ಬೆಳಗಾವಿ: ರಸ್ತೆ ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸೈನಿಕನಿಗೆ ಗ್ಲೂಕೋಸ್ ಬಾಟಲ್‌ನಲ್ಲಿ ವಿಷಹಾಕಿ ಕೊಲೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದಿದೆ.
ಮಾಜಿ ಸೈನಿಕ ಸಂದೀಪ್ ಮಾಂಜರಿ (45) ಕೊಲೆಯಾದ ವ್ಯಕ್ತಿ. ತನ್ನ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಮುಂದುವರೆಸಲು ಹಾಗೂ ಪತಿ ಸತ್ತರೆ 2 ಕೋಟಿ ವಿಮೆ ಹಣ ಸಿಗುತ್ತದೆ ಎನ್ನುವ ದುರಾಸೆಗೆ ಬಿದ್ದು ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ಸಂದೀಪ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೂರು ತಿಂಗಳ ಹಿಂದೆ ಹುಕ್ಕೇರಿಯ ದೇವಿ ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿರುವಾಗ ಸಂದೀಪ್‌ಗೆ ರಸ್ತೆ ಅಪಘಾತವಾಗಿತ್ತು. ಬಳಿಕ ಸಂದೀಪ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಅಪಘಾತವನ್ನೇ ಕೊಲೆಗೆ ದಾಳವಾಗಿಸಿಕೊಂಡ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಗ್ಲೂಕೋಸ್ ಬಾಟಲ್‌ನಲ್ಲಿ ವಿಷ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸಾವಿನ ಬಗ್ಗೆ ಅನುಮಾನ ಬಂದ ಹಿನ್ನೆಲೆ ಪೊಲೀಸರು ಪ್ರಕರಣದ ತನಿಖೆಗಿಳಿದಾಗ ಹಂತಕಿಯ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಹೂತಿದ್ದ ಶವವನ್ನು ಬೆಳಗಾವಿ ಎಸಿ ಶ್ರವಣಕುಮಾರ ಸಮ್ಮುಖದಲ್ಲಿ ಹೊರತೆಗೆಯಲಾಗಿದೆ. ಶವದಲ್ಲಿನ ಅವಶೇಷಗಳನ್ನು ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಎಫ್‌ಎಸ್‌ಎಲ್‌ನಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಪೊಲೀಸರು ಸುಮಾ ಮಾಂಜರಿ ಹಾಗೂ ಪ್ರಿಯಕರ ಪುಂಡಲೀಕ ಇಬ್ಬರನ್ನೂ ತೀವ್ರ ವಿಚಾರಣೆ ನಡೆಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಸಾವಿಗೆ ಮುಖ್ಯ ಕಾರಣವೇನೆಂದು ಸ್ಪಷ್ಟವಾಗಲಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಘಟನೆಯ ಸಂಬAಧ ಪ್ರಕರಣ ದಾಖಲಾಗಿದೆ.
