ಬೆಳಗಿನ ಉಪಾಹಾರಕ್ಕೆ ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿದ್ದರೆ ಆವಕಾಡೊ ಸ್ಟಫ್ಡ್ ಫ್ರೆಂಚ್ ಟೋಸ್ಟ್ ಟ್ರೈ ಮಾಡಬಹುದು. ಹೊರಭಾಗದಲ್ಲಿ ಗರಿಗರಿಯಾಗಿದ್ದು, ಒಳಭಾಗದಲ್ಲಿ ಕೆನೆಭರಿತ ಆವಕಾಡೊ ಮಿಶ್ರಣ ಹೊಂದಿರುವ ಈ ರೆಸಿಪಿ ರುಚಿಯ ಜೊತೆಗೆ ಪೌಷ್ಟಿಕಾಂಶವನ್ನೂ ನೀಡುತ್ತದೆ. ಬ್ರೆಡ್, ಮೊಟ್ಟೆ, ಹಾಲು ಮತ್ತು ಮಾಗಿದ ಆವಕಾಡೊ ಬಳಸಿ ಕೇವಲ 15 ನಿಮಿಷಗಳಲ್ಲಿ ಮನೆಯಲ್ಲೇ ಇದನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
ಬ್ರೆಡ್ ಸ್ಲೈಸ್ – 4
ಆವಕಾಡೊ – 2
ಮೊಟ್ಟೆ – 2
ಹಾಲು – ½ ಕಪ್
ಹಾಟ್ ಸಾಸ್ – ½ ಟೀಸ್ಪೂನ್
ಉಪ್ಪು – ½ ಟೀಸ್ಪೂನ್
ಕರಿಮೆಣಸಿನ ಪುಡಿ – ¼ ಟೀಸ್ಪೂನ್
ಉಪ್ಪುರಹಿತ ಬೆಣ್ಣೆ – 2 ದೊಡ್ಡ ಚಮಚ
ಐಚ್ಛಿಕ ಪದಾರ್ಥಗಳು:
ಬೇಯಿಸಿದ ಅಥವಾ ಹುರಿದ ಮೊಟ್ಟೆ – 4
ಆವಕಾಡೊ ತುಂಡುಗಳು – ಸ್ವಲ್ಪ
ಮೇಪಲ್ ಸಿರಪ್ – ಅಗತ್ಯವಿದ್ದಷ್ಟು
ಮಾಡುವ ವಿಧಾನ
ಮೊದಲು ಎರಡು ಮಾಗಿದ ಆವಕಾಡೊಗಳನ್ನು ತೆಗೆದುಕೊಂಡು ಸಿಪ್ಪೆ ಮತ್ತು ಬೀಜ ತೆಗೆದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಅರ್ಧ ಟೀಸ್ಪೂನ್ ಉಪ್ಪು ಮತ್ತು ಕಾಲು ಟೀಸ್ಪೂನ್ ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ದಪ್ಪ ಬ್ರೆಡ್ ಸ್ಲೈಸ್ಗಳನ್ನು ತೆಗೆದುಕೊಂಡು ಪ್ರತಿಯೊಂದು ಸ್ಲೈಸ್ನ ಒಂದು ಬದಿಯಲ್ಲಿ ಪಾಕೆಟ್ ರೀತಿಯಲ್ಲಿ ಕತ್ತರಿಸಿಕೊಳ್ಳಿ. ಆದರೆ, ಬ್ರೆಡ್ ಸಂಪೂರ್ಣವಾಗಿ ಎರಡು ಭಾಗವಾಗದಂತೆ ಎಚ್ಚರಿಕೆ ವಹಿಸಿ. ಅರ್ಧ ಸ್ಲೈಸ್ ಮಾಡಿದ ಒಳಗೆ ತಯಾರಿಸಿಟ್ಟ ಆವಕಾಡೊ ಮಿಶ್ರಣವನ್ನು ಸಮವಾಗಿ ತುಂಬಿಕೊಳ್ಳಿ.
ನಂತರ ಒಂದು ಅಗಲವಾದ ಬಟ್ಟಲಿನಲ್ಲಿ ಎರಡು ಮೊಟ್ಟೆಗಳನ್ನು ಒಡೆದು ಹಾಕಿ. ಇದಕ್ಕೆ ಅರ್ಧ ಕಪ್ ಹಾಲು ಮತ್ತು ಅರ್ಧ ಟೀಸ್ಪೂನ್ ಹಾಟ್ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ಎರಡು ಚಮಚ ಬೆಣ್ಣೆ ಹಾಕಿ ಮಧ್ಯಮ-ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಸ್ಟಫ್ ಮಾಡಿದ ಬ್ರೆಡ್ ಸ್ಲೈಸ್ಗಳನ್ನು ಮೊಟ್ಟೆಯ ಮಿಶ್ರಣದಲ್ಲಿ ಎರಡೂ ಬದಿಗಳಲ್ಲಿ ನಿಧಾನವಾಗಿ ಅದ್ದಿಕೊಳ್ಳಿ.
ನಂತರ ಬಿಸಿ ಬಾಣಲೆಯ ಮೇಲೆ ಬ್ರೆಡ್ ಸ್ಲೈಸ್ಗಳನ್ನು ಇಟ್ಟು ಎರಡೂ ಬದಿಗಳಲ್ಲಿ ಸುಮಾರು 2–3 ನಿಮಿಷಗಳ ಕಾಲ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ. ಬ್ರೆಡ್ ಹೊರಭಾಗ ಗರಿಗರಿಯಾಗಿದ್ದು ಒಳಭಾಗ ಚೆನ್ನಾಗಿ ಬೆಂದ ನಂತರ ಒಲೆಯಿಂದ ಕೆಳಗಿಳಿಸಿ.ಕೊನೆಯದಾಗಿ ತಟ್ಟೆಗೆ ಹಾಕಿ ಬೇಕಿದ್ದರೆ ಬೇಯಿಸಿದ ಅಥವಾ ಹುರಿದ ಮೊಟ್ಟೆ ಹಾಗೂ ಆವಕಾಡೊ ತುಂಡುಗಳಿಂದ ಅಲಂಕರಿಸಿ ಬಿಸಿಬಿಸಿಯಾಗಿ ಸವಿಯಿರಿ.


