ಮುಂಬೈ: ಬಿಗಿ ಬೌಲಿಂಗ್ ದಾಳಿ, ಸಂಘಟಿತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 30 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 19ನೇ ಆವೃತ್ತಿಯ ಪ್ಲೇ ಆಫ್‌ಗೆ (IPL Playoffs) ರಾಯಲ್ ಎಂಟ್ರಿ ಕೊಟ್ಟಿದೆ. ಇನ್ನೂ ರಾಜಸ್ಥಾನ್ ಸೋತರೆ ಪ್ಲೇ ಆಫ್ ಪ್ರವೇಶಿಸಬಹುದು ಎನ್ನುವ ತವಕದಲ್ಲಿದ್ದ ಪಂಜಾಬ್ ಕಿಂಗ್ಸ್ (PBKS) ಹಾಗೂ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ತಂಡಗಳು ಗಂಟುಮೂಟೆ ಕಟ್ಟಿವೆ.
ಇನ್ನೂ ಗೆಲ್ಲುವ ಅವಕಾಶ ಕೈಚೆಲ್ಲಿದ ಮುಂಬೈ ಇಂಡಿಯನ್ಸ್ (Mumbai Indians) ಹೀನಾಯ ಸೋಲಿನೊಂದಿಗೆ 19ನೇ ಆವೃತ್ತಿಯ ಐಪಿಎಲ್ ಅಭಿಯಾನವನ್ನ ಮುಗಿಸಿದೆ. 14 ಲೀಗ್ ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನಷ್ಟೇ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆಯುವ ಮೂಲಕ ಹೀನಾಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಟರ್ನಿಂಗ್ ಸಿಕ್ಕಿದ್ದೆಲ್ಲಿ?
ಆರಂಭದಲ್ಲಿ ಅಲ್ಪ ಮೊತ್ತಕ್ಕೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಮುಂಬೈ ತಂಡ ಮತ್ತೆ ಪುಟಿದೆದ್ದಿತ್ತು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ವಿಲ್ ಜಾಕ್ಸ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಇನ್ನಿಂಗ್ಸ್ ಮತ್ತೆ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ಯುತ್ತಿತ್ತು. ಆದ್ರೆ ಜಾಕ್ಸ್ ಮತ್ತು ಪಾಂಡ್ಯ (Hardik Pandya) ಸ್ಫೋಟಕ ಪ್ರದರ್ಶನ ನೀಡಿ ಔಟಾಗುತ್ತಿದ್ದಂತೆ ರನ್ ವೇಗವೂ ಕಡಿತಗೊಂಡಿತು. ಇನ್ನೂ ಭರವಸೆಯಿಟ್ಟಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಅನಗತ್ಯ ಶಾಟ್‌ಗೆ ಪ್ರಯತ್ನಿಸಿ 158 ರನ್‌ಗಳಿದ್ದಾಗ ಔಟಾದರು. ಇದರೊಂದಿಗೆ ಮುಂಬೈ ತಂಡದ ಗೆಲುವಿನ ಕನಸು ಕಮರಿಹೋಯಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ ಹೀನಾಯ ಸೋಲೊಪ್ಪಿಕೊಂಡಿತು.

ಮುಂಬೈ ಪರ ಏಕಾಂಗಿ ಹೋರಾಟ ನಡೆಸಿದ ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ60 ರನ್ ಚಚ್ಚಿದ್ರೆ, ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ ಸ್ಫೋಟಕ 34 ರನ್, ವಿಲ್ ಜಾಕ್ಸ್ 33 ರನ್ ಗಳಿಸಿದ್ರೆ, ಇನ್ನುಳಿದವರು ಅಲ್ಪಮೊತ್ತಕ್ಕೆ ಔಟಾಗಿ ತಂಡದ ಸೋಲಿಗೆ ಕಾರಣವಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ಪರ ಜೈಸ್ವಾಲ್ 27 ರನ್, ಜುರೆಲ್ 38 ರನ್, ದಸುನ್ ಶನಾಕ 29 ರನ್, ಫೆರೆರಾ 18 ರನ್, ಜೋಫ್ರಾ ಆರ್ಚರ್ ಸ್ಫೋಟಕ 32 ರನ್, ಚಚ್ಚಿದ್ರೆ, ಜಡೇಜಾ 19 ರನ್, ರಿಯಾನ್ ಪರಾಗ್ 14 ರನ್, ಬರ್ಗರ್ 10 ರನ್, ಸೂರ್ಯವಂಶಿ 4 ರನ್, ಶುಭಂ ದುಬೆ 5 ರನ್ ಕೊಡುಗೆ ನೀಡಿದ್ರು.
