ಜೈಲಿಗೆ ಹೋದ್ರೂ ಚಿಂತೆ ಇಲ್ಲ, ಅಣ್ಣಾವ್ರ ವಿಚಾರದಲ್ಲಿ ರಾಜಿ ಆಗಿಲ್ಲ – ನಟ ಚೇತನ್ ವಿರುದ್ಧ ಸಾ.ರಾ ಗೋವಿಂದು ಕಿಡಿ

1 Min Read

ಬೆಂಗಳೂರು: 48 ವರ್ಷಗಳ ಕನ್ನಡ ಹೋರಾಟದಲ್ಲಿ ನಾನು ಯಾವತ್ತೂ ರಾಜಿ ಆಗಿಲ್ಲ. ಅದಕ್ಕೆ ಶಕ್ತಿ, ಸ್ಫೂರ್ತಿ ಡಾ. ರಾಜ್‌ಕುಮಾರ್ ಎಂದು ಹೇಳುವ ಮೂಲಕ ನಟ ಚೇತನ್ ಅಹಿಂಸಾ (Chetan Ahimsa) ಅವರ ಆರೋಪಕ್ಕೆ ನಿರ್ಮಾಪಕ ಸಾ.ರಾ ಗೋವಿಂದು (Sara Govindu) ತಿರುಗೇಟು ನೀಡಿದರು.

ರಾಜ್‌ಕುಮಾರ್ ಸಮಾಧಿ ವಿಚಾರದಲ್ಲಿ ಸಾರಾ ಗೋವಿಂದು ವಿರುದ್ಧ ನಟ ಚೇತನ್ ದೂರು ನೀಡಿದ್ದ ವಿಚಾರಕ್ಕೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಎಲ್ಲಿಂದ ಬಂದಿದೀಯ, ಸಂಸ್ಕೃತಿ ಇಲ್ವಾ ನಿನಗೆ? ಡಾ. ರಾಜ್‌ಕುಮಾರ್ ಅವರ ಬಗ್ಗೆ ನಿನಗೇನು ಗೊತ್ತು? ಗೋಕಾಕ್ ಚಳುವಳಿಯ ಮುಂದಾಳತ್ವ ವಹಿಸಿಕೊಂಡವರ ಬಗ್ಗೆ ಗೊತ್ತಾ ನಿನಗೆ? ಪ್ರಶಸ್ತಿಗಳು ಸುಮ್ಮನೆ ಬರುವುದಿಲ್ಲ, ಅದರ ಹಿಂದಿನ ಹೋರಾಟದ ಕಥೆ ನಿನಗೆ ಗೊತ್ತಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌

ಡಾ. ರಾಜ್‌ಕುಮಾರ್ ಅವರಿಗೆ ಜಾಗ ಇರಲಿಲ್ವಾ? ಕುಂಬಳಗೋಡಿಯಲ್ಲಿ ಅವರಿಗೆ 15 ಎಕರೆ ಜಾಗವಿತ್ತು. ತಮ್ಮ ಸಹೋದರನ ಕುಟುಂಬದವರು ಮಣ್ಣಾದ ಜಾಗದಲ್ಲೇ ತಾವೂ ಇರಬೇಕೆಂದು ಅವರು ಆಸೆಪಟ್ಟಿದ್ದರು. ಆದರೆ ಅಭಿಮಾನಿಗಳಿಗಾಗಿ ಇಂದು ಇರುವ ಜಾಗದಲ್ಲಿ ಸ್ಮಾರಕ ಮಾಡಲಾಗಿದೆ ಎಂದು ಗೋವಿಂದು ಸ್ಪಷ್ಟನೆ ನೀಡಿದರು.

ತಮ್ಮ ವಿರುದ್ಧ ದಾಖಲಾಗಿರುವ ಆರೋಪವನ್ನು ತಳ್ಳಿಹಾಕಿದ ಅವರು, ನಾನೇನು ಅವನ ಮನೆಗೆ ನುಗ್ಗಿ ದಾಂದಲೆ ಮಾಡಿದ್ನಾ? ದಾಂದಲೆ ಮಾಡಿದ್ದೀನಿ ಅಂತ ದೂರು ಕೊಟ್ಟಿದ್ದಾನೆ. ಹೈಕೋರ್ಟ್ ನಲ್ಲಿ ಈಗಾಗಲೇ ಯಾವುದೇ ಪ್ರತಿಭಟನೆ ಮೆರವಣಿಗೆ ಮಾಡಬಾರದು ಅಂತ ಹೇಳಿದ್ದಾರೆ. ಅದೇ ರೂಲ್ಸ್ ಫಾಲೋ ಮಾಡ್ತಿದ್ದೇವೆ. ಆದರೆ ಚೇತನ್ ಮಾಡುತ್ತಿರುವ ಕೆಲಸಗಳ ವಿರುದ್ಧ ನಾವೆಲ್ಲರೂ ಒಗ್ಗೂಡಿ ದೂರು ನೀಡುತ್ತೇವೆ. ನಾವೇನು ಸತ್ತಿಲ್ಲ, ಬದುಕಿದ್ದೇವೆ. ಪ್ರತಿಭಟನೆ ಮಾಡ್ತಿರೋದು ಹೆದರಿಕೊಂಡು ಅಲ್ಲ. ನ್ಯಾಯಕ್ಕಾಗಿ ಎಲ್ಲರೂ ಕೈಜೋಡಿಸಿದ್ದೇವೆ ಎಂದು ಹೇಳುವ ಮೂಲಕ ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು

Share This Article