ಬೀಜಿಂಗ್: ಶೂ ರಾಜಧಾನಿ (Shoe Capital) ಎಂದೇ ಹೆಸರಾದ ಆಗ್ನೇಯ ಚೀನಾದ (China) ಜಿಂಜಿಯಾಂಗ್‌ನ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ (Fire Accident) 28 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಗ್ನಿ ಅವಘಡದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಖಾನೆಯಿಂದ ಭಾರೀ ಪ್ರಮಾಣದ ಹೊಗೆ ಎದ್ದಿರುವುದು ದಾಖಲಾಗಿದೆ. ಅಲ್ಲದೇ ಛಾವಣಿ ಮೇಲೆ ಜನರು ಸಿಲುಕಿರುವುದು ಸೆರೆಯಾಗಿದೆ. ಈ ಅವಘಡದಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಧಗ ಧಗ ಧಗ – ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ ಲಾರಿ
ಬೆಂಕಿ ಹೊತ್ತಿಕೊಂಡಾಗ ಕಾರ್ಖಾನೆಯಲ್ಲಿ ಸುಮಾರು 240 ಜನರಿದ್ದರು. ಅದರಲ್ಲಿ ಹಲವರು ನಾಪತ್ತೆಯಾಗಿದ್ದಾರೆ. 200 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ನೂರಾರು ರಕ್ಷಣಾ ಕಾರ್ಯಕರ್ತರು ಜನರ ರಕ್ಷಣೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ.
ಕಾರ್ಖಾನೆಗೆ ಸಂಬಂಧಪಟ್ಟ ಕೆಲವು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಪನಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ಅವಘಡದ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ನಿರ್ಲಕ್ಷ್ಯ ತೋರಿ ಈ ಸಾವುನೋವುಗಳಿಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಗುಡುಗಿದ್ದಾರೆ. ಈ ವರ್ಷ ದೇಶದಲ್ಲಿ ಹಲವಾರು ಪ್ರಮುಖ ಕೈಗಾರಿಕೆಗಳಲ್ಲಿ ಅಪಘಾತಗಳು ಸಂಭವಿಸಿವೆ. ಇವುಗಳಿಂದ ಚೀನಾದ ಅಧಿಕಾರಿಗಳು ಸುರಕ್ಷತಾ ಕ್ರಮದ ಪಾಠ ಕಲಿಯಬೇಕು. ಕಠಿಣ ಮತ್ತು ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಶೂ ರಾಜಧಾನಿ
ಫುಜಿಯಾನ್ ಪ್ರಾಂತ್ಯದಲ್ಲಿರುವ ಜಿಂಜಿಯಾಂಗ್‌ನ್ನು ಚೀನಾದ ʻಶೂ ರಾಜಧಾನಿʼ ಎಂದು ಕರೆಯಲಾಗುತ್ತದೆ. ವಿಶ್ವದ ಕ್ರೀಡಾ ಶೂಗಳಲ್ಲಿ 20% ಇಲ್ಲಿ ತಯಾರಿಸಲಾಗುತ್ತದೆ. ಇದೇ ಕಾರಣಕ್ಕೆ ಈ ಹೆಸರು ಬಂದಿದೆ.
ನವೆಂಬರ್‌ನಲ್ಲಿ ಹಾಂಗ್ ಕಾಂಗ್‌ನ ಹಲವಾರು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡು 168 ಜನ ಸಾವನ್ನಪ್ಪಿದ್ದರು. ನಂತರ ಚೀನಾ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅವಘಡ ತಡೆಗಟ್ಟುವ ಅಭಿಯಾನವನ್ನು ಪ್ರಾರಂಭಿಸಿತ್ತು. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಚಿರತೆ ಆತಂಕ: ರಾತ್ರಿ, ಮುಂಜಾನೆ ಜನವಸತಿ ಪ್ರದೇಶದಲ್ಲೇ ಸಂಚಾರ
