸಹ ನೀರು ಉಕ್ಕಿ ಬಂದಿದ್ದು, ಮಾಲೀಕರು ತಾತ್ಕಲಿಕಾವಾಗಿ ನೀರು ಬರದಂತೆ ಕೆಲ ಪರಿಹಾರ ಕ್ರಮಗಳನ್ನ ಕೈಗೊಂಡಿದ್ದಾರೆ. ಇದನ್ನೂ ಓದಿ:  RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ

ಇಷ್ಟೇ ಅಲ್ಲದೆ ನಗರದ ಬಹುತೇಕ ಕಟ್ಟಡಗಳಲ್ಲೂ ಇದೇ ಪರಿಸ್ಥಿತಿ ಉದ್ಭವಿಸುತ್ತಿದೆ. ಪ್ರಮುಖವಾಗಿ ಜಿಲ್ಲಾಸ್ಪತ್ರೆಯ ಬೃಹತ್ ಕಟ್ಟಡದ ನೆಲಮಹಡಿಗಳಲ್ಲಿ ಎಲ್ಲಿ ನೋಡಿದ್ರೂ ಗೋಡೆಗಳು ಹಾಗೂ ಪಿಲ್ಲರ್ ಗಳ ಅಂಚಿನಲ್ಲಿ ನೀರು ಜಿನುಗುತ್ತಿದೆ. ನಗರದ ಹೃದಯಭಾಗದಲ್ಲಿ ಇಂತಹ ಘಟನೆಗಳು ಕಾಣಸಿಗುತ್ತಿದ್ದು, ಕಟ್ಟಡಗಳ ಮಾಲೀಕರಿಗೆ ಎಲ್ಲಿಲ್ಲದ ಆತಂಕ ಶುರುವಾಗಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ - ಕಟ್ಟಡಗಳಿಗೆ ಕಾದಿದೆಯಾ ಅಪಾಯ?

ನೀರು ಹೊರಹಾಕುವ ಕಾಯಕ:

ನೆಲಮಹಡಿ ಕಟ್ಟಡಗಳಲ್ಲಿ 24 ಗಂಟೆಯೂ ನೀರು ಜಿನುಗುವುದು, ಉಕ್ಕುತ್ತಿದ್ದು ನೆಲಮಹಡಿಗಳೊಳಗೆ ಶೇಖರಣೆಯಾಗುತ್ತಿರುವ ನೀರನ್ನು ಪಂಪು ಮಾಡಿ ಹೊರಬಿಡಲಾಗ್ತಿದೆ. ಇಲ್ಲವಾದರೇ ನೆಲಮಹಡಿಗಳು ಮುಳುಗಿ ಹೋಗಲಿವೆ. ಇದು ಕಟ್ಟಡ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಚಿಂತಾಕ್ರಾಂತರನ್ನಾಗಿ ಮಾಡಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ ಕಟ್ಟಡಗಳು ಹಾನಿಗೆ ಓಳಗಾಗುತ್ತಿದ್ದು, ನಿರಂತರ ನೀರು ನಿಲ್ಲುತ್ತಿರೋದ್ರಿಂದ ಕಟ್ಟಡಗಳು ಹಾನಿಗೆ ಓಳಗಾಗಲಿವೆ. ಇದರಿಂದ ಬೆಂಗಳೂರಿನಲ್ಲಿ ಧಿಡೀರ್ ಕಟ್ಟಡಗಳು ಧರೆಗುರುಳುತ್ತಿರುವಂತೆ ನಗರದಲ್ಲೂ ಕಟ್ಟಡಗಳು ಧರೆಗುರುಳಲಿವೆಯಾ ಎಂಬ ಆತಂಕ ಎಲ್ಲರನ್ನ ಕಾಡೋಕೆ ಶುರುಮಾಡಿದೆ.

ಏಕೆ ಈ ಸಮಸ್ಯೆ?

ಭೌಗೋಳಿಕವಾಗಿ ಚಿಕ್ಕಬಳ್ಳಾಪುರ ನಗರ ಕಂದವಾರ ಕೆರೆಯ ಅಂಚಿನಲ್ಲಿಯೇ ಇದೆ. ಬತ್ತಿ ಹೋಗಿದ್ದ ಕಂದವಾರ ಕೆರೆಗೆ ಬೆಂಗಳೂರಿನ ಸಂಸ್ಕರಿತ ತಾಜ್ಯ ನೀರು ಎಚ್ ಎನ್ ವ್ಯಾಲಿ ಯೋಜನೆಯ ನೀರನ್ನು ಹರಿಬಿಡಲಾಗಿದೆ. ಕಳೆದ 1 ವರ್ಷದಿಂದ ಕಂದವಾರ ಕೆರೆ ಮೈದುಂಬಿಕೊಂಡಿದೆ. ಇದರಿಂದ ಸಹಜವಾಗಿ ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತಲೂ ಅಂರ್ತಜಲ ಮಟ್ಟ ಏರಿಕೆಯಾಗಿದೆ. ಬರಡಾಗಿ ಬಾಯಾರಿದ್ದ ಭೂಮಿ ತನ್ನ ಅಂತರಾಳದಲ್ಲಿ ಈಗ ಎಚ್ ಎನ್ ವ್ಯಾಲಿ ನೀರನ್ನ ತನ್ನ ಒಡಲಲ್ಲಿ ತುಂಬಿಸಿಕೊಂಡಿದೆ.

ಇತ್ತೀಚೆಗೆ ಸತತವಾಗಿ ಮಳೆಯಾಗುತ್ತಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಪರಿಣಾಮ ನಗರದ ಸುತ್ತಮುತ್ತಲ ಕೆರೆ ಕುಂಟೆಗಳಲ್ಲಿ ಯಥೇಚ್ಛವಾದ ನೀರಿದೆ. ಇನ್ನೂ ನಗರದ ಹಲವು ಕಡೆ ರಾಜಕಾಲುವೆಗಳ ಒತ್ತುವರಿ ಆಗಿದೆ. ಸರಿಯಾದ ಡ್ರೈನೇಜ್ ಸಿಸ್ಟಂ ನಗರಗಳಲ್ಲಿಲ್ಲ. ಈಗ ನೆಲಮಹಡಿಗಳಲ್ಲಿ ನೀರು ಉಕ್ಕಿ ಬರುತ್ತಿರುವಂತಹ ಕಟ್ಟಡಗಳು ಇರುವಂತಹ ಜಾಗ ಈ ಹಿಂದೆ ತಿಮ್ಮೇಗೌಡ ಕೆರೆಯಾಗಿತ್ತು. ಕಾಲಾನಂತರದಲ್ಲಿ ತಿಮ್ಮೇಗೌಡ ಕೆರೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಆಗಿತ್ತು. ಈಗ ಅದೇ ಜಾಗದಲ್ಲಿ ಬೃಹತ್ ಜಿಲ್ಲಾಸ್ಪತ್ರೆ ಕಟ್ಟಡ ತಲೆಎತ್ತಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ - ಕಟ್ಟಡಗಳಿಗೆ ಕಾದಿದೆಯಾ ಅಪಾಯ?

ಹೀಗಾಗಿ ಬಹಳಷ್ಟು ವರ್ಷಗಳ ಕಾಲ ಬಾಯಾರಿದ್ದ ಭೂ ತಾಯಿ ಈಗ ನೀರು ಬಂದಿದ್ದೇ ತಡ ತನ್ನ ಹಳೆಯ ಜಾಗಗಳಲ್ಲಿ ತನ್ನ ಹಾದಿಯನ್ನ ಹುಡಕುಕಿಕೊಂಡು ಅಂತರಾಳದಲ್ಲೇ ಹರಿಯಲಾರಂಭಿಸಿದ್ದಾಳೆ. ಇನ್ನೂ ಕೆಲವರು ನಗರದಲ್ಲಿದ್ದ ಹಳೆಯ ಬಾವಿಗಳನ್ನ ಮುಚ್ಚಿ ಅವುಗಳ ಮೇಲೆಯೇ ಈಗ ಕಟ್ಟಡಗಳನ್ನು ಕಟ್ಟಿದ್ದಾರೆ. ಪರಿಣಾಮ ಇಂದು ಅಂರ್ತಜಲ ತನ್ನ ಹಳೆ ಹಾದಿಯಲ್ಲಿ ಮತ್ತೆ ಹೊರಬರ್ತಿದ್ದು ಈಗ ಕಟ್ಟಡಗಳ ನೆಲಮಹಡಿಗಳು, ಎಲ್ಲಂದರಲ್ಲಿ ಉಕ್ಕಿ ಮೇಲೆ ಬರುತ್ತಿದೆ.

ಪರಿಹಾರ ಏನು?

ಕಟ್ಟಡಗಳು ಹಾನಿಗೆ ಓಳಗಾಗದಂತೆ, ನೀರು ಸಾಧ್ಯವಾದಷ್ಟು ಬಾರದಂತೆ ತಡೆ ಹಿಡಿಯಲು ಸಾಧ್ಯವಾದಷ್ಟು ಸೂಕ್ತ ಭದ್ರತೆ ಮಾಡಿಕೊಳ್ಳುವ ತಾತ್ಕಾಲಿಕ ಪರಿಹಾರಗಳು ಸಿಗಬಹುದೇ ಹೊರತು, ಶಾಶ್ವತ ಪರಿಹಾರಗಳು ಇಲ್ಲವಾಗಿವೆ. ಪ್ರಕೃತಿಗೆ ವಿರೋಧವಾಗಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ, ಭೂತಾಯಿ ಅಂತರಾಳದ ಹರಿವಿಗೆ ಅಡ್ಡಿ ಮಾಡಲು ಅಸಾಧ್ಯ. ಹೀಗಾಗಿ ನೀರು ಉಕ್ಕುತ್ತಿರುವ ಬಹುತೇಕ ಕಟ್ಟಡಗಳಲ್ಲಿ ಬಾಡಿಗೆಗೆ ಇದ್ದವರು ಭಯದಿಂದ ಖಾಲಿ ಮಾಡಿದ್ದಾರೆ.

ಬಹುತೇಕ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇನ್ನೂ ಕೆಲವರು ನೆಲಮಹಡಿಗಳನ್ನು ಮುಚ್ಚಿ ಹಾಕುವ ಪ್ರಯತ್ನ ಚಿಂತನೆ ನಡೆಸಿದ್ದಾರೆ. ಏನೇ ಆದರೂ ಪ್ರಕೃತಿಯ ಮುಂದೆ ಯಾರೂ ನಿಲ್ಲಲಾಗದು. ಎಚ್ ಎನ್ ವ್ಯಾಲಿ ನೀರಿನಿಂದ ಕಂದವಾರ ಕೆರೆ ಎಲ್ಲ ಋತುಮಾನ ಕಾಲಗಳಲ್ಲೂ ತುಂಬಿರೋದ್ರಿಂದ ಮುಂದಿನ ವರ್ಷಗಳಲ್ಲೂ ಮಳೆ ಇದೇ ರೀತಿ ಆಗೋದ್ರಿಂದ ಅಂರ್ತಜಲ ಕಡಿಮೆ ಆಗಲ್ಲ ಎನಿಸುತ್ತಿದೆ. ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ 

ಇದರಿಂದ ನಗರದ ಬಹುತೇಕ ಕಟ್ಟಡಗಳಿಗೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಜಲಕಂಟಕಗಳು ಶುರುವಾಗಿ ಮುಂದೊಂದು ದಿನ ಬೆಂಗಳೂರಿನಲ್ಲಿ ಕಟ್ಟಡಗಳು ಧರೆಗುರುಳುವ ಹಾಗೆ ಇಲ್ಲೂ ಉರುಳಿದ್ರೆ ಏನ್ ಮಾಡೋದು? ಎಂಬ ಆತಂಕದಲ್ಲೇ ಜನ ಬದುಕು ದೂಡಬೇಕಾಗಿದೆ. ಇನ್ನೂ ಮುಂದೆ ಮನೆ ಕಟ್ಟಡ ಕಟ್ಟೋವರಾದ್ರೂ ಎಚ್ಚರ ವಹಿಸಿ ಮುಂಜಾಗ್ರತೆ ಮುಂದಾಲೋಚನೆಗಳನ್ನ ಮಾಡಿ ಕಟ್ಟಡಗಳನ್ನು ಕಟ್ಟಬೇಕಿದೆ. ಈಗಾಗಲೇ ಕಂದವಾರ ಕೆರೆಯ ಅಂಚಿನ ಭಾಗದ ಜನತೆ ಮನೆಗಳನ್ನು ಖಾಲಿ ಮಾಡಿ ಬೇರೆ ಕಡೆ ಮನೆಗಳಿಗೆ ಬಾಡಿಗೆಗೆ ಹಾಗೂ ಹೊಸ ಮನೆಗಳನ್ನು ಕಟ್ಟಿಕೊಳ್ಳುವ ಚಿಂತನೆಯಲ್ಲಿದ್ದಾರೆ.

Related Articles

Leave a Reply

Your email address will not be published. Required fields are marked *