– ಕುದುರೆ ರೇಸ್ ಗೆದ್ರೆ ಥಾರ್ ಗಿಫ್ಟ್
– 30 ಲಕ್ಷ ರಸಗುಲ್ಲಾ, 50 ಲಕ್ಷ ಗುಲಾಬ್ ಜಾಮೂನ್
– 10 ಸಾವಿರ ಲೀಟರ್ ಹಾಲು, 1 ಸಾವಿರ ಕೆಜಿ ಪನೀರ್ ಬಳಕೆ
ಪಾಟ್ನಾ: ಬಿಹಾರದ (Bihar MLA) ಮೊಕಾಮಾ ಶಾಸಕ ಅನಂತ್ ಸಿಂಗ್ ಅವರ ಪುತ್ರಿ (Anant Singh’s daughter) ಶಿವಾಂಗಿ ಸಿಂಗ್ ಅವರ ಮದುವೆ (Shivangi Singh’s Wedding) ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಬುಧವಾರ (ನವೆಂಬರ್ 25) ಅನಂತ್ ಸಿಂಗ್ ಅವರ ಹುಟ್ಟೂರಾದ ಬರ್ಹ್ನ ನಡ್ವಾನ್ ಗ್ರಾಮದಲ್ಲಿ ಈ ಅದ್ಧೂರಿ ವಿವಾಹ ನಡೆಯುತ್ತಿದೆ.
ಮದುವೆಯ ಸಿದ್ಧತೆಗಳು ನೋಡಿದರೆ ಎಂಥವರೂ ಒಮ್ಮೆ ಬೆರಗಾಗುವಂತಿದೆ. ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಜನರು ಈ ಮದುವೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ರಾಜಕೀಯ ನಾಯಕರು ಮತ್ತು ಸಿನಿಮಾ ತಾರೆಯರು ಸೇರಿದಂತೆ ಹಲವು ಗಣ್ಯರು ಆಗಮಿಸುತ್ತಿದ್ದಾರೆ.
ಮದುವೆ ಮನೆ ಅಕ್ಷರಶಃ ಅರಮನೆಯಂತೆ ಕಂಗೊಳಿಸುತ್ತಿದೆ. ಲಕ್ಷಾಂತರ ಜನರಿಗೆ ಕೂರಲು ಎಂಟು ಬೃಹತ್ ಪೆಂಡಾಲ್ಗಳನ್ನು ಹಾಕಲಾಗಿದೆ. ವಧು-ವರರು ಹಾರ ಬದಲಾಯಿಸಿಕೊಳ್ಳುವ ‘ಜೈಮಾಲಾ’ ವೇದಿಕೆಯನ್ನು ರಾಜಸ್ಥಾನದ ಪ್ರಸಿದ್ಧ ‘ಹವಾ ಮಹಲ್’ ಮಾದರಿಯಲ್ಲಿ 30 ಅಡಿ ಎತ್ತರಕ್ಕೆ ನಿರ್ಮಿಸಲಾಗಿದೆ. ಇನ್ನು ಹೆಲಿಕಾಪ್ಟರ್ನಲ್ಲಿ ಬರುವ ವಿಐಪಿ ಅತಿಥಿಗಳಿಗಾಗಿ ಮದುವೆ ಮೈದಾನದಲ್ಲೇ 5 ರಿಂದ 6 ಹೆಲಿಪ್ಯಾಡ್ಗಳನ್ನು ಸಿದ್ಧಪಡಿಸಲಾಗಿದೆ.
ಮದುವೆಯಲ್ಲಿ ಊಟದ ವ್ಯವಸ್ಥೆಯಂತೂ ಊಹೆಗೂ ನಿಲುಕದಂತಿದೆ. ಅತಿಥಿಗಳಿಗಾಗಿ ಸುಮಾರು 150 ಬಗೆಯ ಬಗೆಬಗೆಯ ಸಸ್ಯಾಹಾರಿ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ. ವಿಶೇಷ ಅಂದರೆ, ಬರೋಬ್ಬರಿ 30 ಲಕ್ಷ ರಸಗುಲ್ಲಾ ಮತ್ತು 50 ಲಕ್ಷ ಗುಲಾಬ್ ಜಾಮೂನ್ಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ 10 ಸಾವಿರ ಲೀಟರ್ ಹಾಲು ಮತ್ತು 1,000 ಕೆಜಿ ಪನೀರ್ ಬಳಸಲಾಗುತ್ತಿದೆ. 300ಕ್ಕೂ ಹೆಚ್ಚು ಒಲೆಗಳಲ್ಲಿ 14 ಬಾಣಸಿಗರ ತಂಡ ಹಗಲು-ರಾತ್ರಿ ಅಡುಗೆ ಸಿದ್ಧತೆಯಲ್ಲಿ ತೊಡಗಿದೆ.ಇದನ್ನೂ ಓದಿ: ಬೀದರ್ನಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವಿಶ್ವಪ್ರಸಿದ್ಧ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ ಚಾಲನೆ
ಈ ಮದುವೆಯ ಮತ್ತೊಂದು ದೊಡ್ಡ ಆಕರ್ಷಣೆ ಎಂದರೆ ಕುದುರೆ ಓಟದ ಸ್ಪರ್ಧೆ. ಮದುವೆ ಸಂಭ್ರಮದ ನಡುವೆ ಬುಧವಾರ ಭರ್ಜರಿ ಕುದುರೆ ರೇಸ್ ಆಯೋಜಿಸಲಾಗಿದೆ. ಇದಕ್ಕಾಗಿ 11 ಬಿಘಾ ಜಾಗದಲ್ಲಿ ವಿಶೇಷ ಟ್ರ್ಯಾಕ್ ಸಿದ್ಧಪಡಿಸಲಾಗಿದ್ದು, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ನಿಂದ 50ಕ್ಕೂ ಹೆಚ್ಚು ಸವಾರರು ತಮ್ಮ ಕುದುರೆಗಳೊಂದಿಗೆ ಬಂದಿದ್ದಾರೆ. ಕಳೆದ 15 ದಿನಗಳಿಂದ ಬರೂದ್, ಲಾಲ್ ಬಾದ್ಶಾ, ರಾಕೆಟ್, ಸಿಕಂದರ್ನಂತಹ ಹೆಸರಾಂತ ಕುದುರೆಗಳು ಇಲ್ಲಿ ಅಭ್ಯಾಸ ನಡೆಸುತ್ತಿವೆ. ಗೆದ್ದವರಿಗೆ ಬಂಪರ್ ಬಹುಮಾನವಿದ್ದು, ಮೊದಲ ಬಹುಮಾನವಾಗಿ ‘ಮಹೀಂದ್ರಾ ಥಾರ್’ ಕಾರು, ಎರಡನೇ ಬಹುಮಾನವಾಗಿ ಬೈಕ್ ಮತ್ತು ಮೂರನೇ ಬಹುಮಾನವಾಗಿ ಸ್ಕೂಟರ್ ನೀಡಲಾಗುತ್ತಿದೆ. ಇದನ್ನೂ ಓದಿ: ಪರಿಸರವಾದಿಗಳ ಹೋರಾಟಕ್ಕೆ ಮಣಿದ ಸರ್ಕಾರ – ಲಾಲ್ಬಾಗ್ನಲ್ಲಿ ಸುರಂಗ ಮಾರ್ಗ ನಿರ್ಮಾಣ ಇಲ್ಲ
