– ಸ್ವಯಂಪ್ರೇರಿತ ಪ್ರಕರಣ ದಾಖಲು, ಗುತ್ತಿಗೆದಾರನ ವಿರುದ್ಧವೂ ಎಫ್‌ಐಆರ್
ತುಮಕೂರು: ಬರಿಗೈಯಲ್ಲಿ ಮಲ ಬಾಚುವ ಮತ್ತು ಹೊರುವ ಪದ್ದತಿ ನಿಷೇಧಿಸಿದ್ದರೂ, ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ನವೀಕರಣದ ವೇಳೆ ಬರಿಗೈಯಲ್ಲಿ ಮಲ ಬಾಚಿಸಿರುವ ಘಟನೆ ವರದಿಯಾಗಿದೆ.
ತುಮಕೂರು ನಗರದ ಸಮೀಪದಲ್ಲಿಯೇ ಇರುವ ಕೆಇಬಿ ಎಂಜಿನಿಯರ್ಸ್ (KEB Engineers) ಅಸೋಸಿಯೇಷನ್ ಕಟ್ಟಡದ ನವೀಕರಣದ ವೇಳೆ ಮಲದ ಗುಂಡಿಯನ್ನ ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಕಾರ್ಮಿಕರು ಬರಿಗೈಯಲ್ಲಿಯೇ ಸ್ವಚ್ಚಗೊಳಿಸಿ, ಬರಿ ಮೈ ನಲ್ಲಿಯೇ ಹೊತ್ತು ಹಾಕುತ್ತಿರುವ ವಿಡಿಯೋ ಸದ್ದು ಮಾಡುತ್ತಿದೆ.

ಕೆಇಬಿ ಎಂಜಿನಿಯರ್ ಒಬ್ಬರು ನಮಗೆ ಈ ಕೆಲಸ ಮಾಡುವಂತೆ ನಿಯೋಜಿಸಿದ್ದಾರೆ ಎಂದು ಸ್ವಚ್ಛತೆಗೆ ಇಳಿದಿದ್ದ ಕೆಲಸಗಾರರು ತಿಳಿಸಿದ್ದಾರೆ.
ಎಂಜಿನಿಯರ್ ಒಬ್ಬರು ಕೆಲಸಕ್ಕೆ ಹೇಳಿದ್ದರು. ಮೂರು ದಿನದಿಂದ ಕೆಲಸ ಮಾಡುತ್ತಿದ್ದೇವೆ, ಮೊದಲಿಗೆ ಮಣ್ಣು ತುಂಬಲೆಂದು ಕರೆದುಕೊಂಡು ಬಂದಿದ್ರು. ಇಲ್ಲಿಗೆ ಬಂದು ನೋಡಿದಾಗ, ಶೌಚಗುಂಡಿ ಎಂದು ತಿಳಿಯಿತು. ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ಮಾಡಬಾರದು ಅಂತಾ ನಮಗೆ ಗೊತ್ತಿರಲಿಲ್ಲ, ಇನ್ಮುಂದೆ ಇಂತಹ ಕೆಲಸಕ್ಕೆ ಕರೆದರೆ ಹೊಗೊದಿಲ್ಲ ಅಂತ ಕಾರ್ಮಿಕರು ತಮ್ಮ ಆಸಹಾಯಕತೆ ತೋಡಿಕೊಂಡಿದ್ದಾರೆ.
ಸ್ವಯಂಪ್ರೇರಿತ ಪ್ರಕರಣ ದಾಖಲು
ಇನ್ನೂ ವಿಡಿಯೋ ಆಧರಿಸಿ ವಿಚಾರಣೆ ನಡೆಸಿದ ತುಮಕೂರು ನಗರ ಪೊಲೀಸರು (Tumkur City Police) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುತ್ತಿಗೆದಾರ ಗುರುಪ್ರಸಾದ್ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ.
ಗುರುಪ್ರಸಾದ್ ಕೆಇಬಿ ಇಂಜಿನಿಯರ್ಸ್ ಸಂಘದ ಕಟ್ಟಡದ ನವೀಕರಣ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ. ಈ ಕಟ್ಟಡದ ಮಲ ಶುಚಿಗೊಳಿಸಲು ಮೂವರು ಕಾರ್ಮಿಕರನ್ನ ಬಳಕೆ ಮಾಡಿಕೊಂಡಿದ್ದಾನೆ. ಮಲ ಶುಚಿಗೊಳಿಸಲು ಯಾವುದೇ ಕೈಚೀಲಗಳು ಹಾಗೂ ಜೀವ ರಕ್ಷಣೆಯ ಸಲಕರಣೆಗಳನ್ನ ನೀಡದೆ ನಿರ್ಲಕ್ಷ ವಹಿಸಿದ್ದಾನೆ. ಈ ಆರೋಪಗಳ ಮೇಲೆ ಗುರುಪ್ರಸಾದ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಪೊಲೀಸರು. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
