ಬೆಂಗಳೂರು: ರಾಜಧಾನಿ ಬೆಂಗಳೂರಿನ(Bengaluru) ಜನ ವಸತಿ ಪ್ರದೇಶಗಳಲ್ಲಿ ಚಿರತೆ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ನಗರದ ಬ್ಯಾಡರಹಳ್ಳಿ(Byadarahalli) ವ್ಯಾಪ್ತಿಯಲ್ಲಿ ಚಿರತೆಯೊಂದು ಸಾರ್ವಜನಿಕರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.
ಬ್ಯಾಡರಹಳ್ಳಿಯ ಭಾರತ್ ನಗರದಲ್ಲಿ ಗುರುವಾರ ರಾತ್ರಿ ಮತ್ತು ಇಂದು ಮುಂಜಾನೆ ಮತ್ತೆ ಒಂಟಿ ಚಿರತೆ(Leopard) ಕಾಣಿಸಿಕೊಂಡಿದ್ದು, ಇಡೀ ಏರಿಯಾದ ಜನರು ಬೆಚ್ಚಿ ಬಿದ್ದಿದ್ದಾರೆ. ನಿನ್ನೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಚಿರತೆಯ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸಿಬ್ಬದಿ ಕೇವಲ ಸಿಡಿಮದ್ದುಗಳನ್ನು ಸಿಡಿಸಿದ್ದರು.
ಅರಣ್ಯ ಇಲಾಖೆಯ ಕಣ್ಣಿಗೆ ಮಣ್ಣೆರಚಿರುವ ಚಿರತೆ, ನಿನ್ನೆ ರಾತ್ರಿ 9 ಗಂಟೆಗೆ ಹಾಗೂ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅದೇ ಜಾಗದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಚಿರತೆ ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದೆ. ಇದನ್ನೂ ಓದಿ: ಇಂದು ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ
ಚಿರತೆ ಕಾಣಿಸಿಕೊಂಡಿರುವ ಭಾರತ್ ನಗರ ಸಂಪೂರ್ಣ ಜನವಸತಿ ಪ್ರದೇಶವಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಇಮ್ಮಡಿಯಾಗಿದೆ. ರಾತ್ರಿ ಹಾಗೂ ಮುಂಜಾನೆ ವೇಳೆ ಚಿರತೆ ಸಂಚಾರ ಮಾಡುತ್ತಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮಕ್ಕಳನ್ನು ಹೊರಗೆ ಕಳುಹಿಸಲು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಚಿರತೆ ಓಡಾಟದ ಸಿಸಿಟಿವಿ ದೃಶ್ಯಗಳು ಲಭ್ಯವಾಗುತ್ತಿದ್ದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಇಂದು ಬೆಳಿಗ್ಗೆ 9 ಗಂಟೆಯ ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಮತ್ತೆ ಬೃಹತ್ ಕಾರ್ಯಾಚರಣೆ ಆರಂಭಿಸಲಿದ್ದಾರೆ.
ಮೊದಲು ಚಿರತೆ ಕಾಣಿಸಿಕೊಂಡಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಿ ಹುಡುಕಾಟ ನಡೆಸಲಾಗುವುದು. ಕೂಂಬಿಂಗ್ ವೇಳೆ ಚಿರತೆ ಪತ್ತೆಯಾಗದಿದ್ದರೆ, ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಮುಖ ಸ್ಥಳಗಳಲ್ಲಿ ಬೋನು ಇಟ್ಟು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.

