ಫಾಕ್ಸ್‌ಬರೋ: ಫಿಫಾ ವಿಶ್ವಕಪ್ 2026ರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫ್ರಾನ್ಸ್ (France) ತಂಡವು ಮೊರಾಕ್ಕೋ(Morocco) ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್‌ಗೆ (Semi Final) ಪ್ರವೇಶಿಸಿದೆ.
ಇದರೊಂದಿಗೆ ಫ್ರಾನ್ಸ್ ಸತತ ಮೂರನೇ ಬಾರಿಗೆ ವಿಶ್ವಕಪ್‌ನ ಅಂತಿಮ ನಾಲ್ಕರ ಘಟ್ಟವನ್ನು ತಲುಪಿದಂತಾಗಿದೆ. ಈ ಪಂದ್ಯದಲ್ಲಿ ಗೋಲು ಹೊಡೆಯುವ ಮೂಲಕ ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಕಿಲಿಯನ್ ಎಂಬಾಪೆ (Kylian Mbapp) ವಿಶ್ವದಾಖಲೆ ಬರೆದಿದ್ದಾರೆ.
ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ರೋಮಾಂಚನಕಾರಿ ಪಂದ್ಯದ 60ನೇ ನಿಮಿಷದಲ್ಲಿ ಎಂಬಾಪೆ ಫ್ರಾನ್ಸ್ ಪರ ಮೊದಲ ಗೋಲು ಬಾರಿಸಿದರು. ಈ ಗೋಲಿನೊಂದಿಗೆ ಅವರು ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಎರಡು ಬೇರೆ ಬೇರೆ ವಿಶ್ವಕಪ್ ಆವೃತ್ತಿಗಳಲ್ಲಿ 8 ಗೋಲುಗಳನ್ನು ಗಳಿಸಿದ ವಿಶ್ವದ ಮೊದಲ ಫುಟ್‌ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಹಿಂದೆ 2022 ವಿಶ್ವಕಪ್‌ನಲ್ಲಿ ಎಂಬಾಪೆ 7 ಪಂದ್ಯಗಳಿಂದ 8 ಗೋಲ್ ಹೊಡೆದಿದ್ದರು. ಈ ಗೋಲಿನೊಂದಿಗೆ ಅವರ ಒಟ್ಟಾರೆ ವಿಶ್ವಕಪ್ ವೃತ್ತಿಜೀವನದ ಗೋಲುಗಳ ಸಂಖ್ಯೆ 20ಕ್ಕೆ ಏರಿದ್ದು, ಲಿಯೋನೆಲ್ ಮೆಸ್ಸಿ ಅವರ ಸಾರ್ವಕಾಲಿಕ ದಾಖಲೆಗಿಂತ ಕೇವಲ ಒಂದು ಗೋಲು ಹಿಂದಿದ್ದಾರೆ.
The name is Kylian MBAPPE!!!!💫🔥 pic.twitter.com/rnc19imjrt
— Miss ADEL🦋🦚🌹 (@a_derll) July 9, 2026
ಪಂದ್ಯದ ಮೊದಲಾರ್ಧದಲ್ಲಿ ಆಫ್ರಿಕಾದ ಬಲಿಷ್ಠ ತಂಡವಾದ ಮೊರಾಕ್ಕೋ ಅತ್ಯುತ್ತಮ ರಕ್ಷಣಾತ್ಮಕ (Defensive) ಆಟ ಪ್ರದರ್ಶಿಸಿತು. ಪಂದ್ಯದ 28ನೇ ನಿಮಿಷದಲ್ಲಿ ಫ್ರಾನ್ಸ್‌ಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಮೊರಾಕ್ಕೋದ ಗೋಲ್‌ಕೀಪರ್ ಯಾಸಿನ್ ಬೌನೊ ತಡೆದರು. ಹೀಗಾಗಿ ಮೊದಲಾರ್ಧವು 0-0 ಗೋಲುಗಳಿಂದ ಸಮಬಲಗೊಂಡಿತ್ತು. ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಯಾರೂ ನಿರ್ಮಿಸದ ವಿಶಿಷ್ಟ ದಾಖಲೆ ಬರೆದ ಮೆಸ್ಸಿ
ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ಜುಲೈ 14 ರಂದು ಡಲ್ಲಾಸ್‌ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ಅಥವಾ ಬೆಲ್ಜಿಯಂ ತಂಡಗಳ ನಡುವಿನ ವಿಜೇತರನ್ನು ಎದುರಿಸಲಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿದ್ದ ಮೊರಾಕ್ಕೋ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಮುಗಿಸಿದೆ. ಫ್ರಾನ್ಸ್ ತಂಡದ ಈ ಭರ್ಜರಿ ಗೆಲುವು ಮತ್ತು ಎಂಬಾಪೆ ಅವರ ಐತಿಹಾಸಿಕ ಸಾಧನೆಗೆ ವಿಶ್ವಾದ್ಯಂತ ಫುಟ್‌ಬಾಲ್ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
