ಬೆಂಗಳೂರು: ಕ್ರಿಕೆಟ್ (Cricket) ಪಂದ್ಯವಾಡುತ್ತಿದ್ದ ವೇಳೆ ಹೃದಯಾಘಾತದಿಂದ (Heart Attack) ಕರ್ನಾಟಕದ ಮಾಜಿ ರಣಜಿ ಆಟಗಾರ (Former Ranji Player) ಎಸ್. ಎಲ್ ಅಕ್ಷಯ್ ಸಾವನ್ನಪ್ಪಿದ್ದಾರೆ. ಶಿವಮೊಗ್ಗ (Shivamogga) ಮೂಲದ ಅಕ್ಷಯ್ (39) (S.L Akshay), ಬೆಂಗಳೂರಿನ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕ ರಣಜಿ ತಂಡದ ಪರ ಆಡಿದ್ದ ಅಕ್ಷಯ್, ತಮ್ಮ ಕರಾರುವಕ್ಕಾದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ರಣಜಿ ಮಾತ್ರವಲ್ಲದೇ ಕೆಪಿಎಲ್ ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಹೆಸರು ಮಾಡಿದ್ದರು. ಕರ್ನಾಟಕ ಪರ ಅವರು 6 ಫಸ್ಟ್ ಕ್ಲಾಸ್, 3 ಲಿಸ್ಟ್ ‘ಎ’ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದರು. ಇದನ್ನೂ ಓದಿ: IPL 2026 | ಪ್ಲೇಆಫ್‌ಗೆ ರಾಜಸ್ಥಾನ್ ರಾಯಲ್ ಎಂಟ್ರಿ – ಪಂಜಾಬ್, ಕೆಕೆಆರ್ ಮನೆಗೆ
ಭಾನುವಾರ (ಮೇ 24) ಬೆಂಗಳೂರಿನ (Bengaluru) ಎಸ್‌ಎಲ್‌ಎಸ್ ಮೈದಾನದಲ್ಲಿ ಸಫೀಯರ್ ಕ್ರಿಕೆಟ್ ಕ್ಲಬ್ ಹಾಗೂ ಭಾರತ್ ಕ್ರಿಕೆಟ್ ಕ್ಲಬ್ ನಡುವಿನ ಥರ್ಡ್ ಡಿವಿಷನ್ ಪಂದ್ಯ ನಡೆಯುತ್ತಿತ್ತು. ಸಫೀಯರ್ ತಂಡದ ಪರ ಆಡುತ್ತಿದ್ದ ಅಕ್ಷಯ್, ನಾಲ್ಕು ಓವರ್ ಬೌಲಿಂಗ್ ಮಾಡಿದ್ದರು. ಬಳಿಕ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಮೈದಾನದಿಂದ ಹೊರಬಂದು ವಿಶ್ರಾಂತಿ ಪಡೆದಿದ್ದರು.
ಬಾಳೆಹಣ್ಣು ಸೇವಿಸಿ ವಿಶ್ರಾಂತಿ ಕೊಠಡಿಗೆ ತೆರಳಿದ್ದ ಅಕ್ಷಯ್, ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಎಸ್‌ಎಲ್ ಅಕ್ಷಯ್ ನಿಧನ ಸುದ್ದಿ ತಿಳಿದು ಕ್ರೀಡಾ ವಲಯದಲ್ಲಿ ದುಃಖ ಆವರಿಸಿದೆ. ಸದಾ ಸ್ನೇಹಪರ ಹಾಗೂ ಜಾಲಿ ಸ್ವಭಾವದಿಂದ ಎಲ್ಲರೊಂದಿಗೂ ಬೆರೆತು ಹೋಗುತ್ತಿದ್ದ ಅಕ್ಷಯ್ ಅಗಲಿಕೆ ಸಹ ಆಟಗಾರರು ಹಾಗೂ ಸ್ನೇಹಿತರಿಗೆ ಆಘಾತ ಉಂಟುಮಾಡಿದೆ. ಇದನ್ನೂ ಓದಿ: ಲಕ್ನೋ ಸೋತರೂ ಗೆದ್ದ ಅರ್ಜುನ್ – ಚೊಚ್ಚಲ ಪಂದ್ಯದ ಪ್ರದರ್ಶನಕ್ಕೆ ತೆಂಡೂಲ್ಕರ್ ಭಾವುಕ ಪೋಸ್ಟ್
