– ಇರಾನ್ ವಿರುದ್ಧ ದಾಳಿಗೆ ಅಮೆರಿಕವನ್ನು ಒಪ್ಪಿಸಿದ್ದ ಇಸ್ರೇಲ್
– ಸಂಚಿನ ವಿವರಗಳನ್ನು ಪರಿಶೀಲಿಸುತ್ತಿರುವ ಸಿಐಎ
ವಾಷಿಂಗ್ಟನ್: ಇರಾನ್ (Iran) ಜೊತೆಗೆ ಕದನ ವಿರಾಮ ಘೋಷಿಸಿ ಕೆಲವೇ ದಿನಗಳು ಕಳೆಯುವ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಯುದ್ಧದ ಬೆಂಕಿ ಉಗುಳಲು ಸಜ್ಜಾಗಿದ್ದಾರೆ. ಶಾಂತಿ ಮಾತುಕತೆಯ ಹಾದಿಯಲ್ಲಿದ್ದ ಟ್ರಂಪ್ ದಿಢೀರನೆ ಇರಾನ್ ವಿರುದ್ಧ ಭೀಕರ ದಾಳಿಯ ಮುನ್ಸೂಚನೆ ನೀಡಲು ಇಸ್ರೇಲ್ ನೀಡಿದ ಒಂದು ಸ್ಫೋಟಕ ಸುಳಿವೇ ಕಾರಣ.
ಟ್ರಂಪ್ ಅವರನ್ನು ಜಾಗತಿಕ ಮಟ್ಟದಲ್ಲಿ ಹತ್ಯೆ ಮಾಡಲು ಇರಾನ್ ಹೊಸದೊಂದು ಅತ್ಯಂತ ರಹಸ್ಯ ಹಾಗೂ ನಿರ್ದಿಷ್ಟ ಸಂಚು (Kill Plot) ರೂಪಿಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸ್ಸಾದ್(Mossad) ಬಹಿರಂಗಪಡಿಸಿತ್ತು. ಟ್ರಂಪ್ ಬೆನ್ನಿಗೆ ನಿಂತು ಇಸ್ರೇಲ್ ನೀಡಿದ ಆ ರಹಸ್ಯ ಮಾಹಿತಿ ಇರಾನ್‌ನ ಇಡೀ ಕಾರ್ಯತಂತ್ರವನ್ನೇ ಉಲ್ಟಾ ಮಾಡಿದ್ದು, ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಈ ಮಹತ್ವದ ಗುಪ್ತಚರ ಮಾಹಿತಿಯನ್ನು ಇಸ್ರೇಲ್ ನೇರವಾಗಿ ಅಮೆರಿಕದೊಂದಿಗೆ (USA) ಹಂಚಿಕೊಂಡಿದ್ದು, ಇದು ಇರಾನ್ ವಿರುದ್ಧ ಅಮೆರಿಕ ಮತ್ತೊಮ್ಮೆ ಬೃಹತ್ ಮಿಲಿಟರಿ ದಾಳಿ ನಡೆಸುವಂತೆ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಟ್ರಂಪ್ ಅವರ ಮೇಲೆ ದಾಳಿ ಮಾಡಲು ಇರಾನ್ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂಬ ಸುಳಿವು ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಮೊದಲೇ ಸಿಕ್ಕಿತ್ತು. ಆದರೆ ಇಸ್ರೇಲ್ ಇತ್ತೀಚೆಗೆ ಒದಗಿಸಿದ ಮಾಹಿತಿ ಮಾತ್ರ ಅತ್ಯಂತ ಹೊಸದಾಗಿತ್ತು. ಇರಾನ್ ಜಾರಿಗೊಳಿಸಲು ಯೋಜಿಸಿದ್ದ ನಿರ್ದಿಷ್ಟ ಹಾಗೂ ಅಪಾಯಕಾರಿ ಹತ್ಯೆ ಸಂಚಿನ ವಿವರಗಳನ್ನು ತಿಳಿದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಶಾಕ್‌ಗೆ ಒಳಗಾಗಿತ್ತು ಎಂದು ವರದಿಯಾಗಿದೆ.
ಇರಾನ್ ಮತ್ತು ಅಮೆರಿಕ ನಡುವೆ ಸದ್ಯ ಕದನ ವಿರಾಮ (Ceasefire) ಒಪ್ಪಂದಗಳು ಹಳಿ ತಪ್ಪುತ್ತಿರುವ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಇಸ್ರೇಲ್ ನೀಡಿದ ಈ ಮಾಹಿತಿಯು, ಇರಾನ್ ಮೇಲಿನ ಮಿಲಿಟರಿ ಕ್ರಮವನ್ನು ತೀವ್ರಗೊಳಿಸಲು ಡೊನಾಲ್ಡ್ ಟ್ರಂಪ್ ಅವರ ಮನವೊಲಿಸುವಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಮುಖ ಅಸ್ತ್ರವಾಯಿತು ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ – ಇರಾನ್‌ನ 90 ಸ್ಥಳಗಳ ಮೇಲೆ ಅಮೆರಿಕ ದಾಳಿ

ಇಸ್ರೇಲ್ ಯಾವ ಮಾಹಿತಿ ನೀಡಿತ್ತು?
ಇಸ್ರೇಲ್ ಅಮೆರಿಕದ ಜೊತೆ ಯಾವ ಮಾಹಿತಿಯನ್ನು ಹಂಚಿಕೊಂಡಿದೆ ಎನ್ನುವುದರ ಬಗ್ಗೆ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಸುದ್ದಿ ಪ್ರಕಟವಾಗಿಲ್ಲ. ಆದರೆ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಡಿಯಲ್ಲಿ ಬರುವ ಕುಡ್ಸ್ ಫೋರ್ಸ್ ಅತ್ಯಂತ ಪ್ರಮುಖ ಅಮೆರಿಕನ್ ಅಧಿಕಾರಿಗಳು ಹಾಗೂ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಲು ’ಮುಖ್ತಾರ್’ (Mukhtar) ಎಂಬ ಹೊಸ ಹತ್ಯಾ ದಳವನ್ನು ರಚಿಸಿದೆ.
ಈ ‘ಮುಖ್ತಾರ್’ ಘಟಕವು ಟ್ರಂಪ್ ಅವರ ಮೇಲೆ ದಾಳಿ ನಡೆಸಲು ಮೆಕ್ಸಿಕನ್ ಡ್ರಗ್ ಕಾರ್ಟೆಲ್‌ಗಳು (ಮಾದಕ ದ್ರವ್ಯ ಮಾಫಿಯಾ ಜಾಲ) ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಇರಾನಿ ಪ್ರಜೆಗಳನ್ನು ಸಂಪರ್ಕಿಸಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇಸ್ರೇಲ್ ನೀಡಿದ ಈ ಎಚ್ಚರಿಕೆಯು ಯಾವುದೇ ಸಾಮಾನ್ಯ ಬೆದರಿಕೆಯಾಗಿರದೆ, ಅತ್ಯಂತ ನಿರ್ದಿಷ್ಟವಾದ ಸಂಚಿನ ವಿವರಗಳನ್ನು ಒಳಗೊಂಡಿದೆ. ಆದಾಗ್ಯೂ, ಈ ಮಾಹಿತಿಯ ಸಂಪೂರ್ಣ ನಿಖರತೆಯನ್ನು ಅಮೆರಿಕದ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಇನ್ನೂ ಪರಿಶೀಲಿಸುತ್ತಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸಾವಿನ 4 ತಿಂಗಳ ಬಳಿಕ ನೆರವೇರಿದ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಅಂತ್ಯಕ್ರಿಯೆ
ಟ್ರಂಪ್ ಬಹಿರಂಗ ಹೇಳಿಕೆ:
ಈ ಹಿಂದೆ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್ ನಾನು ಅವರ ಹಿಟ್ ಲಿಸ್ಟ್‌ನಲ್ಲಿ ಇದ್ದೇನೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಆದರೆ ಟರ್ಕಿಯ ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಸ್ವತಃ ಡೊನಾಲ್ಡ್ ಟ್ರಂಪ್ ಅವರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಾನು ಇರಾನ್‌ನ ಹಿಟ್‌ಲಿಸ್ಟ್‌ನಲ್ಲಿ ‘ನಂಬರ್ ಒನ್’ ಟಾರ್ಗೆಟ್ ಆಗಿದ್ದೇನೆ. ಅವರ ಪ್ರತಿಯೊಂದು ಪಟ್ಟಿಯಲ್ಲೂ ನನ್ನ ಹೆಸರಿದೆ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಇರಾನ್‌ನ ಕ್ಷಿಪಣಿ ಅಥವಾ ಸಂಭಾವ್ಯ ದಾಳಿಯ ಭೀತಿಯಿಂದಾಗಿ, ಅಮೆರಿಕದ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಟ್ರಂಪ್ ಅವರು ಕತಾರ್ ಉಡುಗೊರೆಯಾಗಿ ನೀಡಿದ್ದ ಹೊಸ ಬೋಯಿಂಗ್ ವಿಮಾನವನ್ನು ಹತ್ತದೆ ಕೊನೆ ಕ್ಷಣದಲ್ಲಿ ಹಳೆಯ ಏರ್ ಫೋರ್ಸ್ ಒನ್ ವಿಮಾನದ ಮೂಲಕ ಟರ್ಕಿಯಿಂದ ವಾಷಿಂಗ್ಟನ್‌ಗೆ ಪ್ರಯಾಣ ಬೆಳೆಸಲು ಇದು ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

