ಹಾಸನ: ಕಾರ್ಖಾನೆ ಮುಚ್ಚಿದ್ದಕ್ಕೆ ನೊಂದ ರೈತರೊಬ್ಬರು ಕಬ್ಬು ಕಟಾವಿಗೆ ಬಂದರೂ ಕಟಾವು ಮಾಡದೇ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾರೆ. ಅಲ್ಲದೆ ಇದನ್ನು ವಿಡಿಯೋ ಮಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲುಪುವವರೆಗೂ ಶೇರ್ ಮಾಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಹಿರೀಬಿಳ್ತಿ ಗ್ರಾಮದ ರೈತ ರಾಮಚಂದ್ರ ಅವರು ಸುಮಾರು ಒಂದೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಆದರೆ ಸಕಾಲಕ್ಕೆ ಕಬ್ಬು ಕಟಾವು ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಚನ್ನರಾಯಪಟ್ಟಣ ತಾಲೂಕಿನ ವ್ಯಾಪ್ತಿಯ ಸಕ್ಕರೆ ಕಾರ್ಖಾನೆ ಕಳೆದ ಒಂದೂವರೆ ವರ್ಷದಿಂದ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಪಕ್ಕದ ಕೆಆರ್‍ಪೇಟೆ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವಂತೆ ಅಧಿಕಾರಿಗಳು ತಿಳಿಸಿದ್ದರು. ಕೆ.ಆರ್.ಪೇಟೆ ತಾಲೂಕಿನ ಸಕ್ಕರೆ ಕಾರ್ಖಾನೆಯವರು ನಮ್ಮ ತಾಲೂಕಿಗೆ ಮೊದಲ ಆಧ್ಯತೆ ಎಂದು ಹೇಳಿದ್ದಾರೆ.
Advertisement
Advertisement
ಇದರಿಂದಾಗಿ ರೈತ ರಾಮಚಂದ್ರ ಅವರ ಒಂದೂವರೆ ವರ್ಷದ ಕಬ್ಬು ಕಟಾವಾಗದೇ ಗದ್ದೆಯಲ್ಲೇ ಉಳಿದಿತ್ತು. ಮನನೊಂದ ರೈತ ರಾಮಚಂದ್ರ ಅವರು, ಎಷ್ಟು ಕೇಳಿಕೊಂಡರೂ ಕಬ್ಬು ಕತ್ತರಿಸಲು ಪರವಾನಗಿ ಸಿಕ್ಕಿಲ್ಲ. ಕಬ್ಬು ಗದ್ದೆಯಲ್ಲೇ ಉಳಿದರೆ ಮತ್ತಷ್ಟು ನಷ್ಟವಾಗುತ್ತದೆ ಎಂದು ಭಾನುವಾರ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾರೆ. ಈ ವಿಡಿಯೋವನ್ನು ರಾಮಚಂದ್ರ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿಎಸ್‍ವೈ ಅವರಿಗೆ ತಲುಪುವವರೆಗೂ ಈ ವಿಡಿಯೋ ಶೇರ್ ಮಾಡಿ ಎಂದು ಬರೆದು ಪೋಸ್ಟ್ ಮಾಡುವ ಮೂಲಕ ರಾಮಚಂದ್ರ ಅವರ ಮಗ ದಿನೇಶ್ ಗೌಡ ಅಸಹಾಯಕತೆ ಹೊರಹಾಕಿದ್ದಾರೆ.