ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ 85 ದಿನಗಳ ಪರಿವರ್ತನಾ ಯಾತ್ರೆಗೆ ಇಂದು ತೆರೆ ಬೀಳಲಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಮೂರೂವರೆ ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಮಧ್ಯಾಹ್ನ 1 ಗಂಟೆಗೆ ದೆಹಲಿಯಿಂದ ಹೊರಡಲಿರುವ ಪ್ರಧಾನಿ ಮೋದಿ 3.30ರ ವೇಳೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
Advertisement
Advertisement
ಬಳಿಕ ಅಲ್ಲಿಂದ ನೇರವಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ 3.50ಕ್ಕೆ ಜೆಸಿನಗರದ ಹೆಲಿಪ್ಯಾಡ್‍ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ 3.55ಕ್ಕೆ ಸಮಾವೇಶಕ್ಕೆ ಆಗಮಿಸಿ, 1 ಗಂಟೆಗಳ ಕಾಲ ಭಾಷಣ ಮಾಡಲಿದ್ದಾರೆ.
Advertisement
Advertisement
ಕೇಂದ್ರ ಬಜೆಟ್ ಬಳಿಕ ಮೊದಲ ಸಾರ್ವಜನಿಕ ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ವಿದೇಶಗಳಲ್ಲಿರುವ ಎನ್‍ಆರ್‍ಐಗಳಿಗೆ ಮೋದಿ ಭಾಷಣ ತಲುಪಿಸಲು ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ. ಬಿಜೆಪಿ ಕರ್ನಾಟಕ, ಬಿಜೆಪಿ ಇಂಡಿಯಾ, ಬಿಜೆಪಿ ಟ್ವಿಟ್ಟರ್ ಸಾಮಾಜಿಕ ಜಾಲತಾಣಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಭಾಷಣ ಪ್ರಸಾರ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 200 ಸೋಶಿಯಲ್ ಮೀಡಿಯಾ ಕಾರ್ಯಕರ್ತರಿಂದ ಫೇಸ್ ಬುಕ್ ಮೂಲಕ ಲೈವ್ ನೀಡಲು ತೀರ್ಮಾನ ತೆಗೆದುಕೊಂಡಿದ್ದು, ಮೋದಿ ಭಾಷಣ ಲೈವ್ ಪ್ರಸಾರ ಮಾಡಲೆಂದೇ ಆಯ್ದ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ.
ಸಮಾವೇಶದಲ್ಲಿ ಮಾತನಾಡುವ ಪ್ರಧಾನಿ ಅವರು ಮಹದಾಯಿ ವಿಚಾರವನನ್ನು ಪ್ರಸ್ತಾಪ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾತ್ರ ಮೋದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾಷಣದ ವೇಳೆ ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಪರಿವರ್ತನಾ ಯಾತ್ರೆ ಮುಕ್ತಾಯದ ನಂತರ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಈ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುತ್ತದೆ.