ಧಾರವಾಡ: ಗಿರಿವಿ ಇಟ್ಟಿದ್ದ ಚಿನ್ನವನ್ನು ವಾಪಸ್ ಕೇಳಿದ್ದಕ್ಕೆ ಧಾರವಾಡದ (Dharwad) ಗರಗ ಗ್ರಾಮದಲ್ಲಿ ಫೈರಿಂಗ್ ನಡೆದಿದೆ. ಚಿನ್ನ (Gold) ಕೇಳಿದ ಅಪ್ಪ ಮಗನ ಮೇಲೆ ಚಿನ್ನದಂಗಡಿ ಮಾಲೀಕ ಗುಂಡು ಹಾರಿಸಿದ್ದಾನೆ. ಈ ವೇಳೆ ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿಗೆ (School Student) ಸಹ ಗುಂಡು ತಗುಲಿದೆ.
ಗರಗ ಗ್ರಾಮದ ಜ್ಯುವೆಲ್ಲರಿ ಶಾಪ್ ಮಾಲೀಕ ಮೌನೇಶ್ ಬಳಿ ಜೀರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ ಹಾಗೂ ಆತನ ಪುತ್ರ ಸಿದ್ದಪ್ಪ ಹೊರಕೇರಿ 4 ವರ್ಷಗಳ ಹಿಂದೆ 40 ಗ್ರಾಂ ಚಿನ್ನವನ್ನು 60 ಸಾವಿರ ರೂ.ಗೆ ಗಿರಿವಿ ಇಟ್ಟಿದ್ದರು. ಈಗ ಹಣ ವಾಪಸ್ ಕೊಟ್ಟು ಚಿನ್ನ ಬಿಡಿಸಿಕೊಳ್ಳಲು ನಿಂಗಪ್ಪ ಹಾಗೂ ಸಿದ್ದಪ್ಪ ಮುಂದಾಗಿದ್ದರು. ಚಿನ್ನ ಕೊಡಿ ಇಲ್ಲವೇ ಪ್ರಸ್ತುತ ಚಿನ್ನದ ದರವನ್ನಾದರೂ ನೀಡಿ ಎಂದು ಇಬ್ಬರೂ ಕೇಳಿದ್ದರು. ಆದರೆ, ಮೌನೇಶ್, ನಿಮ್ಮ ಚಿನ್ನ ಮುರುಗಡೆಯಾಗಿದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಆಶೀರ್ವಾದದ ನೆಪದಲ್ಲಿ ಚಿನ್ನದ ಉಂಗುರ ಕಳವು; ನಾಗಸಾಧುಗಳ ವೇಷದಲ್ಲಿ ಬಂದ ಇಬ್ಬರಿಂದ ಕೃತ್ಯ
ಇದರಿಂದ ಮಾತಿಗೆ ಮಾತು ಬೆಳೆದು ಮೌನೇಶ್ ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಫೈರಿಂಗ್ ಮಾಡಿದ್ದಾನೆ. ಈ ವೇಳೆ ಸಿದ್ದಪ್ಪನಿಗೆ ಹೊಟ್ಟೆಗೆ ಗುಂಡು ತಾಕಿದರೆ, ನಿಂಗಪ್ಪನಿಗೆ ಹೊಟ್ಟೆ ಹಾಗೂ ಕಾಲಿಗೆ ಗುಂಡು ತಾಕಿದೆ. ಇದೇ ವೇಳೆ ಶಾಲೆಯಿಂದ ಬರುತ್ತಿದ್ದ ಗರಗ ಗ್ರಾಮದ 10 ವರ್ಷದ ಬಾಲಕಿಯ ಕಾಲಿಗೂ ಗುಂಡು ತಾಕಿದೆ.
ಗಾಯಾಳುಗಳಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೇ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಎಸ್‌ಪಿ ಗುಂಜನ್ ಆರ್ಯ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ, ಮೌನೇಶ್ ಬಳಿ ಚಿನ್ನದ ವ್ಯವಹಾರ ಮಾಡಿದ್ದರು, ನಾಲ್ಕು ತೊಲೆ ಚಿನ್ನ ಅಡವಿಟ್ಟಿದ್ದರು. ಇದೇ ವಿಚಾರಕ್ಕೆ ಗಲಾಟೆಯಾಗಿ ರಿವಾಲ್ವರ್‌ನಿಂದ ಗುಂಡು ಹಾರಿಸಲಾಗಿದೆ. ಎಷ್ಟು ಗುಂಡು ಹಾರಿದೆ ಎಂದು ಪರಿಶೀಲನೆ ಮಾಡುತ್ತೇವೆ. ಶಾಲೆಯಿಂದ ಬರುತಿದ್ದ ಬಾಲಕಿಗೆ ಕೂಡಾ ಗುಂಡು ತಾಗಿದೆ. ಈ ಜಗಳಕ್ಕೆ ಮತ್ತು ಬಾಲಕಿಗೆ ಸಂಬಂಧ ಇಲ್ಲ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪಕ್ಷಿ ನವಿಲಿಗೆ ಹಲಾಲ್ ಮಾಡಿ ಮಾಂಸ ಮಾರಾಟ – ಆರೋಪಿ ಅರೆಸ್ಟ್
