ಹಾವೇರಿ: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆರಂಭವಾಗಿದೆ. ಉತ್ತಮ ಮಳೆಯಿಂದ ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಕೃಷಿ ಪ್ರದಾನವಾದ ಹಾವೇರಿ (Haveri) ಜಿಲ್ಲೆಯಲ್ಲಿ ರೈತರು ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ಬಳಿಕ ಅನ್ನದಾತರು ಬಿತ್ತನೆ ಬೀಜ (Seeds) ವಿತರಣೆ ಕೇಂದ್ರದ ಮುಂದೆ ರಾತ್ರಿಯಿಡಿ ಮಲಗಿದ್ದಾರೆ. ಕೆಲವೆಡೆ ಬೆಳಿಗ್ಗೆಯಿಂದ ಕ್ಯೂ ನಿಂತು ಬಿತ್ತನೆ ಬೀಜ ಪಡೆಯುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಶುರುವಾಗಿದೆ. ಜಿಲ್ಲೆಯ ಬಹುತೇಕ ರೈತರು ಮುಂಗಾರು ಬಿತ್ತನೆಗೆ ಈಗಾಗಲೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಭೂಮಿ ಬಿತ್ತನೆಗೆ ಸಜ್ಜುಗೊಳಿಸಿರುವ ರೈತರು, ಬಿತ್ತನೆ ಬೀಜ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಜಿಲ್ಲೆಯ ತವರಮೆಳ್ಳಿಹಳ್ಳಿ, ಸವಣೂರು ಪಟ್ಟಣ, ಹಾವೇರಿ ನಗರ ಸೇರಿದಂತೆ ಹಲವೆಡೆ ಬಿತ್ತನೆ ಬೀಜ ಸಿಗುತ್ತಿಲ್ಲ. ತವರಮೆಳ್ಳಿಹಳ್ಳಿಯಲ್ಲಂತೂ ರೈತರು ರಾತ್ರಿಯೇ ಬಂದು ಬಿತ್ತನೆ ಬೀಜ ವಿತರಣೆ ಕೇಂದ್ರದ ಮುಂದೆ ಜಾಗರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಚೊಚ್ಚಲ ಭೇಟಿ – ಇಂದು ನಾಯಕರೊಂದಿಗೆ ಸಭೆ
ಕಳೆದ ಬಾರಿ ಮೆಕ್ಕೆಜೋಳ ಬೆಳೆದು ನಷ್ಟ ಅನುಭವಿಸಿರುವ ರೈತರು ಈ ಬಾರಿ ಸೋಯಾಬಿನ್ ಮತ್ತು ಶೇಂಗಾ ಬಿತ್ತನೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸೋಯಾಬಿನ್ ಮತ್ತು ಶೇಂಗಾ ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದಿದ್ದಾರೆ. ಆದರೆ ಹಾವೇರಿ ನಗರ ಸೇರಿದಂತೆ ಹಲವೆಡೆ ರೈತರು ಕೇಳಿದ ಕಂಪನಿಯ ಸೋಯಾಬಿನ್ ಬೀಜಗಳು ಸಿಗುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ ಕೊರತೆ ಇಲ್ಲ ಅನ್ನುತ್ತಾರಾದರೂ ರೈತರಿಗೆ ಬೇಕಾದ ಕಂಪನಿಯ ಬೀಜಗಳು ಸಿಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಮಳೆ | ಇಂದು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಹೀಗಾಗಿ ತಮಗೆ ಬೇಕಾದ ಕಂಪನಿಯ ಬಿತ್ತನೆ ಬೀಜ ಸಿಗಲಿ ಅಂತಾ ರೈತರು ರಾತ್ರಿಯಿಡಿ ಬಿತ್ತನೆ ಬೀಜ ಕೇಂದ್ರದ ಮುಂದೆ ಕ್ಯೂ ನಿಂತಿದ್ದಾರೆ. ಕೆಲವು ಕಡೆಗಳಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದಿರುವ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ಹಾವೇರಿ ನಗರದಲ್ಲಿ ಬಿತ್ತನೆ ಬೀಜ ವಿತರಣೆ ಕೇಂದ್ರದ ಮುಂದೆ ರೈತರ ದಟ್ಟನೆ ನಿಯಂತ್ರಣಕ್ಕೆ ಟೋಕನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಿತ್ತನೆ ಬೀಜ ಖರೀದಿಗೆ ಬರುವ ರೈತರಿಗೆ ಟೋಕನ್ ನೀಡಿ, ಕೇಂದ್ರದವರು ಟೋಕನ್ ಸಂಖ್ಯೆ ಕೂಗಿ ಕರೆದು ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಟ್ರಂಪ್ ಇರುವಾಗಲೇ ಶ್ವೇತ ಭವನದ ಬಳಿ ಗುಂಡಿನ ದಾಳಿ – ಬಂದೂಕುಧಾರಿ ಸಾವು
ಪ್ರಸಕ್ತ ವರ್ಷ ಮುಂಗಾರು ಪೂರ್ವ ಉತ್ತಮ ಮಳೆಯಾಗಿದೆ. ಹೀಗಾಗಿ ಮುಂಗಾರು ಬಿತ್ತನೆಗೆ ರೈತರು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪೆಟ್ರೋಲ್ ಡಿಸೇಲ್ ಪರದಾಟದ ನಡುವೆಗೆ ಈಗ ಹಾವೇರಿ ಜಿಲ್ಲೆಯ ರೈತರು ಸೋಯಾಬೀನ್ ಬಿತ್ತನೆ ಬೀಜ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಇಲಾಖೆ ಹಾಗೂ ಸರ್ಕಾರ ರೈತರಿಗೆ ಬೇಕಾದ ಕಂಪನಿಯ ಹಾಗೂ ಬೇಕಾದ ಬಿತ್ತನೆ ಬೀಜ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆಗಳು ಭಾರತಕ್ಕೆ ಪೆಟ್ಟು ಕೊಟ್ಟಿದ್ಹೇಗೆ? ದೇಶ ಎದುರಿಸುತ್ತಿರೋ ಬಿಕ್ಕಟ್ಟುಗಳೇನು?
