Thursday, 18th July 2019

ಬೆಂಗಳೂರು ಸೇರಿ ಹಲವೆಡೆ ಇಂದು ಹೈವೇ ಬಂದ್ – ರಾಜ್ಯಾದ್ಯಂತ ರಸ್ತೆಗಿಳಿಯಲಿದ್ದಾರೆ ರೈತರು

ಬೆಂಗಳೂರು: ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ರೈತರು ಇಂದು ಬೆಳಗ್ಗೆಯಿಂದಲೇ ಪ್ರತಿಭಟನೆಗೆ ಇಳಿಯಲಿದ್ದಾರೆ.

2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ತೃಪ್ತಿದಾಯಕ ಬೆಲೆ ನೀಡಬೇಕು. ಇಂತಿಷ್ಟು ದಿನದೊಳಗೆ ಪಾವತಿಸಬೇಕು. ಹಾಗೂ ರೈತರಿಗೆ ತೃಪ್ತಿದಾಯಕವಲ್ಲದಿದ್ದರೆ ಕೋರ್ಟ್‍ಗೆ ಹೋಗಬಹುದಾಗಿತ್ತು. ಆದ್ರೆ ಈ ಕಾಯ್ದೆಗೆ ತಿದ್ದುಪಡಿ ಮಾಡಿರುವ ಕುಮಾರಸ್ವಾಮಿ ಸರ್ಕಾರ, ರೈತರಿಗೆ ದ್ರೋಹ ಬಗೆದು ಉದ್ಯಮಿಗಳ ಪರ ನಿಂತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಕಾಂಗ್ರೆಸ್‍ನ ಅವಧಿಯ ಈ ಯೋಜನೆ ಕೈಬಿಡಲು ಕಾಂಗ್ರೆಸ್‍ನವರು ಹೇಗೆ ಒಪ್ಪಿದ್ದಾರೆ ಎನ್ನುವುದು ರೈತರ ಮೊದಲ ಪ್ರಶ್ನೆಯಾಗಿದೆ.

ಎಲ್ಲೆಲ್ಲಿ ಪ್ರತಿಭಟನೆ?
ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ಬೊಮ್ಮಸಂದ್ರದ ಸಮೀಪದ ರಾಷ್ಟ್ರೀಯ ಹೆದ್ದಾರಿ, ದೇವನಹಳ್ಳಿ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ರಾಷ್ಟ್ರೀಯ ಹೆದ್ದಾರಿ, ಮೈಸೂರು, ಮಂಡ್ಯ, ರಾಮನಗರ ಭಾಗದ ರಾಷ್ಟ್ರೀಯ ಹೆದ್ದಾರಿ, ಬಳ್ಳಾರಿ, ಹಾವೇರಿ, ಬೆಳಗಾವಿ ಭಾಗದ ರಾಷ್ಟ್ರೀಯ ಹೆದ್ದಾರಿ, ದಾವಣಗೆರೆ, ಸುತ್ತಮುತ್ತ ಇರುವ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗುವ ಸಾಧ್ಯತೆಯಿದೆ.

ಅನ್ನದಾತರ ಬೇಡಿಕೆಗಳು ಏನು?
ಭೂಸ್ವಾಧೀನ ಕಾಯಿದೆ ಜಾರಿಗೆ ರೈತರ ಒಪ್ಪಿಗೆ ಕಡ್ಡಾಯವಾಗಿ ಪಡೆಯಬೇಕು. ಭೂಸ್ವಾಧೀನವು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿಗೆ ನಾಲ್ಕು ಪಟ್ಟು ಬೆಲೆ ನೀಡಬೇಕು. ನಗರ ಪ್ರದೇಶವಾಗಿದ್ದರೆ ಎರಡು ಪಟ್ಟು ಬೆಲೆ ನೀಡಬೇಕು. ಉದ್ದೇಶಿತ ಯೋಜನೆಗೆ 3 ವರ್ಷಗಳಲ್ಲಿ ಭೂಮಿ ಬಳಸಬೇಕು. ಇಲ್ಲದಿದ್ದರೆ 5 ವರ್ಷಗಳಲ್ಲಿ ರೈತನಿಗೆ ಭೂಮಿ ವಾಪಸ್ ಕೊಡಬೇಕು. ರಾ.ಹೆ. 4ರ ಹಳ್ಳಿಗಳಿಗೆ ಓವರ್ ಬ್ರಿಡ್ಜ್, ಯೂ ಟರ್ನ್, ಸರ್ವಿಸ್ ರಸ್ತೆ ಕಲ್ಪಿಸಬೇಕು. ಸಾಲ ಮನ್ನಾದ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ, ಈ ಬಗ್ಗೆ ವಿವರ ನೀಡಬೇಕು. ಬರ ಪರಿಹಾರ, ನೀರಾವರಿ ಸಮಸ್ಯೆ ಬಗ್ಗೆ ಸರ್ಕಾರ ಶೀಘ್ರ ಸ್ಪಂದಿಸಬೇಕು.

Leave a Reply

Your email address will not be published. Required fields are marked *