Connect with us

ಹಬ್ಬ, ಮಗನ ಹುಟ್ಟುಹಬ್ಬ ಮುಗಿಸಿ ಬೆಂಗ್ಳೂರಿಗೆ ಮರಳುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ತಂದೆ ಸಾವು!

ಹಬ್ಬ, ಮಗನ ಹುಟ್ಟುಹಬ್ಬ ಮುಗಿಸಿ ಬೆಂಗ್ಳೂರಿಗೆ ಮರಳುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ತಂದೆ ಸಾವು!

ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಶೀತಲೀಕರಣ ಕೇಂದ್ರದ ಬಳಿ ನಡೆದಿದೆ.

ಅಪಘಾತದಲ್ಲಿ ಆಂಧ್ರದ ಪರಿಗಿ ಮೂಲದ ಬೈಕ್ ಸವಾರ ಕಾರ್ತಿಕ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಬೈಕ್ ಸವಾರ ರವಿಕುಮಾರ್ ಅವರ ಕಾಲು ಮುರಿದಿದೆ. ಗಾಯಾಳು ಗೌರಿಬಿದನೂರು ಮೂಲದ ರವಿಕುಮಾರ್ ರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಕಾರ್ತಿಕ್ ಬೆಂಗಳೂರಿನಲ್ಲಿ ಮೆಡಿಕಲ್ ರೆಪ್ರಿಸೆಂಟೀವ್ ಆಗಿ ಕೆಲಸ ಮಾಡುತ್ತಿದ್ದು, ಹಬ್ಬದ ಪ್ರಯುಕ್ತ ಸ್ವಗ್ರಾಮ ಆಂಧ್ರಕ್ಕೆ ಬಂದಿದ್ದರು. ಕಳೆದ ರಾತ್ರಿಯಷ್ಟೇ ಮಗನ ಬರ್ತ್‍ಡೇ ಆಚರಣೆ ಮಾಡಿದ್ದ ಮೃತ ಕಾರ್ತಿಕ್, ಮಗ ಹಾಗೂ ಪತ್ನಿಯನ್ನ ಸ್ವಗ್ರಾಮದಲ್ಲೇ ಬಿಟ್ಟು ಬೆಂಗಳೂರಿಗೆ ಬೈಕ್ ನಲ್ಲಿ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement