ನ್ಯೂಯಾರ್ಕ್: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಉಗ್ರ(Khalistani Extremist) ಗುರುಪತ್ವಂತ್ ಸಿಂಗ್ ಪನ್ನುನ್(Gurpatwant Pannun) ಹತ್ಯೆಗೆ ಸುಪಾರಿ ನೀಡಿದ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ನ್ಯಾಯಾಲಯ 19 ವರ್ಷ ಮತ್ತು 7 ತಿಂಗಳ (235 ತಿಂಗಳು) ಜೈಲು ಶಿಕ್ಷೆ ವಿಧಿಸಿದೆ.
ಭಾರತೀಯ ಕಾನೂನಿನ ಅಡಿಯಲ್ಲಿ ಪನ್ನುನ್ ಘೋಷಿತ ಭಯೋತ್ಪಾದಕನಾಗಿದ್ದು, ಆತನ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಭಾರತೀಯ ಮೂಲದ ವಕೀಲ ಪನ್ನುನ್ ಹತ್ಯೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪಾರಿ ಹತ್ಯೆ, ಸುಪಾರಿ ಹತ್ಯೆಗೆ ಸಂಚು ಹಾಗೂ ಅಕ್ರಮ ಹಣ ವರ್ಗಾವಣೆ ಸಂಚು ಸೇರಿದಂತೆ ವಿವಿಧ ಆರೋಪಗಳನ್ನು ನಿಖಿಲ್ ಗುಪ್ತಾ(Nikhil Gupta) ಈ ವರ್ಷದ ಆರಂಭದಲ್ಲಿ ಒಪ್ಪಿಕೊಂಡಿದ್ದರು.
ಶುಕ್ರವಾರ ಸುಮಾರು 80 ನಿಮಿಷಗಳ ಕಾಲ ನಡೆದ ವಿಚಾರಣೆಯ ನಂತರ ನ್ಯೂಯಾರ್ಕ್ನ ಸದರ್ನ್ ಡಿಸ್ಟ್ರಿಕ್ಟ್ ನ್ಯಾಯಾಧೀಶ ವಿಕ್ಟರ್ ಮರೆರೊ ಈ ಶಿಕ್ಷೆಯನ್ನು ಪ್ರಕಟಿಸಿದರು.
ವಿಚಾರಣೆ ವೇಳೆ ಹೇಳಿಕೆ ನೀಡಿದ ಪನ್ನುನ್, “ತಮ್ಮ ಜೀವಕ್ಕೆ ಬೆದರಿಕೆ ಇರುವುದು ತಿಳಿದುಬಂದಾಗಿನಿಂದ ಕಳೆದ 1,200ಕ್ಕೂ ಹೆಚ್ಚು ದಿನಗಳಿಂದ (ಸುಮಾರು ನಾಲ್ಕು ವರ್ಷಗಳು) ನನಗೆ ನನ್ನ ದೈನಂದಿನ ವಕೀಲ ವೃತ್ತಿಯನ್ನು ನಡೆಸಲು ಸಾಧ್ಯವಾಗಿಲ್ಲ” ಎಂದು ತಿಳಿಸಿದ್ದ.
ಮತ್ತೊಂದೆಡೆ, ಪನ್ನುನ್ ಹತ್ಯೆಯ ಸಂಚಿನಲ್ಲಿ ತಾನು ಭಾಗಿಯಾಗಿದ್ದಕ್ಕಾಗಿ ನಿಖಿಲ್ ಗುಪ್ತಾ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದರು. ವಿಚಾರಣೆಗೂ ಮುನ್ನ ನ್ಯೂಯಾರ್ಕ್ ನ್ಯಾಯಾಲಯದ ಹೊರಗೆ ಜಮಾಯಿಸಿದ್ದ ಪನ್ನುನ್ ಬೆಂಬಲಿಗರು, ಗುಪ್ತಾ ಹಾಗೂ ಇತರರ ಪ್ರತಿಕೃತಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.
ಅಮೆರಿಕದ ವಾದ ಏನಿತ್ತು?
ಅಮೆರಿಕದ ಪ್ರಾಸಿಕ್ಯೂಟರ್ಗಳ ಪ್ರಕಾರ, ಅಂದಿನ ಭಾರತ ಸರ್ಕಾರದ ಉದ್ಯೋಗಿಯಾಗಿದ್ದ ವಿಕಾಸ್ ಯಾದವ್, ಪನ್ನುನ್ ಹತ್ಯೆಗಾಗಿ ಸುಪಾರಿ ಹಂತಕನನ್ನು ನೇಮಿಸಲು 2023ರ ಮೇ ತಿಂಗಳಿನಲ್ಲಿ ನಿಖಿಲ್ ಗುಪ್ತಾ ಅವರನ್ನು ನಿಯೋಜಿಸಿದ್ದರು. ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW) ಯಾದವ್ ಕೆಲಸ ಮಾಡುತ್ತಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಯಾದವ್ ನಿರ್ದೇಶನದಂತೆ ಗುಪ್ತಾ ಅವರು ಅಪರಾಧ ಹಿನ್ನೆಲೆಯ ಸಹಚರನೆಂದು ಭಾವಿಸಿ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ಆದರೆ, ಆ ವ್ಯಕ್ತಿ ಅಮೆರಿಕದ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಜೊತೆ ಕೆಲಸ ಮಾಡುವ ರಹಸ್ಯ ಮಾಹಿತಿದಾರನಾಗಿದ್ದ. ಬಳಿಕ ಆ ಮಾಹಿತಿದಾರ ಗುಪ್ತಾ ಅವರನ್ನು ಸುಪಾರಿ ಹಂತಕನ ಸೋಗಿನಲ್ಲಿದ್ದ ಡಿಇಎ (DEA) ರಹಸ್ಯ ಅಧಿಕಾರಿಗೆ ಪರಿಚಯಿಸಿದ್ದನು.
ಹತ್ಯೆಗಾಗಿ 1,00,000 ಡಾಲರ್ ನೀಡಲು ಯಾದವ್ ಒಪ್ಪಿಕೊಂಡಿದ್ದು, ಮುಂಗಡವಾಗಿ 15,000 ಡಾಲರ್ಗಳನ್ನು ನ್ಯೂಯಾರ್ಕ್ನಲ್ಲಿ ತಲುಪಿಸಲಾಗಿತ್ತು. ಅಲ್ಲದೆ, ಪನ್ನುನ್ ಮನೆಯ ವಿಳಾಸ, ಫೋನ್ ಸಂಖ್ಯೆಗಳು, ದೈನಂದಿನ ಚಟುವಟಿಕೆಗಳ ಮಾಹಿತಿ ಹಾಗೂ ಕಣ್ಗಾವಲು ಫೋಟೋಗಳನ್ನು ಗುಪ್ತಾ ಹಸ್ತಾಂತರಿಸಿದ್ದರು ಎಂದು ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ. 2023ರ ಜೂನ್ 30ರಂದು ಜೆಕ್ ಗಣರಾಜ್ಯದ ಪ್ರೇಗ್ನಲ್ಲಿ ಬಂಧಿತರಾಗಿದ್ದ ಗುಪ್ತಾ ಅವರನ್ನು 2024ರ ಜೂನ್ನಲ್ಲಿ ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ವಿಕಾಶ್ ಯಾದವ್ ಅಮೆರಿಕದ ವಶದಲ್ಲಿಲ್ಲ.
ಭಾರತ ಹೇಳಿದ್ದೇನು?
ಈ ಸಂಚಿನಲ್ಲಿ ತನ್ನ ಯಾವುದೇ ಅಧಿಕಾರಿಗಳ ಪಾತ್ರವಿಲ್ಲ ಎಂದು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ. 2023ರ ನವೆಂಬರ್ನಲ್ಲಿ ಅಮೆರಿಕ ಈ ದೋಷಾರೋಪ ಪಟ್ಟಿಯನ್ನು ಬಹಿರಂಗಪಡಿಸಿದ ಮರುದಿನವೇ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಅಧಿಕಾರಿಯೊಬ್ಬರ ಹೆಸರು ತಳುಕು ಹಾಕಿಕೊಂಡಿರುವುದು ಕಳವಳಕಾರಿ ವಿಷಯವಾಗಿದ್ದು, ಇದು ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿತ್ತು. ಅಲ್ಲದೆ, ಅಮೆರಿಕದ ಆರೋಪಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು.
2025ರ ಜನವರಿಯಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವಾಲಯ, “ಈ ಹಿಂದೆ ಅಪರಾಧ ಹಿನ್ನೆಲೆ ಮತ್ತು ಸಂಪರ್ಕಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖಾ ಸಮಿತಿ ಶಿಫಾರಸು ಮಾಡಿದೆ” ಎಂದು ತಿಳಿಸಿತ್ತು. ಆದರೆ, ಆ ವ್ಯಕ್ತಿ ವಿಕಾಶ್ ಯಾದವ್ ಎಂದು ಸಚಿವಾಲಯ ಹೆಸರಿಸಿರಲಿಲ್ಲ.
